ಪುತ್ತೂರು: ‘ಕೇಂದ್ರ ಸರ್ಕಾರವು ಭೂತಾನ್ನಿಂದ ಸುಮಾರು 17,000 ಟನ್ ಅಡಿಕೆ ಆಮದು ಮಾಡಿಕೊಳ್ಳುವಲ್ಲಿ ಕಾರ್ಯೋನ್ಮುಖವಾಗಿದ್ದು ಈ ನೀತಿ ಅಡಿಕೆ ಬೆಳೆಗಾರರನ್ನು ಮತ್ತೆ ಸಂಕಷ್ಟಕ್ಕೆ ದೂಡುವುದರಲ್ಲಿ ಸಂಶಯವಿಲ್ಲ.ಕೇಂದ್ರದ ಈ ನಿರ್ಧಾರದಿಂದ ರೈತರ ನಾಶವಾಗುತ್ತದೆ.ಈ ಬಗ್ಗೆ ಧ್ವನಿ ಎತ್ತಬೇಕಾದ ಈ ಭಾಗದ ಸಂಸದರಾದ ನಳಿನ್ ಕುಮಾರ್ ಕಟೀಲ್,ಶೋಭಾ ಕರಂದ್ಲಾಜೆ,ಡಿ.ವಿ ಸದಾನಂದ ಗೌಡ ಮುಂತಾದವರು ಯಾವುದೇ ಹೇಳಿಕೆಗಳನ್ನು ನೀಡದೆ ಇರುವುದು ಸಂಶಯಕ್ಕೆ ಎಡೆಮಾಡಿದೆ.ಈ ಬಗ್ಗೆ ಸರ್ಕಾರ ಎಚ್ಚೆತ್ತು ಭಾರತದಲ್ಲಿ ಬೆಳೆಯುವ ಅಡಿಕೆಗೆ ಪ್ರಾತಿನಿಧ್ಯತೆ ನೀಡಬೇಕು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಅ.18ರಂದು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಗೃಹ ಮಂತ್ರಿಗಳ ಪುತ್ರ ಜೈಷಾ ಅವರ ಒಡೆತನದ ಕಂಪೆನಿಯು ವಿದೇಶದಿಂದ ಕೃಷಿ ಉತ್ಪನ್ನಗಳನ್ನು ಕಡಿಮೆ ಬೆಳೆಯಲ್ಲಿ ಭಾರತಕ್ಕೆ ತಂದ ಲಾಭ ಮಾಡುವ ಕೆಲಸ ಮಾಡುತ್ತಿದೆ.ಅಡಿಕೆಯಲ್ಲೂ ಇದೇ ರೀತಿಯ ಕೆಲಸ ನಡೆಯುತ್ತಿರುವುದು ವಿಷಾದನೀಯ ಎಂದ ಹೇಮನಾಥ ಶೆಟ್ಟಿ ಕರಾವಳಿ ಹಾಗೂ ಮಳೆನಾಡಿನಲ್ಲಿ ಈಗಾಗಲೇ ಸುಮಾರು 14 ಲಕ್ಷದಷ್ಟು ಜನರು ಅಡಿಕೆ ಬೆಳೆಯುತ್ತಾರೆ.ಇದು ಈ ವರ್ಷದ ಧಾರಣೆಯ ಕಾರಣದಿಂದ ದ್ವಿಗುಣವಾಗುತ್ತದೆ ಹಾಗೂ ಇತರೆ ರಾಜ್ಯದಿಂದಲೂ ಜನರು ಅಡಿಕೆ ಬೆಳೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಆದ್ದರಿಂದ ಭಾರತಕ್ಕೆ ಬೇಕಾದಷ್ಟು ಅಡಿಕೆ ಬೆಳೆಯುವ ಸಾಮರ್ಥ್ಯ ಇದೆ.ಅಡಿಕೆಯ ಮೌಲ್ಯವರ್ಧನೆಯ ಕುರಿತು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು.ಅಡಿಕೆ ಆಮದು ಮಾಡುವ ಬದಲು ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಚಿಂತನೆ ನಡೆಸಲಿ ಎಂದ ಅವರು ರೈತರು ಈಗಾಗಲೇ ಉಪಬೆಳೆಗಲಾದ ತೆಂಗು,ಕಾಳು ಮೆಣಸು,ರಬ್ಬರ್ ಮುಂತಾದ ಕೃಷಿಯಲ್ಲಿ ನಿರೀಕ್ಷಿತ ಮಟ್ಟದ ಮಾರುಕಟ್ಟೆ ಪಡೆಯುತ್ತಿಲ್ಲ.ಅಡಿಕೆಯಲ್ಲಿ ಇತ್ತೀಚೆಗೆ ಉತ್ತಮ ಧಾರಣೆ ದೊರಕುತ್ತಿದ್ದು ಆಮದು ನೀತಿಯಿಂದ ಸುಮಾರು 100 ರೂಗಳಷ್ಟು ದರ ಕುಸಿಯುವ ಭೀತಿ ಇದೆ.ಈ ಬಗ್ಗೆ ಕರಾವಳಿ ಭಾಗದ ಸಂಸದರಿಗೆ ಮಾಹಿತಿ ಇಲ್ವೋ?,ಅಥವಾ ಕೇಂದ್ರದ ಈ ರೈತವಿರೋಧಿ ನೀತಿಯ ವಿರುದ್ಧ ಮಾತನಾಡುವ ಧೈರ್ಯವಿಲ್ಲವೋ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ.ಈ ಆಮದು ನೀತಿಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು ಉಪಸ್ಥಿತರಿದ್ದರು.