




ಉಪ್ಪಿನಂಗಡಿ: ಇಲ್ಲಿನ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿನ ಗೇಟನ್ನು ಅಳವಡಿಸಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ಸಂಗಮ ಸ್ಥಳದಲ್ಲಿ ನದಿಯ ಒಡಲಲ್ಲಿರುವ ಉದ್ಭವಲಿಂಗ ಜಲಾವೃತಗೊಂಡಿದೆ. ಒಂದು ಕಡೆ ನೀರು ನಿಲ್ಲಿಸಿದ್ದರಿಂದ ಕೃಷಿಕ ವರ್ಗ ಸಂತಸಗೊಂಡರೆ, ಉದ್ಭವ ಲಿಂಗ ಜಲಾವೃತಗೊಂಡಿದ್ದರಿಂದ ಭಕ್ತ ಜನತೆ ನಿರಾಶೆಗೊಳ್ಳುವಂತಾಗಿದೆ.




ಬಿಳಿಯೂರಿನಲ್ಲಿ ಸಂಪರ್ಕ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣವಾಗಿ ಅಣೆಕಟ್ಟಿಗೆ 4 ಮೀಟರ್ ಎತ್ತರದ ಗೇಟು ಅಳವಡಿಸಿದಾಗ ಅಣೆಕಟ್ಟಿನ ಹಿನ್ನೀರು ನೆಕ್ಕಿಲಾಡಿ ವರೆಗೆ ಮಾತ್ರ ಸಂಗ್ರಹವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಅದು ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯ ನದಿ ಒಡಲನ್ನು ವ್ಯಾಪಿಸಿತ್ತು. ಇದರಿಂದಾಗಿ ಪಾರಂಪರಿಕವಾಗಿ ನಡೆಯುತ್ತಿದ್ದ ಶಿವರಾತ್ರಿ ಮಖೆ ಜಾತ್ರೆ ಸಹಿತ ಮೂರು ಮಖೆ ಜಾತ್ರೆಗಳಲ್ಲಿನ ಪೂಜೆ ಪುನಸ್ಕಾರದಿಂದ ಉದ್ಭವಲಿಂಗ ವಿಮುಖವಾದಂತಾಯಿತು. ಆದರೆ ನದಿಯಲ್ಲಿ ಸಮುದ್ರಮಟ್ಟಕ್ಕಿಂತ 26.4ಮೀಟರ್ ಎತ್ತರದಲ್ಲಿ ನೀರು ಶೇಖರಣೆಯಾಗಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ಜಲಸಂಪತ್ತು ಕಾಣಿಸಲಾರಂಭಿಸಿತು. ಅಲ್ಲದೇ, ಮಂಗಳೂರು ನಗರಕ್ಕೆ ಕುಡಿಯುವ ನೀರಿಗೂ ಈ ಅಣೆಕಟ್ಟು ಪ್ರಯೋಜನಕ್ಕೆ ಬಂದಿತ್ತು. ಉದ್ಭವಲಿಂಗಕ್ಕೆ ಪೂಜೆಗಳು ನಡೆಯದ ಕಾರಣ ಉಪ್ಪಿನಂಗಡಿ ಪರಿಸರದಲ್ಲಿನ ವ್ಯವಹಾರಿಕ ನೆಲೆಗಳೆಲ್ಲವೂ ಕಳಾಹೀನವಾಗತೊಡಗಿದವು. ಪ್ರಶ್ನಾಚಿಂತನೆಯಲ್ಲಿಯೂ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸದ ಸ್ಥಿತಿಯು ದೋಷಕರವೆಂದು ಗೋಚರಿಸಿತು. ಬಳಿಕ ಮೂರು ಮಖೆ ಜಾತ್ರೆಯವರೆಗಾದರೂ ಗೇಟಿನ ಎತ್ತರವನ್ನು 2 ಮೀಟರ್ಗೆ ತಗ್ಗಿಸಿ ಉದ್ಭವ ಲಿಂಗದ ಪೂಜೆಗೆ ಅವಕಾಶ ಕೊಡಬೇಕೆಂದು ಭಕ್ತ ಜನತೆಯ ಬೇಡಿಕೆಯಾಗಿತ್ತು. ಆದರೆ ಅಣೆಕಟ್ಟುಗಳ ನೀರು ಸಂಗ್ರಹವನ್ನು ನಮಗೆ ಬೇಕಾದ ಹಾಗೆ ಬದಲಾವಣೆ ಮಾಡಲು ನನಗೆ ಬಿಡಿ. ಮುಖ್ಯಮಂತ್ರಿಯವರಿಗೂ ಹಕ್ಕಿಲ್ಲ. ಕುಡಿಯುವ ನೀರು ಇಲ್ಲಿ ಮುಖ್ಯವಾಗುತ್ತದೆ. ಆದ್ದರಿಂದ ಗೇಟಿನ ಗಾತ್ರ ತಗ್ಗಿಸಲು ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದರು. ಈ ಬಾರಿ ಈಗ ಗೇಟು ಅಳವಡಿಸಲಾಗಿದ್ದು, ಮತ್ತೆ ನೀರು ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ.













