ಪುತ್ತೂರು: ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಮಂಜೂರಾದ ಯೋಜನೆಗಳು, ಅನುದಾನಗಳ ಹೆಸರಿನಲ್ಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ನೀವು ಪುತ್ತೂರಿಗೆ ತಂದ ಯೋಜನೆಗಳ ವಿವರಗಳನ್ನು ನೀಡಿ. ನಿಮ್ಮ ಅನುದಾನವನ್ನು, ನಿಮ್ಮ ಪ್ರಯತ್ನದಿಂದ ಬಂದ ಅನುದಾನದ ಕೆಲಸದ ವಿಚಾರದಲ್ಲಿ ಬಿಲ್ಡಪ್ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ನ.7ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಲಯದಲ್ಲಿ ಗುರುತಿಸಿದ ಕೆಲ ಭಾಗಗಳಿಗೆ ಕಿರು ಸೇತುವೆ ರಚನೆ ಮಾಡಲು ಅನುದಾನ ಬಿಡುಗಡೆಯಾಗಿದೆ. ಆ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕರು ಮತ್ತು ಸಂಸದರು ನೆರವೇರಿಸಿದ್ದಾರೆ. ಅಲ್ಲಿ ಭಾಷಣ ಮಾಡುವಾಗ ಶಾಸಕರು ಕೆಲವು ಎಲುಬಿಲ್ಲದ ನಾಲಗೆಗಳು ಏನೆಲ್ಲಾ ಮಾತನಾಡುತ್ತಿವೆ ಎನ್ನುವ ಮಾತನ್ನು ಆಡಿದ್ದರು. ಇದೆಲ್ಲ ನನ್ನ ಪ್ರಯತ್ನ, ನಾನು ಬಿಲ್ಡಪ್ ಕೊಡದೆ ಬೇರೆ ಯಾರು ಬಿಲ್ಡಪ್ ಕೊಡುವುದು ಎನ್ನುವ ಮಾತು ಹೇಳಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಗಳು, ರಸ್ತೆಗಳನ್ನು ನಿರ್ವಹಣೆ ಮಾಡುವುದು ರಾಷ್ಟ್ರೀಯ ಹೆದ್ದಾರಿ ನಿಗಮ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಆ ಇಲಾಖೆ ಮಾಡುತ್ತದೆ. ಈ ಭಾಗದ ಸಂಪ್ಯ, ಸಂಟ್ಯಾರಿನಲ್ಲಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಇಲಾಖೆಯು ಪ್ರಸ್ತಾವನೆ ಸಲ್ಲಿಸಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಇಲಾಖೆಯವರ ಪ್ರಯತ್ನದಿಂದ ಆದ ಅನುದಾನವನ್ನು ತಾವು ತಂದದ್ದು ಎಂದು ಶಾಸಕರು ಮತ್ತು ಸಂಸದರು ಶಂಕುಸ್ಥಾಪನೆ ನೆರವೇರಿಸುವ ಮೂಲಕ ಬಿಲ್ಡಪ್ ಕೊಡ್ತಿದ್ದಾರೆ. ಇತಿಹಾಸದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಿರುಸೇತುವೆ ಮತ್ತು ಚರಂಡಿ ಕಾಮಗಾರಿಗೆ ಯಾರೂ ಶಂಕುಸ್ಥಾಪನೆ ಮಾಡಿಲ್ಲ ಎಂದ ಅವರು, ಸಂಸದ ನಳಿನ್ ಕುಮಾರ್ ಕಟೀಲು ಅಭಿವೃದ್ಧಿ ಪರ ಕೆಲಸ ಮಾಡಿಲ್ಲ. ಇಲಾಖೆಗಳಲ್ಲಿ ಏನೆಲ್ಲ ಕೆಲಸ ಆಗಿದೆ ಎಂದು ಹುಡುಕಿ ಈಗ ಬಿಲ್ಡಪ್ ಕೊಡ್ತಿದ್ದಾರೆ ಎಂದು ಆರೋಪಿಸಿದರು.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರಿನಿಂದ ಮಡಿಕೇರಿಯವರೆಗೆ ಚತುಷ್ಪಥ ರಸ್ತೆಗೆ ಅನುಮೋದನೆ ದೊರೆತಿದೆ. ಮುಂದಕ್ಕೆ ಮಾಣಿಯಿಂದ ಸಂಪಾಜೆಯವರೆಗಿನ ರಸ್ತೆಯನ್ನು ಚತುಷ್ಪಥ ಮಾಡುವ ಪ್ರಸ್ತಾವನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುಳ್ಳು ಹೇಳಿ ಬಿಲ್ಡಪ್ ಕೊಟ್ಟಿದ್ದಾರೆ. ನಾವು ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಡಿಪಿಆರ್ ಸಲ್ಲಿಸಿಲ್ಲ ಎನ್ನುವ ಮಾತು ಹೇಳಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಂಬಿಕೆ ಇಲ್ಲ ಎಂದು ಮಹಮ್ಮದ್ ಅಲಿ ಹೇಳಿದರು.
ಪುತ್ತೂರು-ಉಪ್ಪಿನಂಗಡಿ ರಸ್ತೆಗೆ ಶಕುಂತಳಾ ಶೆಟ್ಟಿ ಅನುದಾನ ಮಂಜೂರು ಮಾಡಿಸಿದ್ದರು:
ಪುತ್ತೂರು ಉಪ್ಪಿನಂಂಗಡಿ ರಸ್ತೆಗೆ 12 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೆನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. 2014ರಲ್ಲಿ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದಾಗ ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ದ್ವಿಪಥ ಮಾಡಿಸಲು ಬಜೆಟ್‌ನ `ಅಪೆಂಡಿಕ್ಸ್ ಸಿ’ಗೆ ಸೇರಿಸಿ ಅನುದಾನ ಮಂಜೂರು ಮಾಡಿಸಿದ್ದಾರೆ. ಶಕುಂತಳಾ ಶೆಟ್ಟಿಯವರು ಮಂಜೂರು ಮಾಡಿಸಿದ ಅನುದಾನವನ್ನು ಇವರು, ನಾನು ಮಾಡಿಸಿದ್ದು ಎಂದು ಬಿಲ್ಡಪ್ ಕೊಡುತ್ತಿದ್ದಾರೆ. 133 ಕೋಟಿ ರೂ.ಗಳನ್ನು ಪುತ್ತೂರು ನಗರದ ಕುಡಿಯುವ ನೀರಿನ ಯೋಜನೆಗೆ ಮಂಜೂರು ಮಾಡಿಸಿದ್ದೆನೆ ಎಂದು ಹೇಳಿದ್ದರು. ಈ ಯೋಜನೆಗೆ ವಿನಯ್ ಕುಮಾರ್ ಸೊರಕೆಯವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ನಮ್ಮ ಬೇಡಿಕೆಯ ಪ್ರಕಾರ ಪುತ್ತೂರು ನಗರಕ್ಕೆ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗೆ ಅನುದಾನ ಮಂಜೂರು ಮಾಡಿದ್ದರು. ಆಗ ಜಯಂತಿ ಬಲ್ನಾಡು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಆಡಳಿತವಿತ್ತು. ಸಂಜೀವ ಮಠಂದೂರು ಶಾಸಕರಾಗುವ ಮೊದಲೇ ಅದು ಡಿಪಿಆರ್ ಆಗಿ ಟೆಂಡರ್ ಹಂತದಲ್ಲಿತ್ತು. ಇವರು ಶಾಸಕರಾದ ಬಳಿಕ ಅದನ್ನು ಉದ್ಘಾಟನೆ ಮಾಡಿದ್ದು ಸಚಿವರಾಗಿದ್ದ ಯು.ಟಿ. ಖಾದರ್ ಅವರು. ಆ ಸಭೆಗೆ ಇವರು ಗೈರುಹಾಜರಾಗಿದ್ದರು ಎಂದು ಅಲಿ ಹೇಳಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕೆಂದು ಶಾಸಕರಾಗಿದ್ದ ಶಕುಂತಳಾ ಶೆಟ್ಟಿ 40 ಎಕರೆ ಜಾಗವನ್ನು ಕಾದಿರಿಸಿದ್ದರು. ಸಂಜೀವ ಮಠಂದೂರು ಶಾಸಕರಾಗಿ ನಾಲ್ಕೂವರೆ ವರ್ಷವಾಗುತ್ತಾ ಬಂತು. ನೀವು ಮೆಡಿಕಲ್ ಕಾಲೇಜು ತನ್ನಿ, ಸಂಸದರು ಪ್ರಯತ್ನ ಮಾಡಿ. ಮಹಿಳಾ ಕಾಲೇಜಿಗೆ ಬನ್ನೂರಿನಲ್ಲಿ ಶಕುಂತಳಾ ಶೆಟ್ಟಿಯವರು ಸ್ಥಳವನ್ನು ಕಾದಿರಿಸಿದ್ದರು. ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಇವರಿಗೆ ಯೋಗ್ಯತೆಯಿಲ್ಲ. ಹಳೆ ತಾಲೂಕು ಕಚೇರಿಯ ದೊಡ್ಡಿಯಂತಹ ಕಟ್ಟಡದಲ್ಲಿ ಇಂದು ಮಹಿಳಾ ಕಾಲೇಜು ನಡೆಯುತ್ತಿದೆ. ಅದಕ್ಕೆ ಕಟ್ಟಡವನ್ನು ತಂದು ನೀವು ಬಿಲ್ಡಪ್ ಕೊಡಿ. ಕಬಕ-ವಿಟ್ಲ ರಸ್ತೆಗೆ 13 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಬ್ಯಾನರ್ ಹಾಕಿದ್ದಾರೆ. ಅಲ್ಲಿ 2 ಕಿಮೀ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. ಇಡೀ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಿಲ್ಡಪ್ ಕೊಡಲಿ. ಇಡೀ ಕ್ಷೇತ್ರದಲ್ಲಿ ಶಾಲೆಗಳ, ಅಂಗನವಾಡಿಗಳ ಕಟ್ಟಡ ಬೀಳುವ ಹಂತದಲ್ಲಿದೆ ಎಂದು ಆಲಿ ಹೇಳಿದರು.
ಜನರು ತೊಂದರೆ ಅನುಭವಿಸುತ್ತಿದ್ದಾರೆ:
ಒಂದೇ ಒಂದು ಕಡತ ಪ್ಲಾಟಿಂಗ್ ಆಗುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ನಗರಕ್ಕೆ ಸಂಬಂಧಿಸಿದಂತೆ ಕಟ್ ಕನ್ವರ್ಷನ್ ಸಮಸ್ಯೆಯಿಂದ 6 ಸಾವಿರ ಜನರಿಗೆ ಮನೆ ಕಟ್ಟಲು ಆಗುತ್ತಿಲ್ಲ. ಸಿಂಗಲ್ ಲೇಔಟ್ ಆಗ್ತಿಲ್ಲ. ಅದನ್ನು ಸರಿಪಡಿಸಲಿ. ಆದರೆ ಅವರಿಗೆ ಇದ್ಯಾವುದೂ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆಯವರ ಪ್ರಯತ್ನದಿಂದ ಕೊಂಬೆಟ್ಟುವಿನಲ್ಲಿ ಕ್ರೀಡಾಂಗಣ ನಿರ್ಮಾಣವಾಯ್ತು. ಅದರ ಅಭಿವೃದ್ಧಿಗೆ ಶಕುಂತಳಾ ಶೆಟ್ಟಿಯವರು ಅನುದಾನ ಮಂಜೂರು ಮಾಡಿದ್ದರು. ಇವರು ಅದನ್ನು ಮಾಡುವ ಬದಲು ಇನ್ನೊಂದು ಕಡೆ ಕ್ರೀಡಾಂಗಣ ಮಾಡುತ್ತೇವೆ ಎಂದು ಹೊರಟರು. ಈಗ ಅದೂ ಇಲ್ಲ, ಇದೂ ಇಲ್ಲ. ಹಾರಾಡಿಯಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಶಂಕುಸ್ಥಾಪನೆ ಮಾಡಿದರು. ಅಲ್ಲಿ ಶಾಸಕರು, ಸಂಸದರು ಪರಸ್ಪರ ಹೊಗಳಿಕೊಂಡರು. ನಾವು ಅಧಿಕಾರದಲ್ಲಿದ್ದಾಗ ಆ ರಸ್ತೆಗೆ 35 ಲಕ್ಷ ರೂ. ಎಸ್ಟಿಮೇಟ್ ಆಗಿತ್ತು. 27 ಲಕ್ಷವನ್ನು ಮಂಜೂರು ಮಾಡಿದ್ದೆವು. ಉಳಿಕೆಯನ್ನು ಅಲ್ಲಿದ್ದ ಭಾರತ್ ಮೋಟಾರ್‍ಸ್‌ನವರು ಶೇರ್ ಹಾಕುತ್ತೇವೆ ಎಂದಿದ್ದರು. ಈಗ ಆ 27 ಲಕ್ಷ ಎಲ್ಲಿಗೆ ಹೋಯ್ತು? ಈಗ ಇಟ್ಟಿರುವ 1 ಕೋಟಿ 10 ಲಕ್ಷ ರೂ. 40% ಕಮಿಷನ್‌ನಲ್ಲಿ ಬರುತ್ತದೆ. ಆ ಕಾರ್ಯಕ್ರಮಕ್ಕೆ ಜನ ಸೇರಿಸಲು ನಗರಸಭೆಯ ಸವಲತ್ತನ್ನು ಅಲ್ಲಿ ವಿತರಣೆ ಮಾಡಿದ್ದಾರೆ. ಬಿರುಮಲೆಯನ್ನು ಅಭಿವೃದ್ಧಿಪಡಿಸುತ್ತೇವೆ, ಬಿರುಮಲೆಯಿಂದ ಬಾಲವನಕ್ಕೆ ರೋಪ್‌ವೇ ಮಾಡುತ್ತೇವೆ ಎಂದಿದ್ದೀರಲ್ವಾ? ಅದೆಲ್ಲಿದೆ? ವಿರೋಧಪಕ್ಷವಾಗಿ ನಾವು ಶಾಸಕ ಸಂಜೀವ ಮಠಂದೂರು ಅವರ ವೈಯಕ್ತಿಕ ವಿಚಾರ ಮಾತನಾಡಿಲ್ಲ. ಶಾಸಕರಾಗಿ ನಿಮ್ಮ ವೈಫಲ್ಯದ ಬಗ್ಗೆ ಟೀಕೆ ಮಾಡುವ ಅಧಿಕಾರ ನಮಗಿದೆ ಎಂದು ಮಹಮ್ಮದ್ ಅಲಿ ಹೇಳಿದರು.
ನೀವು ತಂದ ಯೋಜನೆಗಳ ವಿವರ ನೀಡಿ:
ನಮ್ಮ ಅವಧಿಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಹಾರಾಡಿಯಿಂದ ಕೆಮ್ಮಾಯಿಯವರೆಗೆ ರಸ್ತೆ ವಿಭಜಕಕ್ಕೆ ಹೈಮಾಸ್ಟ್ ದೀಪ ಅಳವಡಿಸಿದ್ದೆವು. ಇವರು ಶಾಸಕರಾದ ಒಂದೆರಡು ತಿಂಗಳಲ್ಲಿ ಫ್ಲೆಕ್ಸ್ ಹಾಕಿ ಬಿಲ್ಡಪ್ ಕೊಟ್ಟಿದ್ದಾರೆ. ನಿಮ್ಮ ಅನುದಾನವನ್ನು, ನಿಮ್ಮ ಪ್ರಯತ್ನದಿಂದ ಬಂದ ಅನುದಾನದ ಕೆಲಸದ ವಿಚಾರದಲ್ಲಿ ಬಿಲ್ಡಪ್ ತೆಗೆದುಕೊಳ್ಳಿ. ನೀವು ಪುತ್ತೂರಿಗೆ ತಂದ ಯೋಜನೆಗಳ ವಿವರಗಳನ್ನು ನೀಡಿ. ಪುತ್ತೂರು ಉಪ್ಪಿನಂಗಡಿ ರಸ್ತೆಯ ಅಗಲೀಕರಣ ಬೊಳುವಾರಿನಿಂದ ಹಾರಾಡಿಯವರೆಗೆ ಬಾಕಿಯಾಗಿದೆ. ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಜಾಗದವರ ಜೊತೆಗೆ ಮಾತುಕತೆ ಆಗಿತ್ತು. ಅದನ್ನು ಮಾಡಿ ಇವರು ಬಿಲ್ಡಪ್ ನೀಡಲಿ. ಯುಜಿಡಿ ಯೋಜನೆ ತಂದು ಬಿಲ್ಡಪ್ ನೀಡಲಿ ಎಂದು ಆಲಿ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್, ಶಶಿಕಿರಣ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ, ನಗರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಸ್ ಉಪಸ್ಥಿತರಿದ್ದರು.
ಭ್ರಷ್ಟಾಚಾರವನ್ನು ನಿಲ್ಲಿಸಿ ಎಲ್ಲಾ ಕಚೇರಿಗಳಲ್ಲಿ ಜನರಿಗೆ ಅವರು ಬಂದ ಕೆಲಸವನ್ನು ಅಂದೇ ಮಾಡಿಸಿ ವಾಪಸ್ ಕಳಿಸಿಕೊಟ್ಟರೆ ನಾವೇ 10ಸಾವಿರ ಜನರನ್ನು ಕರೆಸಿ ಶಾಸಕರಿಗೆ ಸನ್ಮಾನ ಮಾಡುತ್ತೇವೆ ಎಂದು ಮಹಮ್ಮದ್ ಆಲಿ ಹೇಳಿದರು.