





ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿದ್ದ ವಿದ್ಯಾರ್ಥಿಗಳ ಪರವಾಗಿ ಎರಡು ತಂಡಗಳು ಸಂಘರ್ಷಕ್ಕೆ ಸಿದ್ಧವಾಗಿ ಅನಪೇಕ್ಷಿತ ಘಟನಾವಳಿಗೆ ಕಾರಣವಾಗುವ ಸಾಧ್ಯತೆಯನ್ನು ಪೊಲೀಸರ ಸಕಾಲಿಕ ಮಧ್ಯೆ ಪ್ರವೇಶದಿಂದಾಗಿ ತಡೆಗಟ್ಟಿದ ಘಟನೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.



ಗುರುವಾರದಂದು ಸಾಯಂಕಾಲ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಶುಕ್ರವಾರದಂದು ಉಭಯ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರೆನ್ನುವ ಮಾಹಿತಿ ಪಡೆದ ಉಪ್ಪಿನಂಗಡಿ ಎಸೈ ರಾಜೇಶ್ ಕೆ.ವಿ. ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಕಾಲೇಜಿಗೆ ಧಾವಿಸಿ ಸಂಘರ್ಷಕ್ಕೆ ಉತ್ಸುಕರಾಗಿದ್ದ ವಿದ್ಯಾರ್ಥಿಗಳನ್ನು ಚದುರಿಸಿ, ಸಂಘರ್ಷ ನಿರತ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.





ಬಳಿಕ ಹತ್ತಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಗೆ ಅವರವರ ಹೆತ್ತವರೊಂದಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಸೂಚಿಸಿ, ಮುಚ್ಚಳಿಕೆ ಪತ್ರ ಬರೆದ ಬಳಿಕವೇ ತರಗತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಮತೀಯ ಸಂಘರ್ಷಕ್ಕೆ ಕಾರಣವಾಗಬಹುದಾಗಿದ್ದ ವಿದ್ಯಾರ್ಥಿಗಳ ವರ್ತನೆ ಪೊಲೀಸರ ಸಕಾಲಿಕ ಕ್ರಮದಿಂದ ನಿಯಂತ್ರಿಸಲ್ಪಟ್ಟಂತಾಗಿದೆ.


 
            