ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ಗೆ ಒಳಪಟ್ಟ ಉಜ್ವಲ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ 2022 ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಅವರಿಗೆ ಸನ್ಮಾನ ಕಾರ್ಯಕ್ರಮ ನೆಲ್ಯಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಂಜೀವನಿ ಒಕ್ಕೂಟದ ತಾಲೂಕು ಕಾರ್ಯ ವ್ಯವಸ್ಥಾಪಕ ಜಗತ್ರವರು ಮಾತನಾಡಿ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿರುವ ಗಂಗಾಧರ ಶೆಟ್ಟಿಯವರು ತನ್ನ ಆಡಳಿತದ ಅವಧಿಯಲ್ಲಿ ಉಜ್ವಲ ಸಂಜೀವಿನಿ ಒಕ್ಕೂಟವನ್ನು ಉದ್ಘಾಟಿಸಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿದ್ದರು. ಅವರ ನಿಸ್ವಾರ್ಥ ಸಮಾಜ ಸೇವೆಗೆ ಇದೀಗ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಈ ಮೂಲಕ ಅವರು ನೆಲ್ಯಾಡಿಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ ಎಂದರು. ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಜಗತ್ರವರು, ನೆಲ್ಯಾಡಿ ಸಂಜೀವಿನಿ ಒಕ್ಕೂಟದ ವತಿಯಿಂದ 50 ಸ್ವಸಹಾಯ ಸಂಘಗಳು ಸ್ವ ಉದ್ಯೋಗಗಳನ್ನು ನಡೆಸುವುದರ ಮೂಲಕ ಸರಕಾರದ ಸೌಲಭ್ಯವನ್ನು ಪಡೆದುಕೊಂಡಿದೆ. ಒಕ್ಕೂಟದ ಅಧ್ಯಕ್ಷೆ ಹೇಮಾವತಿ ಶಿವರಾಮ ಗೌಡರಿಗೆ ಮತ್ತು ಒಕ್ಕೂಟದ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ ಶೆಟ್ಟಿ ಹೊಸಮನೆಯವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲರನ್ನೂ ಪ್ರೀತಿಸಿ ಜನಪರ ಕೆಲಸಗಳನ್ನು ಮಾಡಿದಾಗ ದೇವರು ಈ ರೀತಿಯಲ್ಲಿ ಪ್ರತಿಫಲವನ್ನು ನೀಡುತ್ತಾನೆ. ನನ್ನ ಸೇವೆಯನ್ನು ಪರಿಗಣಿಸಿ ನನ್ನಲ್ಲಿ ವಿಶೇಷವಾದ ಅಭಿಮಾನವನ್ನು ಇಟ್ಟು ಗೌರವಿಸಿದಂತಹ ಸಂಜೀವಿನಿ ಒಕ್ಕೂಟದ ಎಲ್ಲಾ ಸಹೋದರಿಯರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು. ಒಕ್ಕೂಟದ ಅಧ್ಯಕ್ಷೆ ಹೇಮಾವತಿ ಶಿವರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಸದಸ್ಯರಿಗೆ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಸಲಾಂ ಬಿಲಾಲ್ ಪಡುಬೆಟ್ಟು, ರೇಷ್ಮಾ, ಲಲಿತಾ ಮಾದೇರಿ, ಪುಷ್ಪಾ ಪಡುಬೆಟ್ಟು, ಒಕ್ಕೂಟದ ಸದಸ್ಯೆಯರು, ಗ್ರಾ.ಪಂ.ಸಿಬ್ಬಂದಿಗಳು ಭಾಗವಹಿಸಿದ್ದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯೆ ಲೈಲಾ ತೋಮಸ್ ಸ್ವಾಗತಿಸಿ, ಎಲ್ಸಿಆರ್ಪಿ ಚಿತ್ರಾ ರಾಮನಗರ ವಂದಿಸಿದರು. ಒಕ್ಕೂಟದ ಪದಾಧಿಕಾರಿ ವನಜ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಗಿತ್ತು.