ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ತೋಟಗಾರಿಕೆ, ಕೃಷಿ ಇಲಾಖೆಗೆ ಮನವಿ
ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ
ಪುತ್ತೂರು: ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಅಡಿಕೆ ಕೃಷಿಗೆ ಎಲೆಚುಕ್ಕಿ ರೋಗ ಕಂಡುಬಂದಿದ್ದು ಇದರಿಂದ ಕೃಷಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ರೋಗಬಾಧೆಯ ಬಗ್ಗೆ ಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಳ್ಳುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಅ.19 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಾಸ್ತಾಪಿಸಿದ ಅಧ್ಯಕ್ಷರು ಈಗಾಗಲೇ ಗ್ರಾಮದ ಹಲವು ಕಡೆಗಳಲ್ಲಿ ಅಡಿಕೆ ಮರದಲ್ಲಿ ಎಲೆಚುಕ್ಕಿ ರೋಗ ಕಂಡು ಬಂದಿದ್ದು ಇದರಿಂದ ಅಡಿಕೆ ಮರ ಸಾಯುವ ಅಪಾಯವಿದೆ. ಎಲೆಚುಕ್ಕಿ ರೋಗಬಾಧೆಯಿಂದ ಅಡಿಕೆ ಕೃಷಿಗೆ ಅಪಾರ ಹಾನಿಯುಂಟಾಗುವ ಸಂಭವ ಇದೆ. ಇದರಿಂದಾಗಿ ಕೃಷಿಕರಲ್ಲಿ ಆತಂಕ ಉಂಟಾಗಿದೆ ಎಂದರು. ಈ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಗ್ರಾಮಕ್ಕೆ ಭೇಟಿ ನೀಡಿ ರೋಗಬಾಧೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಇಲಾಖೆಗೆ ಮನವಿ ಮಾಡಿಕೊಳ್ಳುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಅನಧಿಕೃತ ವ್ಯಾಪಾರಸ್ಥರಿಗೆ ಎಚ್ಚರಿಕೆ
ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರು ಈ ಕೂಡಲೇ ಪಂಚಾಯತ್ಗೆ ದಂಡವನ್ನು ಪಾವತಿಸಬೇಕು, ಇಲ್ಲವಾದಲ್ಲಿ ಪಂಚಾಯತ್ ವತಿಯಿಂದ ಬಲವಂತವಾಗಿ ಅಂಗಡಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು. ಇದಲ್ಲದೆ ವ್ಯಾಪಾರಸ್ಥರು ತಮ್ಮ ಪರವಾನಗೆ ನವೀಕರಣ ಮಾಡಲು ಬಾಕಿ ಇರುವವರು ತಕ್ಷಣವೇ ಪರವಾನಗೆ ನವೀಕರಣ ಮಾಡಿಕೊಡಿಕೊಳ್ಳಬೇಕು ಈ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ನೀಡುವುದು ಎಂದು ನಿರ್ಣಯಿಸಲಾಯಿತು.
ಕುಯ್ಯಾರುನಲ್ಲಿ ಅಂಬೇಡ್ಕರ್ ಭವನ
ಗ್ರಾಮದ ಕುಯ್ಯಾರು ಎಂಬಲ್ಲಿ ಅಂಬೇಡ್ಕರ್ ಭವನ, ಹೋಬಳಿ ಕೇಂದ್ರ, ಪಂಚಾಯತ್ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಕಾದಿರಿಸುವುದು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು.
ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಜಲಜೀವನ್ ಮಿಷನ್ ಯೋಜನೆಯಲ್ಲಿ ಪೈಪುಲೈನ್, ಬೋರ್ವೆಲ್, ಟಿಸಿ ಮನೆಮನೆಗೆ ನಳ್ಳಿ ನೀರಿನ ಸಂಪರ್ಕ ಮಾಡಲು ಬಾಕಿ ಇರುವ ಬಗ್ಗೆ ಜೆಜೆಎಂ ಇಂಜಿನಿಯರ್ರವರನ್ನು ಸಭೆಗೆ ಕರೆದು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜೆಜೆಎಂನಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣವೇ ಸ್ಥಳ ಪರಿಶೀಲಿಸಿ ಮಾಡಿಕೊಡುವುದಾಗಿ ಇಂಜಿನಿಯರ್ರವರು ಸಭೆಗೆ ತಿಳಿಸಿದರು.
ಇತರ ನಿರ್ಣಯಗಳು
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಬಚ್ಚಲುಗುಂಡಿ ನಿರ್ಮಾಣ ಮಾಡಿಸಲು ಕ್ರಮ ಕೈಗೊಳ್ಳುವುದು, ಅಮೃತ ಗ್ರಾಮ ಯೋಜನೆಯಡಿ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳುವುದು, ಪಂಚಾಯತ್ ಸ್ವಚ್ಛ ವಾಹಿನಿ ವಾಹನದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ತೆಗೆಯಲು ಕ್ರಮ ವಹಿಸುವುದು, ಅಂಗಡಿ ವರ್ತಕರಿಂದ ಸ್ವಚ್ಛ ವಾಹಿನಿ ವಾಹನದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು 10 ದಿನಕ್ಕೊಮ್ಮೆ ಕ್ರಮ ವಹಿಸುವುದು, ವಸತಿ ಯೋಜನೆಯವರು ಮನೆ ಕಾಮಗಾರಿ ಪೂರ್ತಿಗೊಳಿಸಲು ಸಭೆಯಲ್ಲಿ ಚರ್ಚಿಸಲಾಯಿತು. ನಿಡ್ಯಾಣದಲ್ಲಿ ಪಂಚಾಯತ್ಗೆ ಕಾದಿರಿಸಿ ಸ್ಥಳಕ್ಕೆ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವುದು, ಎನ್ಆರ್ಎಲ್ಎಂ ಶೆಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದು ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ, ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ರೇವತಿ ಬೋಳೋಡಿ, ಸುಜಾತ ಮುಳಿಗದ್ದೆ, ಸುಜಾತ, ಅಸ್ಮಾ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿ ಹೇಳಿದರು. ಕಾರ್ಯದರ್ಶಿ ಸುನಂದ ರೈ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳ, ಶಶಿಪ್ರಭಾ ರೈ ಸಹಕರಿಸಿದ್ದರು.
ನ.10 ಗ್ರಾಮಸಭೆ
ಕೆದಂಬಾಡಿ ಗ್ರಾಮಸಭೆಯನ್ನು ನ.೧೦ ಕ್ಕೆ ನಡೆಸುವುದು ಎಂದು ನಿರ್ಣಯಿಸಲಾಯಿತು. ನ.೮ ಕ್ಕೆ ನಾಲ್ಕು ವಾರ್ಡ್ಗಳ ವಾರ್ಡ್ಸಭೆ ನಡೆಯಲಿದೆ.