ಪುತ್ತೂರು: ಭಾರತೀಯ ಅಂಚೆ ಇಲಾಖೆಯಲ್ಲಿಅ.2 ರಿಂದ ಆರಂಭಗೊಂಡ ವಿಶಿಷ್ಟ ಸ್ವಚ್ಛತಾ ಅಭಿಯಾನ ಅ.31ರ ತನಕ ನಡೆಯಲಿದ್ದು, ಪುತ್ತೂರು ವಿಭಾಗದಲ್ಲಿ ಸೇವೆ ಒದಗಿಸುತ್ತಿರುವ ಎಲ್ಲಾ ಪ್ರಧಾನ / ಉಪ / ಶಾಖಾ ಅಂಚೆ ಕಛೇರಿಗಳನ್ನು ಮತ್ತು ಅವುಗಳ ಪರಿಸರವನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ.
ಇಲಾಖೆಗೆ 150 ವರ್ಷಕ್ಕಿಂತಲೂ ಹಿಂದಿನ ಇತಿಹಾಸ ಇರುವುದರಿಂದ, ಹಲವು ರೀತಿಯ ದಾಖಲೆಗಳು ಅಗತ್ಯವಾಗಿದ್ದು ಅವುಗಳನ್ನು ಜಾಗರೂಕತೆಯಿಂದ ಸಂಗ್ರಹಿಸಿಡಬೇಕಾಗಿದೆ. ಈ ಸಂದರ್ಭದಲ್ಲಿ ಶಾಶ್ವತ ಮತ್ತು ಅಶಾಶ್ವತ ದಾಖಲೆಗಳನ್ನು ವಿಂಗಡಿಸಿ, ಸಮಯ ಮೀರಿದ ಅಶಾಶ್ವತ ದಾಖಲೆಗಳನ್ನು ಕ್ರಮಾನುಸಾರ ವಿಲೇವಾರಿ ಮಾಡಲಾಗಿದೆ. ಕ್ರಮಬದ್ಧವಾಗಿ ನಿಗದಿತ ಸಮಯದಲ್ಲಿ ಪ್ರತಿ ದಿನ ಆಯಾ ಕಛೇರಿ ನೌಕರರೆಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಎಲ್ಲ ಅಂಚೆ ಕಛೇರಿಗಳ ಒಳಗೂ ಹೊರಗೂ ಶುಚಿಗೊಳಿಸಿ ಕಛೇರಿಗಳಿಗೆ ಉತ್ತಮ ನೋಟವನ್ನು ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ವಿಭಾಗದಡಿಯಲ್ಲಿ ಇರುವ ವಿಟ್ಲ ಉಪ ಅಂಚೆ ಕಛೇರಿ, ಹಾಗೂ ಸುಳ್ಯ ಮುಖ್ಯ ಡಾಕ್ ಘರ್ ನಲ್ಲಿಯೂ ಅನೇಕ ಯುಕ್ತ ನವೀಕರಣ ಕಾರ್ಯಗಳನ್ನು ಮಾಡಿಸಲಾಯಿತು. ಆ ಮೂಲಕ ಎರಡೂ ಕಛೇರಿಗಳಿಗೆ ನವೀನ ನೋಟವನ್ನು ಒದಗಿಸಲಾಗಿದೆ. ಈ ರೀತಿಯಾಗಿ ವಿಶೇಷ ಸ್ವಚ್ಛತಾ ಅಭಿಯಾನ 2.0ದ ಸಂದರ್ಭದಲ್ಲಿ ಶುಚಿತ್ವಕ್ಕೆ ಪ್ರಾಧಾನ್ಯತೆ ಕೊಡುವ ಮತ್ತು ಸಾರ್ವಜನಿಕ ಸೇವೆ ಒದಗಿಸುತ್ತಿರುವ ಅಂಚೆ ಕಛೇರಿಗಳಿಗೆ ಶುಭ್ರ ನೋಟವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಪುತ್ತೂರು ಪ್ರಧಾ ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.