ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ನಲ್ಲಿ ಘನ ತ್ಯಾಜ್ಯ ವಾಹನಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರಿಂದ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಜಯಪ್ರಕಾಶ್ ಬದಿನಾರು, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು ಮತ್ತು ಗೀತಾ ಮೊಗೇರ ಮೋನಡ್ಕರವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಕೋಡಿಂಬಾಡಿ ಗ್ರಾಮ ಪಂಚಾಯತ್ಗೆ ಘನ ತ್ಯಾಜ್ಯ ವಾಹನ ಬಂದಿರುವುದು ಶ್ಲಾಘನೀಯವಾಗಿದೆ. ಸದ್ರಿ ವಾಹನ ಬಂದು 8 ತಿಂಗಳು ಕಳೆದರೂ ಈ ತನಕ ಕಸ ವಿಲೇವಾರಿಗೆ ಯಾವುದೇ ಚಾಲನೆ ದೊರಕಿಲ್ಲ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು ಎಂಬಂತೆ ಘನ ತ್ಯಾಜ್ಯದ ಘಟಕ ನಿರ್ಮಾಣವಾಗದೆ ವಾಹನ ಖರೀದಿಸಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಪುತ್ತೂರು ಪಟ್ಟಣದ ಸುತ್ತಮುತ್ತ ಹಲವಾರು ಗ್ಯಾರೇಜ್ಗಳಿದ್ದರೂ ಇದನ್ನು ಬಿಟ್ಟು ಕಲ್ಲಡ್ಕದಲ್ಲಿರುವ ಗ್ಯಾರೇಜ್ನಲ್ಲಿ ವಾಹನಕ್ಕೆ ಬಾಡಿ ಕಟ್ಟಲು ಕೊಟ್ಟದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ, ಈ ಬಗ್ಗೆ ರೂ. 95.000 ಕ್ಕಿಂತ ಹೆಚ್ಚು ಕೆಲಸದ ಮಜೂರಿ ಬಿಲ್ಲು ತಯಾರಿಸುವ ತಯಾರಿ ನಡೆಯುತ್ತಿದೆ. ಬೆಳ್ಳಿಪ್ಪಾಡಿ ಗ್ರಾಮದಲ್ಲಿ 10 ಸೆಂಟ್ಸ್ ಮತ್ತು ಕೋಡಿಂಬಾಡಿ ಗ್ರಾಮದಲ್ಲಿ 13 ಸೆಂಟ್ಸ್ ಜಾಗ ಕಾದಿರಿಸಿದ್ದು ಘಟಕ ನಿರ್ಮಿಸಿರುವುದಿಲ್ಲ ಯಾಕೆ ಎಂದು ತಿಳಿಯದಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಸದಸ್ಯರ ಜೊತೆ ವಾಹನ ಚಲಾಯಿಸುವುದು ನಿಯಮ ಬಾಹಿರವಾದರೆ ಈಗಾಗಲೇ ಮೇಲೆ ಕಾಣಿಸಿದ ವಾಹನವು 1045 ಕಿ.ಮೀ. ಚಲಾಯಿಸಿದ್ದು ಕಂಡು ಬರುವುದು ಹೇಗೆ? ( 2 ಕಿ.ಮಿ. ಒಟ್ಟು). ಹಾಗೂ ಅಷ್ಟು ಕಿ.ಮೀ. ವಾಹನ ಚಲಾಯಿಸಿದ್ದು ಯಾರು ಮತ್ತು ಎಲ್ಲಿಗೆ, ಅಧ್ಯಕ್ಷರು ಅನುಮತಿ ನೀಡಿರುತ್ತಾರೆಯೇ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಅಲ್ಲದೆ, ದಿನಾಂಕ: 17/10/2022 ರಂದು ಅಧ್ಯಕ್ಷರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ವಿರುದ್ಧ ನೀಡಿರುವ ದೂರಿನ ತನಿಖೆಗೆ ಮುಂಚಿತವಾಗಿ ಮೇಲೆ ಕಾಣಿಸಿದ ನ್ಯೂನತೆಗಳ ಬಗ್ಗೆ ಪರಿಶೀಲನೆ ಮಾಡುವಂತೆ ಈ ಮೂಲಕ ನಾವು ಒಕ್ಕರೊಳಿನಿಂದ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.