ಬಸ್ ರೈಲು ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ, ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಯನ್ನು ನೇಮಿಸುವಂತೆ ಕನ್ನಡ ಸೇನೆಯಿಂದ ಡಿಸಿಗೆ ಮನವಿ

0

ಪುತ್ತೂರು : ಬಸ್, ರೈಲ್ವೇ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ನೇಮಕ ಮಾಡಬೇಕು, ದ.ಕ.ಜಿಲ್ಲೆಯ ಕಂಪೆನಿ, ಕೈಗಾರಿಕೆಗಳಲ್ಲಿ ಸ್ಥಳೀಯರನ್ನು ನೇಮಕ ಮಾಡಬೇಕು ಹಾಗೂ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ಕನ್ನಡಸೇನೆ ದ.ಕ.ಜಿಲ್ಲಾ ಸಮಿತಿಯಿಂದ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ರವರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಖಾಸಗಿ ಬಸ್ಸುಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕಗಳನ್ನು ಅಥವಾ ಹೆಸರಿನ ಫಲಕಗಳನ್ನು ಉದ್ದೇಶ ಪೂರ್ವಕವಾಗಿಯೇ ಅಳವಡಿಸುತ್ತಿಲ್ಲ ಹಾಗೂ ಟಿಕೆಟುಗಳ ಮುಂಗಡ ಕಾದಿರಿಸುವ ಕೊಠಡಿಗಳಲ್ಲಿ ಕನ್ನಡ ಭಾಷೆ ಬಾರದ ಸಿಬ್ಬಂದಿಗಳನ್ನು ನೇಮಿಸಿ ಕನ್ನಡಕ್ಕೆ ಅವಮಾನ ಮಾಡುವುದರಿಂದ ಇಲ್ಲಿನ ಜನಸಾಮಾನ್ಯರಿಗೆ ದಿನನಿತ್ಯದ ಚಟುವಟಿಕೆಗಳಲ್ಲಿ ತೊಂದರೆಯಾಗುತ್ತಿದ್ದು, ಕರ್ನಾಟಕದಲ್ಲಿ ಕನ್ನಡಿಗರೇ ಅವಮಾನ ಪಡುವಂತಹದಾಗಿರುತ್ತದೆ. ಈ ಬಗ್ಗೆ ತಾವು ಎಲ್ಲಾ ಇಲಾಖೆಗಳಿಗೆ ಸೂಕ್ತ ಸುತ್ತೋಲೆ ಹೊರಡಿಸಬೇಕು. ದ.ಕ.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡಲು ಬರುವ ಸಿಬ್ಬಂದಿಗಳನ್ನು ನಿಯೋಜಿಸದೆ ಇರುವುದರಿಂದ ಇಲ್ಲಿಯ ಜನರಿಗೆ ಬ್ಯಾಂಕಿನ ಸಿಬ್ಬಂದಿಗಳ ಜೊತೆ ವ್ಯವಹಾರ ನಡೆಸಲು ಅಸಾಧ್ಯವಾಗಿ ಅನೇಕ ಬಾರಿ ಆರ್ಥಿಕ ವ್ಯವಹರಣೆಯಲ್ಲಿ ಗೊಂದಲ ಉಂಟಾಗಿದ್ದಲ್ಲದೆ, ಅವಿದ್ಯಾವಂತ ಜನರು ಬ್ಯಾಂಕಿನ ಕಡೆ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ತಾವು ಸೂಕ್ತ ನಿರ್ದೇಶನಗಳನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಈ ಭಾಗದ ಜನರು ತಮ್ಮ ಅತ್ಯಮೂಲ್ಯವಾದ ಭೂಮಿಗಳನ್ನು, ತಮ್ಮ ಸ್ಥಿರಾಸ್ತಿಗಳನ್ನು, ಈ ಜಿಲ್ಲೆಯಲ್ಲಿ ಇಲ್ಲಿನ ಜನರಿಗೆ ಹಾಗೂ ಯುವಕರಿಗೆ ಉದ್ಯೋಗ ದೊರಕಬೇಕು ಎಂಬ ಮಹಾದಾಸೆಯೊಂದಿಗೆ ಕೈಗಾರಿಕೆ ಸ್ಥಾಪನೆಗಾಗಿ ಧಾರೆ ಎರೆದಿರುತ್ತಾರೆ. ಆದರೆ ಇಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಗಳು ಹಾಗೂ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಯಾವುದೇ ‘ಎ’ ದರ್ಜೆಯ ಅಥವಾ ‘ಡಿ’ ದರ್ಜೆಯ ನೌಕರಿಗಳನ್ನು ನೀಡದೆ ಸತಾಯಿಸುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸರೋಜಿನಿ ಮಹಿಷಿ ವರದಿಯಲ್ಲಿ ಸೂಚಿಸಿರುವ ನಿಯಮಾವಳಿಗಳನ್ನು ಪಾಲಿಸದೆ ಇಲ್ಲಿನ ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಎಸಗುತ್ತಿದ್ದಾರೆ. ಇಂತಹ ಕಂಪೆನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.ಮುಂದೆ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ತಾವು ಲಿಖಿತವಾಗಿ ಈ ಬಗ್ಗೆ ಶರತ್ತು ವಿಧಿಸಿ ಪಾಲಿಸುವಂತೆ ನಿರ್ದೇಶಿಸಬೇಕು. ದ.ಕ. ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯೆಂದು ಬಿಂಬಿಸಿಕೊಂಡು ಮುಚ್ಚುವ ಹುನ್ನಾರ ಖಾಸಗಿ ಕಾಲೇಜುಗಳ ಲಾಭಿಯಿಂದ ಆ ಭಾಗದ ಬಿ.ಇ.ಓ.ಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ನಡೆಯುತ್ತಿದ್ದು ತಾವು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ನೈಜ ಕಾರಣ ಏನು ಎಂಬ ಬಗ್ಗೆ ಪತ್ತೆ ಮಾಡಿ, ವರದಿ ತರಿಸಿಕೊಂಡು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉತ್ಕೃಷ್ಟ ಮಟ್ಟಕ್ಕೆ ಅಭಿವೃದ್ಧಿ ಪಡಿಸುವಂತೆ ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ಸೂಚಿಸಬೇಕು.
ದ.ಕ. ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕನ್ನಡ ನಾಡು, ನುಡಿ ಸಂಸ್ಕೃತಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳನ್ನು ನಡೆಸುವ ಪೂರ್ವಭಾವಿ ಸಭೆಯನ್ನು ನಡೆಸಿ ಸದ್ರಿ ಸಭೆಗೆ ಕನ್ನಡ ಪರ ಸಂಘಟನೆಯ ಮುಖಂಡರನ್ನು ಕನ್ನಡ ಪರ ಸಾಹಿತಿಗಳನ್ನು, ಕನ್ನಡ ಲೇಖಕರನ್ನು, ಕನ್ನಡ ಪ್ರಾಧ್ಯಾಪಕರುಗಳನ್ನು ಕರೆಸಿ ಪೂರ್ವಭಾವಿ ಚರ್ಚೆ ನಡೆಸಿ, ನಂತರದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಕಾರ್ಯಕ್ರಮಕ್ಕೂ ಕೂಡಾ ಕನ್ನಡ ಮುಖಂಡರುಗಳನ್ನು ಹಾಗೂ ಮೇಲೆ ಹೇಳಿದ ಕನ್ನಡದ ಸೇವೆ ಮಾಡುವವರನ್ನು ಆಹ್ವಾನಿಸಿ ಕನ್ನಡದ ಕಾರ್ಯಕ್ರಮಗಳು ಯಾವುದೇ ವಿರೋಧಾಭಾಸವಿಲ್ಲದೇ ನಡೆಯುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕನ್ನಡ ಸೇನೆ ದ.ಕ.ಜಿಲ್ಲಾಧ್ಯಕ್ಷ ಚಂದ್ರಶೇಖರ, ಕಾರ್ಯಾಧ್ಯಕ್ಷ ಗುರುಚಂದ್ರ ಹೆಗಡೆ, ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ, ಜಿಲ್ಲಾ ಕಾರ್ಯದರ್ಶಿ ಪ್ರವೀಣ ಶೆಟ್ಟಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗುರುಪ್ರಸಾದ್, ಸುರತ್ಕಲ್ ತಾಲೂಕು ಅಧ್ಯಕ್ಷ ಸಂಜೀವ ಸುವರ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here