ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದ ಸ್ಪರ್ಧೆಯಲ್ಲಿನ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಅಂತ್ಯಾಕ್ಷರಿ ವಿಭಾಗದ ಸ್ಪರ್ಧೆಯಲ್ಲಿ ತೃತೀಯ ಪ್ರಶಸ್ತಿ ಗಳಿಸಿಕೊಂಡಿದೆ.
ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನ.25 ಹಾಗೂ 26ರಂದು ಎರಡು ದಿನಗಳ ಅಂತರ್ ಪದವಿ ಪೂರ್ವ ಕಾಲೇಜು ಫೆಸ್ಟ್-2022 ಹಮ್ಮಿಕೊಂಡಿದ್ದು, ಇದರಲ್ಲಿನ ಅಂತ್ಯಾಕ್ಷರಿ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿಂಧ್ಯಾಶ್ರೀ ರೈ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ನಾಝಿಯಾ ಅಂಜುಮ್ರವರು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೇ ಕೂಟದಲ್ಲಿ ಸೋಲೋ ಡ್ಯಾನ್ಸ್ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾತ್ವಿಕ್ ಶೆಟ್ಟಿ, ಸಮೂಹ ನೃತ್ಯ ವಿಭಾಗದಲ್ಲಿ ಪ್ರಥಮ ಪಿಯುಸಿಯ ದೇವಿಕಾ ಪೈ, ನಿಖಿತಾ, ಅಲೀನಾ ವೆಲೆಂಟೀನಾ ರೆಬೆಲ್ಲೋ, ಅವನಿ, ತೇಜಸ್ವಿನಿ, ಕೃಷ್ಣಪ್ರಿಯಾ, ಅಲಿಟ ರೊಡ್ರಿಗಸ್, ವಿಂಧ್ಯಾಶ್ರೀ ರೈ ಭಾಗವಹಿಸಿದ್ದರು.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ನ.26 ರಂದು ಆಯೋಜಿಸಿದ ಮೂರು ದಿನಗಳ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2022’ ಗ್ರ್ಯಾಂಡ್ ಫಿನಾಲೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಲೆಂಝಿಲ್ ಡಿ’ಸೋಜ ಹಾಗೂ ಎನ್.ಎಸ್ ಅಶ್ವಥ್ರವರು ಪ್ರದರ್ಶಿಸಿದ ‘ಸೌರಶಕ್ತಿಯನ್ನು ಬಳಸಿಕೊಂಡು ಸ್ವಯಂಚಾಲಿತ ಮರಳು ಹೊಲಿಗೆ ಯಂತ್ರ’ ಎಂಬ ಮಾದರಿಗೆ ಪುತ್ತೂರು ವಲಯ ವಿಭಾಗದಲ್ಲಿ ರೂ.9 ಸಾವಿರ ನಗದಿನೊಂದಿಗೆ ದ್ವಿತೀಯ ಪ್ರಶಸ್ತಿ ಗಳಿಸಿಕೊಂಡಿದೆ.
ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಕಾಲೇಜಿನ ಉಪನ್ಯಾಸಕರಾದ ಕನ್ನಡ ವಿಭಾಗದ ಸುಮನಾ ಕೆ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಭರತ್ ಜಿ.ಪೈರವರು ತಂಡವನ್ನು ಮುನ್ನೆಡೆಸಿದ್ದರು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.