ಪುತ್ತೂರು: ಮಾಣಿ -ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ಪುತ್ತೂರಿನಿಂದ ಸಂಪಾಜೆ ತನಕ ರಸ್ತೆ ಸುರಕ್ಷತಾ ಕಾಮಗಾರಿ ಮತ್ತು 8 ಸೇತುವೆಗಳನ್ನು ಅಗಲಗೊಳಿಸಿ ಮರುನಿರ್ಮಾಣ ಮಾಡುವ ಕಾಮಗಾರಿಗೆ ಕೇಂದ್ರ ಸರಕಾರವು ರೂ. 51.96 ಕೋಟಿ ಬಿಡುಗಡೆಗೊಳಿಸಿದ್ದು, ನ. 2 ರಂದು ಪೂರ್ವಾಹ್ನ 11 ಗಂಟಗೆ ಕುಂಬ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್. ಅಂಗಾರ ಭಾಗವಹಿಸಲಿದ್ದಾರೆ ಎಂದ ಅವರು ಕೆ.ಅರ್.ಡಿ.ಸಿ.ಎಲ್. ನಲ್ಲಿದ್ದ ರಸ್ತೆಯನ್ನು ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿತ್ತು. ಮಾಣಿಯಿಂದ ಸಂಪಾಜೆ ತನಕ 68 ಕಿ.ಮೀ. ಹೆದ್ದಾರಿಯನ್ನು ಮಡಿಕೇರಿ ವಿಭಾಗಕ್ಕೆ ರಾ.ಹೆ. ಯವರು ವಹಿಸಿದ್ದರು. ಅದನ್ನು ಮಂಗಳೂರು ವಿಭಾಗಕ್ಕೆ ನೀಡುವಂತೆ ಹೆದ್ದಾರಿ ಮುಖ್ಯ ಎಂಜಿನಿಯರ್‌ಗೆ ಮನವಿ ಮಾಡಿದ ಮೇರೆಗೆ ಸ್ಪಂದನೆ ಲಭಿಸಿದೆ. ಅಪಾಯಕಾರಿ ಸೇತುವೆ, ತಿರುವು, ಅಪಾಯಕಾರಿ ವಲಯಗಳನ್ನು ಗುರುತಿಸಿ ಅದನ್ನು ಅಗಲೀಕರಣಗೊಳಿಸಲು, ಸೇತುವೆ ಅಗಲಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದೆ. ಈಗ ಅನುದಾನ ಬಿಡುಗಡೆಯಾಗಿದ್ದು, ಮುಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯವರು ಟೆಂಡರ್ ಪಡೆದುಕೊಂಡಿದ್ದಾರೆ. ಮಳೆಗಾಲಕ್ಕೆ ಮೊದಲು ಸೇತುವೆಗಳ ಕಾಮಗಾರಿ ಮುಗಿಸುವ ಭರವಸೆ ಇದೆ. ಮಾಣಿಯಿಂದ -ಮೈಸೂರು ತನಕ ಚತುಷ್ಪಥ ಕಾಮಗಾರಿಗೂ ಬೇಡಿಕೆ ಡಲಾಗಿದ್ದು, ನಳಿನ್ ಕುಮಾರ್ ಕಟೀಲ್ ಅವರ ಮೂಲಕವೂ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಮಠಂದೂರು ತಿಳಿಸಿದ್ದಾರೆ.
8 ಸೇತುವೆಗಳು
ಮುಕ್ರಂಪಾಡಿ ಸೇತುವೆ: ರೂ. 1.73 ಕೋಟಿ
ಸಂಪ್ಯ ಸೇತುವೆ: ರೂ. 3.03 ಕೋಟಿ
ಸಂಟ್ಯಾರ್ ಸೇತುವೆ: ರೂ. 4.55 ಕೋಟಿ
ಕುಂಬ್ರ ಸೇತುವೆ: ರೂ. 11.64 ಕೋಟಿ
ಶೇಖಮಲೆ ಸೇತುವೆ: ರೂ. 9.55 ಕೋಟಿ
ಕೌಡಿಚ್ಚಾರು ಸೇತುವೆ: ರೂ. 4.02 ಕೋಟಿ
ಪೈಚಾರ್ ಸೇತುವೆ 3.34 ಕೋಟಿ
ಕಡಪಾಲ ಸೇತುವೆ: 4.82 ಕೋಟಿ
ಒಟ್ಟು: ರೂ. 42.68 ಕೋಟಿ