ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಸಮಾಜ ಸೇವಕ, ಕೃಷಿಕ ಗಂಗಾಧರ ಶೆಟ್ಟಿ ಹೊಸಮನೆ ಅವರು ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜ ಸೇವೆ ವಿಭಾಗದಿಂದ ಗಂಗಾಧರ ಶೆಟ್ಟಿ ಹೊಸಮನೆ ಅವರನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರು ಕಳೆದ 15 ವರ್ಷಗಳಿಂದ ಕಡಬ ತಾಲೂಕಿನ ನೆಲ್ಯಾಡಿ ಅಸುಪಾಸಿನ 12 ಗ್ರಾಮಗಳಲ್ಲಿ 45 ಉಚಿತ ಕಣ್ಣಿನ ಶಿಬಿರ ಆಯೋಜಿಸಿ 500ಕ್ಕೂ ಹೆಚ್ಚು ಮಂದಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ, ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ನ ಸಹಯೋಗದಲ್ಲಿ ಡಾ.ಗೌರಿ ಪೈಯವರ ಮೂಲಕ 5000ಕ್ಕೂ ಮಿಕ್ಕಿ ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡುವಲ್ಲಿ ಸಹಕಾರ ನೀಡಿದ್ದರು. 180ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರ ಆಯೋಜನೆ, ಕಳೆದ 10 ವರ್ಷದಲ್ಲಿ ವರ್ಷಕ್ಕೆ 18ರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ನ ವತಿಯಿಂದ ನೆಲ್ಯಾಡಿ ಪರಿಸರದಲ್ಲಿ ಪ್ರತಿವರ್ಷ 2 ತಿಂಗಳುಗಳ ಕಾಲ 180 ಉಚಿತ ವೈದ್ಯಕೀಯ ಶಿಬಿರ ಆಯೋಜನೆಗೆ ಸಹಕರಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷರಾಗಿದ್ದ ವೇಳೆ ದುಶ್ಚಟ ಮುಕ್ತ ಸಮಾಜಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರ ಆಶಯದಂತೆ ಹದಿಹರೆಯದ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಶಿಬಿರ ಆಯೋಜಿಸಿದ್ದರು. ನೆಲ್ಯಾಡಿ ಗ್ರಾ.ಪಂ.ಸದಸ್ಯನಾಗಿ, ಆ ಬಳಿಕ ಎರಡೂವರೇ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಅಧ್ಯಕ್ಷನಾಗಿದ್ದ ವೇಳೆ ಕೋವಿಡ್ ಸಂದರ್ಭದಲ್ಲಿ 600 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆಗೆ ಕ್ರಮ ಕೈಗೊಂಡಿದ್ದರು. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಉಚಿತ ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಶಿಬಿರ, ಶ್ರೀ ಮಾತಾ ಅಮೃತಾನಂದಮಯಿ ಮಠದ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರಗಳ ವ್ಯವಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಕೃಷಿ ವಿಚಾರ ಸಂಕಿರಣ, ಪರಿಸರ ಮಾಹಿತಿ, ವನಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು.
ನೆಲ್ಯಾಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಮೆಸ್ಕಾಂ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರಾಗಿ, ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಶಾಲಾ ಸುವರ್ಣಮಹೋತ್ಸವ ಆಚರಣೆ, ಸಾಹಿತ್ಯರತ್ನ ಗೋಪಾಲಕೃಷ್ಣ ಶಗ್ರಿತ್ತಾಯರವರ ಮಕ್ಕಳ ಕವನ ಸಂಕಲನದ ಬಿಡುಗಡೆ, ನೆಲ್ಯಾಡಿ ಗ್ರಾಮ ದೇವಸ್ಥಾನ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿಯಾಗಿ, ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಉಪಾಧ್ಯಕ್ಷನಾಗಿ, ನೆಲ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ರಜತ ಮಹೋತ್ಸವದ ಪ್ರಧಾನ ಕಾರ್ಯದರ್ಶಿಯಾಗಿ, ಪಲ್ಲದಗಂಡಿ ಆದಿನಾಗಬ್ರಹ್ಮ ಗಡಿಯಾಡಿ ಮೊಗೇರ್ಕಳ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾಗಿ, ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿ ಕಾರ್ಯದರ್ಶಿಯಾಗಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಅಮೆತ್ತಿಮಾರುಗುತ್ತು ಕಳ್ಳಿಗೆಬೀಡು ದಿ.ವಾಸಪ್ಪ ಶೆಟ್ಟಿ ಮತ್ತು ಕೊಂಬಿಲ ದಿ.ಕಲ್ಯಾಣಿ ಶೆಟ್ಟಿಯವರ ಪುತ್ರರಾಗಿರುವ ಗಂಗಾಧರ ಶೆಟ್ಟಿ ಹೊಸಮನೆ ಅವರು ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ, ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿದ್ದಾರೆ.