ಹೆದ್ದಾರಿಯಲ್ಲಿ ಅಪಘಾತಕ್ಕೆ ಎಂಜಿನಿಯರ್/ಅಧಿಕಾರಿಗಳು ಹೊಣೆ; ಎನ್‌ಎಚ್‌ಎಐ ಸುತ್ತೋಲೆ

0

ಬೆಂಗಳೂರು:ಹೆದ್ದಾರಿಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ಸಂಭವಿಸುವ ಮಾರಣಾಂತಿಕ ಅಪಘಾತಗಳಿಗೆ, ಸಂಬಂಧಪಟ್ಟ ಎಂಜಿನಿಯರ್/ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ತಾತ್ಕಾಲಿಕ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಯಲ್ಲಿ ಹೆದ್ದಾರಿ ಪ್ರಾಧಿಕಾರ, ಇಂಡಿಪೆಂಡೆಂಟ್ ಎಂಜಿನಿಯರ್/ಅಥಾರಿಟಿ ಆಫ್ ಎಂಜಿನಿಯರ್(ಎನ್‌ಎಚ್‌ಎಐ/ಐಇ/ಎಇ) ಪ್ರತಿನಿಧಿಗಳಿಂದ ಕರ್ತವ್ಯ ಲೋಪವಾದರೆ ಅಥವಾ ಅವರ ನಿರ್ಲಕ್ಷ್ಯದಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾದರೆ ಅದನ್ನು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.‌

ರಸ್ತೆಗಳಲ್ಲಿ ಗುರುತು ಹಾಗೂ ಸಂಕೇತಗಳನ್ನು ಹಾಕಿರುವುದನ್ನೇ ಆಧಾರವಾಗಿಟ್ಟುಕೊಂಡು ಕಾಮಗಾರಿ ಪೂರ್ಣ ಗೊಳಿಸಿರುವುದಾಗಿ ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ.ಇದರಿಂದ ಬಳಕೆದಾರರ ಸುರಕ್ಷತೆ ಜತೆ ರಾಜಿಯಾಗುವುದಲ್ಲದೆ, ಪ್ರಾಧಿಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದೂ ಸುತ್ತೋಲೆಯಲ್ಲಿ ಹೇಳಲಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಕುರಿತು ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸುವ ಮುನ್ನ ಹೆದ್ದಾರಿ ಯೋಜನೆಯಲ್ಲಿ ರಸ್ತೆ ಸುರಕ್ಷತೆ ನಿಯಮಾವಳಿಗಳ ಪಾಲನೆಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಒಂದೊಮ್ಮೆ ಕಳಪೆ ರಸ್ತೆ ಕಾಮಗಾರಿಯಿಂದಾಗಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದರೆ ಅದಕ್ಕೆ ಪ್ರಾದೇಶಿಕ ಅಧಿಕಾರಿಗಳು, ಯೋಜನಾ ನಿರ್ದೇಶಕರು ಅಥವಾ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

ಅಪಘಾತಗಳಿಗೆ ಅಸಮರ್ಪಕ ಕಾಮಗಾರಿ ಕಾರಣ

ಬಹುಪಾಲು ಅಪಘಾತಗಳಿಗೆ ಅಸಮರ್ಪಕ ರಸ್ತೆ ಕಾಮಗಾರಿಯೇ ಕಾರಣ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು. ಹೆದ್ದಾರಿ ಹಾಗೂ ಇತರೆ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸುವ ಕುರಿತು ಗುತ್ತಿಗೆದಾರ ಕಂಪನಿಗಳಿಗೆ ಸೂಕ್ತ ತರಬೇತಿ ನೀಡುವ ಅಗತ್ಯವಿದೆ ಎಂದೂ ಅವರು ಹೇಳಿದ್ದರು.

LEAVE A REPLY

Please enter your comment!
Please enter your name here