ವಿಜಯ ಕರ್ನಾಟಕ ಪ್ರಸ್ತುತಿಯ ವಿಕ ಯಕ್ಷಗಾನ ಫೆಸ್ಟ್ 2022- ಸಾರ್ವಜನಿಕರಿಗೆ ಉಚಿತ ಪ್ರವೇಶ
ಪುತ್ತೂರು: ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಯುವ ಸಮುದಾಯವನ್ನು ಆಕರ್ಷಿಸುವ ಸದುದ್ದೇಶದಿಂದ ವಿಜಯ ಕರ್ನಾಟಕ ಪತ್ರಿಕೆಯು ಯಕ್ಷಗಾನ ಫೆಸ್ಟ್ ಎಂಬ ವಿನೂತನ ಕಾರ್ಯಕ್ರಮವನ್ನು ಈ ವರ್ಷದಿಂದ ಆಯೋಜಿಸುತ್ತಿದೆ. ಯಕ್ಷಗಾನ ಫೆಸ್ಟ್ನ ಈ ವರ್ಷದ 2ನೇ ಕಾರ್ಯಕ್ರಮ ನ. 4ರಂದು ಶುಕ್ರವಾರ ಸಂಜೆ 4 ಗಂಟೆಯಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಮಂಗಳೂರಿನಲ್ಲಿ ಆಯೋಜಿಸಿದ್ದ ಮೊದಲ ಕಾರ್ಯಕ್ರಮ ಅದ್ಭುತ ಯಶಸ್ವಿಯಾಗಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಹಿನ್ನೆಲೆಯಲ್ಲಿ 2ನೇ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ.
ತೆಂಕು- ಬಡಗು ತಿಟ್ಟುಗಳ ದಿಗ್ಗಜರ ಕೂಡುವಿಕೆಯಿಂದ ವಿನೂತನ ಪ್ರಯೋಗ `ಯಕ್ಷ ವಿಜಯ- ಗಾನ ನಾಟ್ಯ ವೈಭವ’ ಎಂಬ ನವರಸ ಪಾಕ ಕಾರ್ಯಕ್ರಮ ಇದಾಗಿದೆ. ಯಕ್ಷಗಾನದಲ್ಲಿ ದ್ವಂದ್ವ ಅರ್ಥಗಾರಿಕೆ ಪರಂಪರೆಯಿಂದ ಬಂದಿದ್ದು, ಹಾಡುಗಾರಿಕೆಯಲ್ಲಿ ದ್ವಂದ್ವ ಇತ್ತೀಚಿನ ಸಂಪ್ರದಾಯ. ಯಕ್ಷ ವಿಜಯದಲ್ಲಿ ತೆಂಕು ಹಾಗೂ ಬಡಗು ಶೈಲಿಯ 6 ಭಾಗವತರ ಹಾಡುಗಾರಿಕೆ ಇದೆ. ಒಂದೇ ಹಾಡನ್ನು ಅವರವರ ಶೈಲಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ತೆಂಕು ಹಾಗೂ ಬಡಗು ಶೈಲಿಯ ನೃತ್ಯವೂ ಏಕಕಾಲದಲ್ಲಿ ಅನಾವರಣಗೊಳ್ಳಲಿದೆ. ಹಾಡಿಗೆ ಪೂರಕವಾಗಿ ದ್ವಂದ್ವ ಮದ್ದಳೆ ಹಾಗೂ ಚೆಂಡೆಗಳ ಝೇಂಕಾರವಿರಲಿದೆ.
ಶ್ರೇಷ್ಠ ಕಲಾವಿದರು
ಭಾಗವತಿಕೆಯಲ್ಲಿ ಹಲವು ಆವಿಷ್ಕಾರಗಳನ್ನು ಮಾಡಿರುವ 6 ಭಾಗವತರ ಸಂಗಮ ಇಲ್ಲಿರಲಿದೆ. ಗಾನದಲ್ಲಿ ಮಾಧುರ್ಯ, ರಾಗ ತಾಳಗಳ ಸಮಪಾಕ, ಸುಮಧುರ ಕಂಠ, ಪಾತ್ರಕ್ಕೆ ಕಾಲಕ್ಕೆ ತಕ್ಕಂತೆ ರಾಗಗಳ ಬಳಕೆ, ರಾಗಗಳ ರಸೋತ್ಕರ್ಷ, ರಾಗ ತಾಳಗಳ ಸಮನ್ವಯ ಮೂಡಿಬರಲಿದೆ. ಗಾನ ಗಂಧರ್ವ, ಗಾನ ಮಂದಾರ, ಗಾನ ಕೋಗಿಲೆ, ರಸರಾಗ ಚಕ್ರವರ್ತಿ, ರಾಗ ಸ್ವರಸಿರಿ, ಸ್ವರಸ್ನೇಹ ಸಂಜೀವಿನಿ ಮುಂತಾದ ಬಿರುದಾವಳಿ ಪಡೆದಿರುವ ಪ್ರತಿಭಾನ್ವಿತರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ ಕಕ್ಕೆಪದವು, ಗಣೇಶ್ ಭಟ್ ಹೊಸಮೂಲೆ, ಜನ್ಸಾಲೆ ರಾಘವೇಂದ್ರ ಆಚಾರ್, ರಾಘವೇಂದ್ರ ಮಯ್ಯ ಹಾಲಾಡಿ, ಚಂದ್ರಕಾಂತ್ ಮೂಡುಬೆಳ್ಳೆ ಅವರ ಹಾಡುಗಾರಿಕೆ ಇದೆ.
ತೆಂಕು ಶೈಲಿಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಮಯೂರ್ ನಾಯ್ಗ ಹಾಗೂ ಬಡಗುಶೈಲಿಯಲ್ಲಿ ಸುನಿಲ್ ಭಂಡಾರಿ ಮತ್ತು ಸುಜನ್ ಹಾಲಾಡಿ ಅವರು ಚೆಂಡೆ ಮದ್ದಲೆಯಲ್ಲಿ ಅಬ್ಬರಿಸಲಿದ್ದಾರೆ. ಚಕ್ರತಾಳದಲ್ಲಿ ರಾಜೇಂದ್ರ ಸಹಕರಿಸಲಿದ್ದಾರೆ. ನಾಟ್ಯ ವೈಭವದಲ್ಲಿ ಅಕ್ಷಯ ಕುಮಾರ್ ಮಾರ್ನಾಡು ಮತ್ತು ರಕ್ಷಿತ್ ಶೆಟ್ಟಿ ಪಡ್ರೆಯವರ ನಿಹಾರಿಕಾ ಮತ್ತು ಉಪಾಸನಾ ಪಂಜರಿಕೆ ಮೈನವಿರೇಳಿಸಲಿದೆ.
ನಾಟ್ಯ ವೈಭವದ ಜತೆಯಲ್ಲಿ ಒಂದು ಗಂಟೆಯ ಯಕ್ಷಗಾನ ಪ್ರಸಂಗವೂ ಪ್ರಸ್ತುತಗೊಳ್ಳಲಿದೆ. ಮೋಕ್ಷ ಸಂಗ್ರಾಮ ಪ್ರಸಂಗವೂ ತೆಂಕು ಹಾಗೂ ಬಡಗು ಶೈಲಿಯ ಕೂಡುವಿಕೆಯಿಂದ ನಡೆಯಲಿದೆ. ಭಾಗವತಿಕೆಯಲ್ಲಿ ಗಣೇಶ್ ಭಟ್ ಹೊಸಮೂಲೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ನಡುವಿನ ದ್ವಂದ್ವ ನಡೆಯಲಿದೆ. ಸುಧನ್ವನಾಗಿ ಬಡಗು ಶೈಲಿಯ ಮಂಕಿ ಈಶ್ವರ ನಾಯ್ಕ, ಅರ್ಜುನನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಕೃಷ್ಣನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮಿಂಚಲಿದ್ದಾರೆ. ಕಾರ್ಯಕ್ರಮವನ್ನು ಕದ್ರಿ ನವನೀತ ಶೆಟ್ಟಿ ನಿರೂಪಿಸಲಿದ್ದಾರೆ. ಮಾಧವ ಬಂಗೇರ ಕೊಳತ್ತಮಜಲು ಸಹಕರಿಸಲಿದ್ದಾರೆ.
ವಿಶೇಷತೆ
ಸಂಜೆ 4 ರಿಂದ ಕಾರ್ಯಕ್ರಮ ಆರಂಭ.
ಏಕಕಾಲದಲ್ಲಿ ತೆಂಕು- ಬಡಗು ಶೈಲಿಯ ಭಾಗವತಿಕೆಯ ಜುಗಲ್ಬಂದಿ
ತೆಂಕು- ಬಡಗು ಶೈಲಿಯ ಮದ್ದಲೆಯ ಜುಗಲ್ ಬಂದಿ
ತೆಂಕು -ಬಡಗು ಶೈಲಿಯ ಚೆಂಡೆಯ ಜುಗಲ್ ಬಂದಿ
ತೆಂಕು- ಬಡಗು ಶೈಲಿಯ ನೃತ್ಯ ವೈಭವ
ತೆಂಕು – ಬಡಗು ಶೈಲಿಯ ಅರ್ಥಗಾರಿಕೆ ದ್ವಂದ್ವ
ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 9480571417, 9686504828 9341126137ಅಥವಾ 9448500007ಸಂಪರ್ಕಿಸಬಹುದು.