ಗುರುವಿನಿಂದ ದೇವರ ಅನುಗ್ರಹ ಸಾಧ್ಯ; :ಒಡಿಯೂರು ಶ್ರೀ
ವಿಟ್ಲ: ಗುರುಪರಂಪರೆಯನ್ನು ಸದಾ ನಾವು ಗೌರವಿಸಬೇಕಾಗಿದೆ. ಗುರುವಿನಿಂದ ದೇವರ ಅನುಗ್ರಹ ಸಾಧ್ಯ. ಇದೊಂದು ವಿಶೇಷ ಸಂಭ್ರಮದ ದಿನವಿದು. ಆದ್ಯಾತ್ಮದೆಡೆಗೆ ಸಾಗಿದಾಗ ಜೀವನ ಆನಂದಮಯವಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಯವರು ಹೇಳಿದರು.
ಅವರು ಡಿ. 1ರಿಂದ ಡಿ. 7ರ ತನಕ ಸಂಸ್ಥಾನದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಪ್ರಯುಕ್ತ ನಡೆಯಲಿರುವ ಹರಿಕಥಾ ಸತ್ಸಂಗವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮನುಷ್ಯ ಉತ್ಸವ ಪ್ರೀಯ. ಭಗವಂತ ಏನನ್ನು ಬಯಸುವುದಿಲ್ಲ. ಮಾಧವನಲ್ಲಿ ಭಕ್ತಿ ಇರಬೇಕು. ಮಾನವನಲ್ಲಿ ಪ್ರೀತಿ ಇರಬೇಕು ಆಗ ಬದುಕು ಹಸನಾಗಲು ಸಾಧ್ಯ. ಮನುಷ್ಯನಿಗೆ ಎಲ್ಲಿ ತೃಪ್ತಿ ಸಿಗುತ್ತದೋ ಅಲ್ಲಿ ಭಗವಂತನಿದ್ದಾನೆ. ಹಿರಿಯರ ಪ್ರೇರಣೆ ಕಿರಿಯರಿಗೆ ದಾರಿದೀವಿಗೆ. ಪ್ರತಿಯೊಬ್ಬರ ಮಾತಿನೊಳಗಿನ ಮಾರ್ಮಿಕವನ್ನು ತಿಳಿಯುವ ಮನಸ್ಸು ನಮ್ಮದಾಗಬೇಕು. ಜಗತ್ತಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದೇಶದ್ರೋಹಿಗಳ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ದೇಶದ ಸಂಬ್ರಕ್ಷಣೆ ಬಗ್ಗೆ ನಾವೆಲ್ಲರೂ ಗಮನಕೊಡಬೇಕಾಗಿದೆ ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಉಷಾ ಕುಮಾರ್ ಶೆಟ್ಟಿ, ಹರಿದಾಸ ಶಂ. ನಾ. ಅಡಿಗ ಕುಂಬ್ಳೆ, ತುಳು ಅಕಾಡಮಿಯ ಮಾಜಿ ಅಧ್ಯಕ್ಷರಾದ ಎ.ಸಿ. ಬಂಡಾರಿ, ಮಲಾರು ಜಯರಾಮ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ.ಸುರೇಶ್ ರೈ, ಸರ್ವಾಣಿ ಪಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮ:
ಡಿ.1ರಂದು ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭಗೊಂಡಿತು. ಬಳಿಕ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದು ಮಹಾಸಂತರ್ಪಣೆ ನಡೆಯಿತು.
ಡಿ.7ರ ವರೆಗೆ ಸಂಸ್ಥಾನದಲ್ಲಿ….
ಡಿ. 1ರಿಂದ ಡಿ. 7 ರ ತನಕ ಪ್ರತಿದಿನ ಬೆಳಿಗ್ಗೆ ವೇದ-ಗುರುಚರಿತ್ರೆ ಪಾರಾಯಣ. ಘಂಟೆ 10.30ರಿಂದ ವಿವಿಧ ಹರಿದಾಸರಿಂದ ಹರಿಕಥಾ ಸತ್ಸಂಗ. ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ, ಅಪರಾಹ್ನ ಘಂಟೆ 2.00ರಿಂದ ರಾತ್ರಿ ಘಂಟೆ 10ರ ತನಕ ತುಳು ನಾಟಕ ಸ್ಪರ್ಧೆ, ರಾತ್ರಿ ಘಂಟೆ 7.00ರಿಂದ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ನಡೆಯಲಿದೆ.