




ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿಯ 2008-11 ಮತ್ತು 2012-15ನೇ ಸಾಲಿನ ಬಿಬಿಎಂ, ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ವತಿಯಿಂದ ಕಾಲೇಜಿನ ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆಗೆ ಸುಮಾರು 6 ಕ್ವಿಂಟಲ್ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದಾರೆ.



2010-11ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ರವಿಚಂದ್ರ ಮತ್ತು 2012-15ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿ ಸುಶಾಂತ್ ಅವರು ತಮ್ಮ ಬ್ಯಾಚಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಧ್ಯಾಹ್ನದ ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿರುತ್ತಾರೆ.





ಕಾಲೇಜಿನ 2008- 11ನೇ ಸಾಲಿನ ವಿದ್ಯಾರ್ಥಿ, ಪ್ರಸ್ತುತ ಪುತ್ತೂರಿನ ಉದ್ಯಮಿ ಮತ್ತು ರೋಟರ್ಯಾಕ್ಟ್ ಸದಸ್ಯ ನವೀನ್ ಚಂದ್ರ ರವರು ಮುತುವರ್ಜಿ ವಹಿಸಿ ಹಿರಿಯ ವಿದ್ಯಾರ್ಥಿ ನಾಯಕರಾದ ರವಿಚಂದ್ರ ಮತ್ತು ಸುಶಾಂತರ ನೇತೃತ್ವದಲ್ಲಿ ಈ ಕೊಡುಗೆಯನ್ನು ನೀಡುವಲ್ಲಿ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕಾಲೇಜಿನ ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಮತ್ತು ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಭರವಸೆಯನ್ನು ಪ್ರಾಂಶುಪಾಲರಿಗೆ ನೀಡಿರುವ ರವಿಚಂದ್ರ, ನವೀನ್ ಚಂದ್ರ ಮತ್ತು ಸುಶಾಂತರು ಸದ್ಯದಲ್ಲಿಯೇ ಪೂರ್ವ ವಿದ್ಯಾರ್ಥಿಗಳ ಸಮಾವೇಶಕ್ಕೆ ಆಸಕ್ತಿಯನ್ನು ತೋರಿಸಿರುತ್ತಾರೆ. ಪೂರ್ವ ವಿದ್ಯಾರ್ಥಿಗಳ ಈ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುಬ್ಬಪ್ಪ ಕೈಕಂಬ ಶ್ಲಾಘಿಸಿ, ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪುಷ್ಪರಾಜ್ ಕೊಡುಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.










