ಆರ್ಯಾಪು ಗ್ರಾ.ಪಂ.ಸಾಮಾನ್ಯ ಸಭೆ

0

ಪಿಡಿಓ ವರ್ಗಾವಣೆಗೆ ಸದಸ್ಯರ ತೀವ್ರ ವಿರೋಧ
ಅಧ್ಯಕ್ಷ, ಸದಸ್ಯರೋರ್ವರ ರಾಜೀನಾಮೆಯ ಎಚ್ಚರಿಕೆ; ಶಾಸಕರ ಭೇಟಿಗೆ ನಿರ್ಧಾರ

ಪುತ್ತೂರು: ಗ್ರಾಮಸ್ಥರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿರುವ ಹಾಗೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಭಿವೃದ್ಧಿ ಅಧಿಕಾರಿಯವರ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, ವರ್ಗಾವಣೆ ಆದೇಶ ಹಿಂಪಡೆಯುವಂತೆ ಸರಕಾರಕ್ಕೆ ಮನವಿ ಮಾಡಬೇಕೆಂದು ಒತ್ತಾಯಿಸಿದ ಹಾಗೂ ವರ್ಗಾವಣೆ ಆದೇಶ ಹಿಂಪಡೆಯದೇ ಇದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧ್ಯಕ್ಷರು ಹಾಗೂ ಸದಸ್ಯರೋರ್ವರು ಘೋಷಣೆ ಮಾಡಿದ ಘಟನೆ ಆ.31ರಂದು ನಡೆದ ಆರ್ಯಾಪು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆಯು ಅಧ್ಯಕ್ಷೆ ಸರಸ್ವತಿ ಕೆ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರುಕ್ಮಯ್ಯ ಮೂಲ್ಯರವರು, ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಅಮೃತ ಗ್ರಾಮ ಯೋಜನೆಯ ಅನುದಾನವೂ ಲಭಿಸಿದೆ. ಆದರೆ ಗ್ರಾಮದ ಅಭಿವೃದ್ಧಿ ಶ್ರಮಿಸುತ್ತಿರುವ ಪಿಡಿಓ ನಾಗೇಶ್‌ರವರಿಗೆ ಏಕಾಏಕಿ ವರ್ಗಾವಣೆಯ ಆದೇಶ ಆಗಿದೆ. ಒಬ್ಬ ಅಧಿಕಾರಿಗೆ ಒಂದು ಕಡೆ ಸೇವೆ ಸಲ್ಲಿಸಲು 3 ವರ್ಷದ ಅವಧಿ ಇದೆ. ನಾಗೇಶ್‌ರವರು ಆರ್ಯಾಪು ಪಂಚಾಯತ್‌ನಲ್ಲಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸಿರುವಾಗಲೇ ಅವರಿಗೆ ವರ್ಗಾವಣೆಯ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ವಸಂತರವರು, ಕೆಲವು ಪಂಚಾಯತ್‌ಗಳಲ್ಲಿ ಪಿಡಿಓ ಅವರ ವರ್ಗಾವಣೆಗೆ ಮೂರು ಬಾರಿ ನಿರ್ಣಯ ಮಾಡಿದ ಉದಾಹರಣೆಗಳಿವೆ. ಅಭಿವೃದ್ಧಿಯಲ್ಲಿ ನಂಬರ್ ವನ್ ಸ್ಥಾನದಲ್ಲಿರುವ ಆರ್ಯಾಪು ಪಂಚಾಯತ್‌ನ ಪಿಡಿಓರವರ ವರ್ಗಾವಣೆ ಮಾಡದಂತೆ ನಿರ್ಣಯ ಮಾಡದಿದ್ದರೆ ನಾವು ಈ ಸ್ಥಾನದಲ್ಲಿರುವುದು ಯಾಕೆ ?, ಪಂಚಾಯತ್‌ನ ನಿರ್ಣಯವನ್ನು ಸುಪ್ರೀಂ ಕೋರ್ಟ್‌ನಲ್ಲಿಯೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪಿಡಿಓರವರ ವರ್ಗಾವಣೆ ಆದೇಶ ಹಿಂಪಡೆಯುವಂತೆ ಇಲ್ಲಿ ನಿರ್ಣಯ ಕೈಗೊಂಡು ಮುಖ್ಯಮಂತ್ರಿಯವರ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಚಿವರು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯರು ಒಮ್ಮತದಿಂದ ಬೆಂಬಲ ಸೂಚಿಸಿದರು. ಸದಸ್ಯ ಪವಿತ್ರ ರೈ ಮಾತನಾಡಿ, ಪಿಡಿಓರವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ಸದಸ್ಯರ ಹೊಣೆ ಕಡಿಮೆಗೊಳಿಸಿದ್ದಾರೆ. ಅಭಿವೃದ್ಧಿಯಲ್ಲಿ ನಮ್ಮ ಪಂಚಾಯತ್‌ಗೆ ಉತ್ತಮ ಹೆಸರು ಬಂದಿದೆ. ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಒಮ್ಮತದಿಂದ ನಿರ್ಣಯ ಕೈಗೊಳ್ಳುವ ಎಂದರು. ಸದಸ್ಯರಿಗೆ ದೊರೆಯುವ 1 ಸಾವಿರ ರೂ. ಗೌರವಧನಕ್ಕೆ ಅಂಟಿಕೊಂಡವ ನಾನಲ್ಲ. ಅಭಿವೃದ್ಧಿಯೇ ನನ್ನ ಮೂಲಮಂತ್ರ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಿಡಿಓರವರನ್ನು ವರ್ಗಾವಣೆಗೊಳಿಸಿದರೆ ನನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸದಸ್ಯ ವಸಂತ ಎಚ್ಚರಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಸರಸ್ವತಿಯವರು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದರು. ಉಪಾಧ್ಯಕ್ಷೆ ಪೂರ್ಣಿಮಾ ರೈ ಮಾತನಾಡಿ, ನಮ್ಮ ಅವಧಿಯಲ್ಲಿ ಪಿಡಿಓರವರ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರು ಬಂದಿಲ್ಲ. ಕುಡಿಯಲು ನೀರಿಲ್ಲದ ಮನೆಗಳಿಗೆ ನೀರಿನ ಸೌಲಭ್ಯವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮದ ಅಭಿವೃದ್ಧಿಯಾಗಿದೆ. ಹೀಗಾಗಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಾಜಕೀಯ ಒತ್ತಡದಿಂದ ಪಿಡಿಒ ವರ್ಗಾವಣೆಯಾಗಿದೆ ಎಂದು ಸದಸ್ಯ ಯಾಕೂಬ್ ಸುಲೈಮಾನ್ ಆರೋಪಿಸಿದರು. ಶಾಸಕರ ಮೂಲಕ ವರ್ಗಾವಣೆ ಮಾಡದಂತೆ ಒತ್ತಡ ಹಾಕುವಂತೆ ಸದಸ್ಯರಾದ ಪುರುಷೋತ್ತಮ ರೈ, ಯಾಕೂಬ್ ಸುಲೈಮಾನ್ ಹೇಳಿದರು. ಪಿಡಿಓ ವರ್ಗಾವಣೆಗೆ ನಮ್ಮ ವಿರೋಧವಿದೆ. ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಸದಸ್ಯ ಪುರುಷೋತ್ತಮ ರೈ ಹೇಳಿದರು. ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಪಿಡಿಓ ನಾಗೇಶ್ ಮಾತನಾಡಿ, ವರ್ಗಾವಣೆಯ ಬಗ್ಗೆ ಆದೇಶ ಬಂದಿದೆ. ಅಧಿಕಾರಿಯಾಗಿ ಸರಕಾರದ ಆದೇಶ ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ನನ್ನ ಅವಧಿಯಲ್ಲಿ ಅಭಿವೃದ್ಧಿಗೆ ನನ್ನಿಂದಾಗುವ ರೀತಿಯಲ್ಲಿ ಸಹಕಾರ ನೀಡಿದ್ದೇನೆ ಎಂದರು. ಪಿಡಿಓರವರ ವರ್ಗಾವಣೆ ಮಾಡದಂತೆ ಎಲ್ಲಾ ಸದಸ್ಯರ ನಿಯೋಗ ಶಾಸಕರನ್ನು ಭೇಟಿಯಾಗಿ ಮನವಿ ಮಾಡಲು ನಿರ್ಣಯಿಸಲಾಯಿತು. ಪಿಡಿಓ ವರ್ಗಾವಣೆಯ ಆದೇಶ ಹಿಂಪಡೆಯುವಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಹಾಗೂ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಶಿಪಾರಸ್ಸು ಮಾಡುವಂತೆ ಶಾಸಕರಿಗೂ ಮನವಿ ಮಾಡಲು ನಿರ್ಣಯಿಸಲಾಯಿತು.
ಫಾರ್ಮ್‌ಹೌಸ್‌ಗೆ ಡೋರ್ ನಂಬರ್ ನೀಡಬೇಕು:

ಈ ಭಾಗದಲ್ಲಿ ಶೇ.80ರಷ್ಟು ಮಂದಿ ಕೃಷಿಕರಿದ್ದಾರೆ. ಅವರು ತಮ್ಮ ನಿವೇಶನದಲ್ಲಿ ಫಾರ್ಮ್‌ಹೌಸ್ ನಿರ್ಮಿಸಿದರೆ ಅದಕ್ಕೆ ಪಂಚಾಯತ್‌ನಿಂದ ಡೋರ್ ನಂಬರ್ ನೀಡುವುದಿಲ್ಲ. ಇದರಿಂದಾಗಿ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕಕ್ಕೆ ಅಸಾಧ್ಯವಾಗಿದೆ. ಪ.ಜಾತಿ ಮತ್ತು ಪ.ಪಂಗಡದವರಿಗೆ ಮನೆ ಕಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ ಮನೆ ನಿರ್ಮಿಸುವ ಅಡಿಸ್ಥಳದ ಕನ್ವರ್ಷನ್‌ಗೆ ಅವಕಾಶ ನೀಡಬೇಕು. ಪರಾಭಾರೆ ನಿಷೇದ ಹಾಗೆಯೇ ಮುಂದುವರಿಯಲಿ ಎಂದು ಸದಸ್ಯ ಹರೀಶ್ ನಾಯಕ್ ವಾಗ್ಲೆ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ತಳಮಟ್ಟದ ಅಭಿಪ್ರಾಯ ಪಡೆಯಲಿ:

ಬೆಂಗಳೂರಿನಲ್ಲಿ ಕುಳಿತು ಕಾನೂನು ಜಾರಿಗೊಳಿಸುವುದರಿಂದ ತಳಮಟ್ಟದ ಜನರು ಬಹಳಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ಹೊಸ ಕಾನೂನು ಜಾರಿಗೊಳಿಸುವಾಗ ಬೌಗೋಳಿಕವಾಗಿ ಜಾರಿ ಮಾಡಬೇಕು. ಅಲ್ಲದೆ ಗ್ರಾಮೀಣ ಪ್ರದೇಶದ ತಳಮಟ್ಟದ ಜನರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಕಾನೂನಿನ ಕರಡು ಪ್ರತಿಯನ್ನು ಪಂಚಾಯತ್‌ಗೆ ಕಳುಹಿಸಿ, ಅಭಿಪ್ರಾಯ ಪಡೆದುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಕಾನೂನು ಜಾರಿಗೊಳಿಸಬೇಕು ಎಂದು ಸದಸ್ಯ ಹರೀಶ್ ನಾಯಕ್ ಆಗ್ರಹಿಸಿದರು. ಕಠಿಣ, ಘೋರ ಕಾನೂನು ಜಾರಿಗೊಳಿಸಿ, ಕಟ್ಟ ಕಡೆಯ ಜನರಿಗೆ ಅನ್ಯಾಯವಾದರೆ ಪಕ್ಷ ಬೇಧ ಮರೆತು ಧರಣಿ ನಡೆಸುವುದಾಗಿ ಸದಸ್ಯ ಪುರುಷೋತ್ತಮ ರೈ ತಿಳಿಸಿದರು. ಪಂಚಾಯತ್ ಸಿಬಂದಿಗಳ ಒಕ್ಕೂಟದಂತೆ ಸದಸ್ಯರ ಒಕ್ಕೂಟವೂ ಇತ್ತು. ಅದು ಮುರಿದು ಹೋಗಿದೆ. ಒಕ್ಕೂಟ ಇದ್ದರೆ ಮಾತ್ರ ನಮಗೂ ಬಲ ಬರುತ್ತದೆ. ಹೀಗಾಗಿ ಸದಸ್ಯರ ಒಕ್ಕೂಟವೂ ಆವಶ್ಯಕ ಇದೆ ಎಂದು ಸದಸ್ಯ ವಸಂತರವರು ತಿಳಿಸಿದರು.

ಸೋಲಾರ್ ಪಂಪ್ ರಾಜ್ಯದಲ್ಲೇ ಪ್ರಥಮ
ಕುಡಿಯುವ ನೀರಿನ ಘಟಕಗಳ ಪಂಪು ಚಾಲನೆಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಆರ್ಯಾಪು ಪಂಚಾಯತ್‌ನಲ್ಲಿ ಸೋಲಾರ್ ಅಳವಡಿಸಲಾಗಿದೆ. ಇದಿರಿಂದ ವಿದ್ಯುತ್ ಉಳಿತಾಯ ಆಗಲಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 11 ಘಟಕಗಳಿವೆ. ಇದರಲ್ಲಿ ಒಂದು ಘಟಕ ಈಗಾಗಲೇ ಸೋಲಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದು ಘಟಕದ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಘಟಕಕ್ಕೆ ಅಮೃತ ಗ್ರಾಮ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಲಾಗಿದೆ. ಉಳಿದ ಎಂಟು ಘಟಕಗಳಿಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಸೋಲಾರ್ ಅಳವಡಿಸಿದರೆ ಇದು ರಾಜ್ಯದಲ್ಲೇ ಪ್ರಥಮವಾಗಲಿದೆ. ಎಲ್ಲಾ ಘಟಕಗಳಿಗೂ ಸೋಲಾರ್ ಅಳವಡಿಸಿ ವಿದ್ಯುತ್ ಬಿಲ್ ಹೊರೆ ತಪ್ಪಿಸಲಾಗುವುದಲ್ಲದೆ ಇದರಿಂದ ಗ್ರಾಮಸ್ಥರಿಗೆ ನೀರಿನ ಶುಲ್ಕದ ಹೊರೆ ಕಡಿಮೆಯಾಗಲಿದೆ ಎಂದು ಪಿಡಿಓ ನಾಗೇಶ್ ತಿಳಿಸಿದರು.

ಸ್ಮಶಾನ ಜಾಗ ಅತಿಕ್ರಮಣ:
ಸ್ಮಶಾನ ನಿರ್ಮಾಣಕ್ಕೆ ಕುರಿಯ ಓಟೆತ್ತಿಮಾರ್‌ನಲ್ಲಿ ಜಾಗ ಗುರುತಿಸಿದ್ದರೂ ಇನ್ನೂ ಸರ್ವೆ ಆಗಿಲ್ಲ. ತಾಲೂಕು ಸರ್ವೆಯರ್ ಸರ್ವೆ ಮಾಡಲು ಬಂದಿದ್ದರೂ ಸರ್ವೆ ನಡೆಸಿಲ್ಲ. ಅಲ್ಲಿ ಜಾಗ ಅತಿಕ್ರಮಣ ಆಗುತ್ತಿದೆ. ಸ್ಮಶಾನಕ್ಕೆ ಗುರುತಿಸಿ ಜಾಗವನ್ನು ಸರಿಯಾಗಿ ಸರ್ವೆ ನಡೆಸಿ ಗುರುತಿಸಬೇಕು. ಅತಿಕ್ರಮಣ ತೆರವುಗೊಳಿಸಬೇಕು. ಪಕ್ಕದಲ್ಲಿರುವ ಜಾಗಕ್ಕೆ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದಾರೆ. ಅಲ್ಲಿರುವ ಜಾಗ ಸರಕಾರಿ ಜಾಗವಾಗಿದೆ. ಅದು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಬೇಕು ಎಂದು ಸದಸ್ಯ ಪುರುಷೋತ್ತಮ ರೈ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಪಿಡಿಓ ನಾಗೇಶ್‌ರವರು, ಸ್ಮಶಾನಕ್ಕೆ ಗುರುತಿಸಿದ ಜಾಗವನ್ನು ಸಮತಟ್ಟು ಮಾಡಿದರೆ 20 ಸೆಂಟ್ಸ್ ಜಾಗವಿದೆ. ಅದಕ್ಕೆ ರಸ್ತೆ ಸೌಲಭ್ಯವೂ ಇದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನವಿದ್ದು ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು. ಉಳಿದ 50ಸೆಂಟ್ ಜಾಗಕ್ಕೆ ಅಕ್ರಮ ಸಕ್ರಮ ಅರ್ಜಿಹೋಗಿದೆ ಎಂದು ತಿಳಿಸಿದರು.

ಸಿಬಂದಿಗಳ ಹೋರಾಟಕ್ಕೆ ಬೆಂಬಲ:
ಪಂಚಾಯತ್‌ನ ಡಿ ಗ್ರೂಪ್ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುವ ಹೋರಾಟದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ ನೌಕರರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ ಸದಸ್ಯ ಪುರುಷೋತ್ತಮ ರೈಯವರು ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.

ಸದಸ್ಯರಾದ ನೇಮಾಕ್ಷ ಸುವರ್ಣ, ಶ್ರೀನಿವಾಸ ರೈ, ನಾಗೇಶ್, ಗಿರೀಶ್, ಅಶೋಕ, ಕಸ್ತೂರಿ, ಕಲಾವತಿ, ರೇವತಿ, ರಶೀದಾ, ದೇವಕಿ ಉಪಸ್ಥಿತರಿದ್ದರು. ಪಿಡಿಓ ನಾಗೇಶ್ ಸ್ವಾಗತಿಸಿದರು, ಲೆಕ್ಕಸಹಾಯಕ ಮೋನಪ್ಪ ವಂದಿಸಿದರು.

 

 

LEAVE A REPLY

Please enter your comment!
Please enter your name here