ಅಂಪೈರ್ ಮೇಲೆ ಹಲ್ಲೆಗೆ ಯತ್ನ : ಕ್ಷಮೆ ಕೇಳುವ ಮೂಲಕ ಬಗೆಹರಿದ ಪ್ರಕರಣ

0

ಉಪ್ಪಿನಂಗಡಿ: ಇಲ್ಲಿನ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಆಯೋಜಿಸಿದ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನಗೊಂಡ ಪ್ರೇಕ್ಷಕರಿಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿ ಹಲ್ಲೆಗೆ ಮುಂದಾದ ಘಟನೆ ನಡೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇವರ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹಲ್ಲೆಗೆ ಮುಂದಾದ ಯುವಕರು ಅಂಪೈರ್ ಅವರ ಬಳಿಕ ಕ್ಷಮೆ ಕೇಳುವ ಮೂಲಕ ಈ ಪ್ರಕರಣ ಸುಖಾಂತ್ಯಗೊಂಡಿದೆ.


ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿಯಲ್ಲಿ ಅದ್ದೂರಿಯಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಆಯೋಜಿಸಿತ್ತು. ರಾತ್ರಿ ಕಾನಾ' ಮತ್ತುಕೆಜಿಎಫ್’ ತಂಡಗಳ ಮಧ್ಯೆ ರೋಚಕ ಸೆಮಿ ಫೈನಲ್ ನಡೆಯುತ್ತಿದ್ದ ಸಂದರ್ಭ ಬ್ಯಾಟ್ಸ್‌ಮೆನ್ ಒಬ್ಬರಿಗೆ ಅಂಪೈರ್ ರೋಲನ್ ಪಿಂಟೋ ಅವರು ಎಲ್‌ಬಿಡಬ್ಲ್ಯೂ ಔಟ್ ತೀರ್ಪು ನೀಡಿದ್ದರು. ಆದರೆ ಈ ತೀರ್ಪಿಗೆ ಅಸಮಾಧಾನಗೊಂಡ ಜಸ್ಸೀನ್ ಹಾಗೂ ಶರೀಫ್ ಅವರು ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಮೈದಾನಕ್ಕೆ ನುಗ್ಗಿ ಅಂಪೈರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಕ್ರೀಡಾ ಸ್ಫೂರ್ತಿ ಮರೆತು ಈ ರೀತಿ ಮಾಡಿರುವ ಇವರ ಈ ಕೃತ್ಯಕ್ಕೆ ಕ್ರೀಡಾಭಿಮಾನಿಗಳಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಅಲ್ಲದೇ, ಈ ಬಗ್ಗೆ ರೋಲನ್ ಪಿಂಟೋ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಜಸ್ಸಿನ್ ಹಾಗೂ ಶರೀಫ್ ಅವರು ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನವರ, ರೋಲನ್ ಪಿಂಟೋ ಅವರ ಅಭಿಮಾನಿಗಳ ಸಮಕ್ಷಮ ರೋಲನ್ ಪಿಂಟೋ ಅವರಲ್ಲಿ ಕ್ಷಮೆ ಕೇಳಿದರಲ್ಲದೇ, ಕ್ರೀಡಾ ಹುಮ್ಮಸ್ಸಿನಿಂದ ಉದ್ವೇಗಕ್ಕೆ ಒಳಗಾಗಿ ನಾವು ಈ ರೀತಿ ಮಾಡಿದ್ದೇವೆ. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ತಿಳಿಸಿದರು. ಈ ಮೂಲಕ ಈ ಪ್ರಕರಣವು ಸುಖಾಂತ್ಯವಾಗಿ ಬಗೆಹರಿಯಿತು.


ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ರೋಲನ್ ಪಿಂಟೋ, ಉಬಾರ್ ಸ್ಪೋರ್ಟಿಂಗ್ ಕ್ಲಬ್ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಉಬಾರ್ ಕಪ್ ಅನ್ನು ಆಯೋಜಿಸಿತ್ತು. ಆದರೆ ಈ ನಡುವೆ ಇಂತದ್ದೊಂದು ಕೃತ್ಯ ನಡೆದಿದೆ. ಇಂತದ್ದೆಲ್ಲಾ ಘಟನೆಗಳು ನಡೆದಾಗ ಪಂದ್ಯಾಟಕ್ಕೊಂದು ಕಪ್ಪು ಚುಕ್ಕೆಯಾಗುತ್ತದೆ. ಯಾವುದೇ ಕ್ರೀಡೆಯಲ್ಲಿ ಸೋಲು- ಗೆಲುವು ಇದ್ದದ್ದೇ. ಆಗ ನಾವು ಉದ್ರೇಕರಾಗದೇ ಫಲಿತಾಂಶವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯನ್ನು ಕ್ರೀಡೆಯಾಗಿಯೇ ಉಳಿಸಿ ಬೆಳೆಸಬೇಕು. ನಾನು 45 ವರ್ಷಗಳಿಂದ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತೇನೆ. ಆದರೆ ನನಗೂ ಅಭಿಮಾನಿ ಬಳಗ ಇದ್ದಾರೆ ಎಂಬುದು ಈ ಘಟನೆಯಿಂದ ಗೊತ್ತಾಗಿದೆ. ಈಗ ಯುವಕರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. ಈ ಪ್ರಕರಣವನ್ನು ಮುಂದಕ್ಕೆ ಕೊಂಡೊಯ್ಯದೆ ಕ್ಷಮಿಸುವುದು ನನ್ನ ಧರ್ಮ. ಆದ್ದರಿಂದ ಇನ್ಯಾವತ್ತೂ ಯಾರೂ ಕೂಡಾ ಕ್ರೀಡಾಂಗಣದೊಳಗೆ ನುಗ್ಗುವುದು ಸೇರಿದಂತೆ ಇಂತಹ ಕೃತ್ಯಗಳನ್ನು ನಡೆಸಬಾರದು ಎಂದರು.


ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿ, ನಾವು ಕ್ರೀಡಾ ಸ್ಪೂರ್ತಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉದ್ದೇಶದಿಂದ ಈ ಕ್ರೀಡೆಯನ್ನು ಆಯೋಜನೆ ಮಾಡಿದ್ದೆವು. ಉಬಾರ್ ಸ್ಪೋರ್ಟಿಂಗ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಇದಕ್ಕಾಗಿ ಈ ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನವಾಗಿತ್ತು. ಎಲ್ಲರ ಸಹಕಾರದಿಂದ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟ ಯಶಸ್ಸು ಕಂಡಿದೆ. ಆದರೆ ಇದೊಂದು ಘಟನೆ ಮಾತ್ರ ಸ್ವಲ್ಪ ಬೇಸರವನ್ನು ತಂದಿದೆ. ನಾವು ಭದ್ರತೆಗೆ ಒತ್ತು ನೀಡಿದ್ದೆವು. ಆದರೆ ಸುಮಾರು 10ರಿಂದ 15 ಸಾವಿರ ಜನ ಸೇರಿದ್ದರಿಂದಾಗಿ ಇವರು ಏಕಾಏಕಿ ಮೈದಾನಕ್ಕೆ ನುಗ್ಗುವಾಗ ತಡೆಯಲು ಸಾಧ್ಯವಾಗಲಿಲ್ಲ. ಈಗ ಅವರೇ ಕ್ಷಮೆ ಕೇಳಲು ಮುಂದೆ ಬಂದಿದ್ದು, ಅಂಪೈರ್ ರೋಲನ್ ಪಿಂಟೋ ಅವರು ಕೂಡಾ ಒಪ್ಪಿದ್ದಾರೆ. ಆದ್ದರಿಂದ ಎಲ್ಲರ ಸಮಕ್ಷಮ ಅವರು ಬಂದು ರೋಲನ್ ಪಿಂಟೋ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಮುಗಿಸಲಾಗಿದೆ ಎಂದರು.


ಯಂಗ್ ಫ್ರೆಂಡ್ಸ್ ಉರ್ವ ತಂಡದ ಮಾಲಕ ತಿಲಕ್, ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಗೌರವ ಸಲಹೆಗಾರ ಯು.ಟಿ. ತೌಸೀಫ್, ಪ್ರಧಾನ ಕಾರ್ಯದರ್ಶಿ ನವಾಝ್ ಎಲೈಟ್, ಉಪಾಧ್ಯಕ್ಷರಾದ ಮುಹಮ್ಮದ್ ಇಬ್ರಾಹೀಂ, ಮನ್ಸೂರ್, ಕೋಶಾಧಿಕಾರಿ ಸಿದ್ದೀಕ್ ಹ್ಯಾಪಿ ಟೈಂಮ್ಸ್, ಕ್ರೀಡಾಕಾರ್ಯದರ್ಶಿ ಮುಹಮ್ಮದ್ ಅನೀಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here