ಮಹಾಲಿಂಗೇಶ್ವರ ದೇವಳದ ಜಮೀನಿನಲ್ಲಿರುವ ಅಕ್ರಮ ಕಟ್ಟಡ ತೆರವಿಗೆ ಕ್ರಮ: ಭರವಸೆ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿರುವ ಅಕ್ರಮ ಕಟ್ಟಡ ಮತ್ತು ಪಾರ್ಕಿಂಗ್ ಶೆಡ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಭರವಸೆ ನೀಡಿದ್ದಾರೆ.

ಬಳಕೆದಾರರ ವೇದಿಕೆ ಸಂಚಾಲಕ ಬಾಲಚಂದ್ರ ಸೊರಕೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ್ದ ಮಾಹಿತಿಗೆ ಕಾರ್ಯನಿರ್ವಹಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೇವಳದ ಜಾಗದಲ್ಲಿರುವ ಅಕ್ರಮ ಕಟ್ಟಡ ಮತ್ತು ಪಾರ್ಕಿಂಗ್ ಶೆಡ್ ತೆರವುಗೊಳಿಸಬೇಕೆಂದು ಬಾಲಚಂದ್ರ ಸೊರಕೆ ಕಳೆದ ಜೂನ್ ೨೩ರಂದು ದೇವಳದ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರಿಗೆ ಮನವಿ ಸಲ್ಲಿಸಿದ್ದರು.

ದೇವಾಲಯದ ಜಮೀನಿನ ಅಳತೆ ಕಾವ್ಯವನ್ನು ಭಾಗಶಃ ಮಾಡಲಾಗಿದೆ. ಆದರೂ ಕಂದಾಯ ಇಲಾಖೆಗಾಗಲಿ, ದೇವಳದ ಆಡಳಿತ ಮಂಡಳಿಗಾಗಲೀ ಇಚ್ಛಾಶಕ್ತಿ ಇಲ್ಲದ ಕಾರಣ ಇದುವರೆಗೂ ದೇವರ ಜಮೀನು ರಕ್ಷಣಾ ಕಾರ್ಯ ಕಾರ್ಯಗತಗೊಳಿಸಿಲ್ಲ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದ ಅವರು, ದೇವಳದ ಜಮೀನಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಇಲ್ಲದೆ ನಿರ್ಮಾಣಗೊಂಡಿರುವ ಪರವಾನಗಿ ರಹಿತ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು, ಅಕ್ರಮ ಪಾರ್ಕಿಂಗ್‌ಗಳನ್ನು ತೆರವು ಮಾಡಬೇಕು, ದೇವಳದ ಜಮೀನು ಬಳಸಿಕೊಂಡು ಹೋಗುವ ಸಂಪರ್ಕ ಹಾದಿಯನ್ನು ಕೂಡ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದರು.

ಇದೇ ಮನವಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಬಾಲಚಂದ್ರ ಸೊರಕೆ ಸೆ.೨೯ರಂದು ಮಾಹಿತಿ ಹಕ್ಕು ಅಧಿನಿಯಮ – ೨೦೦೫ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ದೇವಳದ ಕಾರ್ಯ ನಿರ್ವಹಣಾ ಅಧಿಕಾರಿಯವರು ಉತ್ತರ ನೀಡಿದ್ದು, ಅಕ್ರಮ ಕಟ್ಟಡ ಮತ್ತು ಪಾರ್ಕಿಂಗ್ ಶೆಡ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ನೀಡಿದ್ದಾರೆ.

LEAVE A REPLY

Please enter your comment!
Please enter your name here