ಕಡಬ: ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಮುಖ್ಯ ಮಾತಾಜಿಯಾಗಿ ಸೇವೆ ಸಲ್ಲಿಸಿದ ಕನಕಲತಾ ಎಸ್.ಎನ್. ಭಟ್ ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಯದುಶ್ರೀ ಆನೆಗುಂಡಿಯವರು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದು ಇವರಿಗೆ ಶಾಲಾ ವತಿಯಿಂದ ಇತ್ತೀಚೆಗೆ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ಕುಮಾರ್ ಕೂಡೂರುರವರು ಮಾತನಾಡಿ, ಸಂಸ್ಥೆಯಲ್ಲಿ 25 ವರ್ಷ ಸೇವೆ ಮಾಡಿದ ಕನಕಲತಾ ಎಸ್.ಎನ್.ಭಟ್ ಹಾಗೂ ಯದುಶ್ರೀಯವರು ಅಭಿನಂದನಾರ್ಹರು. ಇಬ್ಬರೂ ಶಾಲೆಯ ಜವಾಬ್ದಾರಿಗಳನ್ನು ತಾಳ್ಮೆಯಿಂದ, ಶಾಲೆಗೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡವರು. ಮಕ್ಕಳಿಗೆ, ಪಾಲಕರಿಗೆ, ಶಿಕ್ಷಕವೃಂದಕ್ಕೆ ಮಾದರಿಯಾಗಿ ಶಾಲೆಯ ಅಭಿಮಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇವರು ಇನ್ನೂ ಮುಂದೆಯು ಶಾಲೆಗೆ ಬರುತ್ತಾ ಇರಬೇಕು. ಇದು ಅವರಿಗೆ ಬೀಳ್ಕೊಡುವ ಸಮಾರಂಭ ಅಲ್ಲ. 25 ವರ್ಷ ಸೇವೆ ಸಲ್ಲಿಸಿರುವುದಕ್ಕೆ ಗೌರವಾರ್ಪಣೆ ಎಂದರು. ಇಬ್ಬರಿಗೂ ಪೇಟಾ, ಶಾಲು ತೊಡಿಸಿ, ಸ್ಮರಣಿಕೆ, ಧನ್ಯತಾ ಪತ್ರ ನೀಡಿ ಆಡಳಿತ ಮಂಡಳಿ, ಶಿಕ್ಷಕವೃಂದ, ಮಕ್ಕಳ ವತಿಯಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಕೋಶಾಧಿಕಾರಿ ರಾಮಚಂದ್ರ ಭಟ್, ಮುರಳಿಕೃಷ್ಣ ಭಟ್, ಶ್ರೀಧರ ಬಲ್ಯಾಯ, ಈಶ್ವರ ಭಟ್ ಕೊಂಡ್ಯಾಡಿ, ಸುಂದರ ಗೌಡ ಕುಂಡಡ್ಕ, ಶಿವಣ್ಣ ಗೌಡ ಕಕ್ವೆ, ಮಲ್ಲೇಶ್ ಆಲಂಕಾರು, ಗಿರಿಶಂಕರ ಸುಲಾಯ, ಶಾಲಾ ಪ್ರಭಾರ ಮುಖ್ಯ ಮಾತಾಜಿ ಆಶಾ ಎಸ್.ರೈ, ವಿಶಾಲಾಕ್ಷಿ ನೆಯ್ಯಲ್ಗ, ವಿನಯ ರೈ ಸುರುಳಿ, ಗಾಯತ್ರಿ ಕುಂಡಡ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಸ್ವಾಗತಿಸಿ, ಪ್ರಿಯಾ ಮಾತಾಜಿ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ.ಕಾರ್ಯಕ್ರಮ ನಿರೂಪಿಸಿದರು.