ಸುಳ್ಳು ಆರೋಪ-ಯಾರಿಂದಲೂ ಹಣಕ್ಕೆ ಬೇಡಿಕೆಯಿರಿಸಿಲ್ಲ-ಪ್ರಭಾರ ತಹಸಿಲ್ದಾರ್ ಸ್ಪಷ್ಟನೆ
ಪುತ್ತೂರು:ದೀಪಾವಳಿ ಪ್ರಯುಕ್ತ ನಗರಸಭಾ ವ್ಯಾಪ್ತಿ ಸಹಿತ ಪುತ್ತೂರು ತಾಲೂಕಿನ ವಿವಿಧ ಕಡೆ ಪಟಾಕಿ ಅಂಗಡಿಗಳನ್ನು ತೆರೆಯಲು ತಾತ್ಕಾಲಿಕ ಪರವಾನಿಗೆ ಪಡೆಯಲು ಎನ್‌ಒಸಿ ನೀಡಲು ಲಂಚ ಕೇಳುತ್ತಿರುವ ಅಧಿಕಾರಿ, ಲಂಚ ನೀಡದವರ ಕಡತವನ್ನು ಪೆಂಡಿಂಗ್ ಇಟ್ಟು ತೊಂದರೆ ಕೊಡುತ್ತಿರುವ ದೂರುಗಳು ಬರುತ್ತಿರುವುದಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿಯವರು ಆರೋಪಿಸಿದ್ದು, ತಹಸಿಲ್ದಾರ್ ಅವರು ಕೂಡಲೇ ಪಟಾಕಿ ಅಂಗಡಿಗಳಿಗೆ ಎನ್‌ಒಸಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಟಾಕಿ ಅಂಗಡಿಗಳನ್ನು ತೆರೆಯಲು ಹಲವಾರು ವ್ಯಾಪಾರಸ್ಥರು ಅರ್ಜಿ ಸಲ್ಲಿಸಿದ್ದು, ಪರವಾನಿಗೆ ಪಡೆಯಲು ನಿಯಮದಂತೆ ತಹಸೀಲ್ದಾರರಿಂದ ಎನ್‌ಒಸಿ ಅಗತ್ಯವಿರುತ್ತದೆ.ಆದರೆ ಪುತ್ತೂರು ಪ್ರಭಾರ ತಹಸೀಲ್ದಾರ್ ಪಟಾಕಿ ಅಂಗಡಿಗೆ ಎನ್‌ಒಸಿ ನೀಡಲು ಲಂಚ ಕೇಳುತ್ತಿದ್ದು ಲಂಚ ಕೊಡದವರ ಕಡತವನ್ನು ಪೆಂಡಿಂಗ್ ಇಟ್ಟು ತೊಂದರೆ ಕೊಡುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ ಎಂದು ಹೇಳಿರುವ ಮಹಮ್ಮದ್ ಆಲಿಯವರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮಗೆ ಗೌರವ ಕೊಡುತ್ತೇವೆ.ಲಂಚಕ್ಕಾಗಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಂಥವರಿಗೆ ಹೇಗೆ ಬುದ್ದಿ ಕಲಿಸಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇಲಾಖೆಗಳ ಯಾರೇ ಅಧಿಕಾರಿಗಳು ಲಂಚ ಕೇಳಿದರೆ ಅಂಥ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಟ್ರ್ಯಾಪ್ ಮಾಡಿಸಿ ಎಂದು ಮಹಮ್ಮದ್ ಆಲಿಯವರು ಆಗ್ರಹಿಸಿದ್ದಾರೆ.
ಸುಳ್ಳು ಆರೋಪ- ತಹಸಿಲ್ದಾರ್ ಸ್ಪಷ್ಟನೆ:
ಪಟಾಕಿ ಮಳಿಗೆ ಪ್ರಾರಂಭಿಸಲು ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಕ್ಲಿಯರ್ ಮಾಡುವಂತೆ ಕೇಸ್ ವರ್ಕರ್‌ಗೆ ಸೂಚಿಸಿದ್ದು ಎಲ್ಲಾ ಅರ್ಜಿಗಳು ಕ್ಲಿಯರ್ ಆಗಿದೆ.ಒಟ್ಟು ಮೂವತ್ತು ಅರ್ಜಿಗಳು ಬಂದಿವೆ.ಅಗ್ನಿಶಾಮಕ ಇಲಾಖೆಯವರು ಅನುಮತಿ ನೀಡಿರುವ ಎಲ್ಲಾ ಅರ್ಜಿಗಳಿಗೆ ಕಂದಾಯ ಇಲಾಖೆಯಿಂದ ಅನುಮತಿ ನೀಡಲಾಗಿದೆ.ಬೆಳಿಗ್ಗೆ ಬಂದು ಪ್ರಥಮವಾಗಿ ಪಟಾಕಿ ಮಳಿಗೆಗೆ ಸಂಬಂಧಿಸಿದ ಅರ್ಜಿಗಳನ್ನು ಕ್ಲಿಯರ್ ಮಾಡಲಾಗಿದೆ.ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬಕ್ಕೆ ಪಟಾಕಿ ಮಳಿಗೆಗೆ ಅವಕಾಶ ನೀಡುವಂತೆ ಸೂಚಿಸಿದ್ದೇನೆ ಎಂದು ಪ್ರಭಾರ ತಹಸಿಲ್ದಾರ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಪಟಾಕಿ ಮಳಿಗೆ ತೆರೆಯಲು ನಿರ್ದಿಷ್ಟ ನಿಯಮಗಳಿದ್ದು ನಿಯಮಾನುಸಾರ ಇದ್ದ ಅರ್ಜಿಗಳಿಗೆಲ್ಲ ಅವಕಾಶ ನೀಡಲಾಗಿದೆ.ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಹಿಂದುಗಳ ಹೊರತಾಗಿ ಇತರರಿಗೆ ಅನುಮತಿ ನೀಡಬಾರದು ಎಂಬ ಮನವಿಗಳಿರುವುದರಿಂದ ಬೇರೆ ಸಮುದಾಯದವರಿಗೆ ಪಟಾಕಿ ಮಳಿಗೆಗೆ ಅವಕಾಶ ನೀಡಲಾಗಿಲ್ಲ.ಈ ಕಾರಣಕ್ಕಾಗಿ ಈ ರೀತಿಯ ಆರೋಪ ಮಾಡಲಾಗುತ್ತಿದೆ ಹೊರತು ಅವರು ಮಾಡಿರುವ ಆರೋಪ ಸುಳ್ಳು.ನಿಯಮ ಪಾಲಿಸದ ಅರ್ಜಿಗಳು ಮಾತ್ರ ತಿರಸ್ಕೃತವಾಗಿದೆ ಹೊರತು ಯಾರಿಂದಲೂ ಹಣಕ್ಕೆ ಬೇಡಿಕೆಯಿರಿಸಿಲ್ಲ ಎಂದು ಪ್ರಭಾರ ತಹಸಿಲ್ದಾರ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.