ರಾಮಕುಂಜ: ಕಳೆದ 13 ವರ್ಷಗಳಿಂದ ಕುಂತೂರುಪದವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಕೊಯಿಲ ಅವರು ಅ.31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇವರು ಪಶುಸಂಗೋಪನಾ ಇಲಾಖೆಯಲ್ಲಿ ಕಳೆದ 36 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು 23-7-1986ರಂದು ಉಪ್ಪಿನಂಗಡಿ ಪಶು ವೈದ್ಯ ಆಸ್ಪತ್ರೆಯಲ್ಲಿ ಪಶುವೈದ್ಯ ಸಹಾಯಕರಾಗಿ ನೇಮಕಗೊಂಡಿದ್ದರು. ಇಲ್ಲಿ ಸುಮಾರು 7 ವರ್ಷ ಕರ್ತವ್ಯ ನಿರ್ವಹಿಸಿ 1992ರಲ್ಲಿ ಕಡಬ ಪ್ರಾಥಮಿಕ ಪಶುಚಿಕಿತ್ಸಾಲಯಕ್ಕೆ ವರ್ಗಾವಣೆಗೊಂಡಿದ್ದರು. 1994ರಲ್ಲಿ ಕಿರಿಯ ಪಶುವೈದ್ಯ ಪರೀಕ್ಷಕರಾಗಿ ಮುಂಭಡ್ತಿ ಪಡೆದುಕೊಂಡು ಬೆಳ್ತಂಗಡಿ ಪಶುವೈದ್ಯ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದರು. ಈ ವೇಳೆ ಕೊಕ್ಕಡ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಪ್ರಭಾರ ಕಿರಿಯ ಪಶುವೈದ್ಯ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. 1995ರಲ್ಲಿ ಮತ್ತೆ ಉಪ್ಪಿನಂಗಡಿ ಪಶುವೈದ್ಯ ಆಸ್ಪತ್ರೆಗೆ ವರ್ಗಾವಣೆಗೊಂಡರು. 2001ರಲ್ಲಿ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಮುಂಭಡ್ತಿ ಪಡೆದುಕೊಂಡು ಬಂಟ್ವಾಳ ತಾಲೂಕಿನ ಕಕ್ಕೆಪದವು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ವರ್ಗಾವಣೆಗೊಂಡರು. 2010ರಲ್ಲಿ ಕುಂತೂರುಪದವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಕ್ಕೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಕಳೆದ ನಾಲ್ಕು ತಿಂಗಳಿನಿಂದ ಬೆಳಂದೂರು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಂತೂರುಪದವು ಪಶುಚಿಕಿತ್ಸಾ ಕೇಂದ್ರದಲ್ಲಿ 13 ವರ್ಷ ಸೇರಿ ಪಶುಸಂಗೋಪನಾ ಇಲಾಖೆಯಲ್ಲಿ ಒಟ್ಟು 36ವರ್ಷ 3 ತಿಂಗಳ ಕಾಲ ಸೇವೆ ಸಲ್ಲಿಸಿದ ಅಶೋಕ್ರವರು ಅ.31ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರು ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ರಾಮಕುಂಜ ಗ್ರಾಮದ ಗೋಕುಲನಗರ ನಿವಾಸಿಯಾಗಿರುವ ಅಶೋಕ್ರವರ ಪತ್ನಿ ಸುಲೇಖಾರವರು ಪುತ್ತೂರು ತಾಲೂಕು ಆರೋಗ್ಯ ಕಚೇರಿಯಲ್ಲಿ ಹಿರಿಯ ಮಹಿಳಾ ನಿರೀಕ್ಷಣಾಧಿಕಾರಿಯಾಗಿದ್ದಾರೆ. ಹಿರಿಯ ಪುತ್ರ ಅಭಿಷೇಕ್ ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕಿರಿಯ ಪುತ್ರ ಅಶ್ವಿನ್ ಮಂಗಳೂರಿನಲ್ಲಿ ಇನ್ಫೋಸಿಸ್ನಲ್ಲಿ ಉದ್ಯೋಗಿಯಾಗಿದ್ದಾರೆ.
ಅಶೋಕ್ರವರು ಮೂಲತ: ಕಾಸರಗೋಡು ಜಿಲ್ಲೆಯ ಬೇಕಲೆಕೋಟೆ ದಿ.ಕೃಷ್ಣ ಕೆ ಹಾಗೂ ದಿ. ವಳ್ಳಚ್ಚಿ ದಂಪತಿಯ ಆರು ಮಂದಿ ಮಕ್ಕಳಲ್ಲಿ ಕಿರಿಯ ಪುತ್ರ. ಅಶೋಕ್ರವರ ತಂದೆ ಕೃಷ್ಣ ಕೆ.,ರವರು ಬ್ರಿಟಿಷರ ಆಡಳಿತದ ಅವದಿಯ 1939ರಿಂದ 1947ರ ತನಕ ನೌಕದಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವಾತಂತ್ರ್ಯದ ಬಳಿಕ 1947ರಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. 1948ರಲ್ಲಿ ಕೊಯಿಲದಲ್ಲಿ ಪಶು ಆಸ್ಪತ್ರೆ ಆರಂಭಗೊಂಡಾಗ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದರು. ೧೯೭೮ರಲ್ಲಿ ಕೃಷ್ಣ ಕೆ.,ರವರು ನಿವೃತ್ತಿಗೊಂಡು ಕೊಯಿಲ ಗೋಕುಲನಗರದಲ್ಲಿ ಮನೆ ಮಾಡಿ ವಾಸ್ತವ್ಯ ಹೂಡಿದ್ದರು.
ಜನಸ್ನೇಹಿ ಅಧಿಕಾರಿ:
ಅಶೋಕ್ರವರು ಹಗಲು, ರಾತ್ರಿ ಎನ್ನದೇ ಮನೆ ಮನೆಗೆ ತೆರಳಿ ಸೇವೆ ನೀಡುವ ಮೂಲಕ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಸೇವೆ ಗುರುತಿಸಿ ಕುಂತೂರುಪದವು ನೆಹರು ಯುವಕ ಮಂಡಲ, ಕಕ್ಕೆಪದವು ಪಂಚದುರ್ಗಾ ಯುವಕ ಮಂಡಲ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಸರಕಾರಿ ಸೇವೆಯ ಜೊತೆಗೆ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಇವರು ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಬದೆಂಜ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ, ಪ್ರಸ್ತುತ ಆಡಳಿತ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾರದಾನಗರ ಶ್ರೀ ಶಾರದೋತ್ಸವ ಸಮಿತಿ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಆತೂರು ಶ್ರೀ ಸದಾಶಿವ ದೇವಸ್ಥಾನ, ರಾಮಕುಂಜ-ಕೊಯಿಲ ಗಣೇಶೋತ್ಸವ ಸಮಿತಿ, ಗೋಕುಲನಗರ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕೊಯಿಲ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.