ಮನಸ್ಸಿದ್ದರೆ ಮಾರ್ಗ-ಹಡಿಲು ಬಿದ್ದ ರಸ್ತೆಗೆ ಗ್ರಾಮಸ್ಥರಿಂದಲೇ ಮರು ಜೀವ

0

ಕೊಂಬಾರು: ಕೊಲ್ಕಜೆ-ನೆಟ್ಟಣ ರೈಲ್ವೇ ನಿಲ್ದಾಣ-ನೆಟ್ಟಣ ರಸ್ತೆ ಸಂಪರ್ಕ ರಸ್ತೆ ದುರಸ್ತಿ

ಕಡಬ: ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತಿನಂತೆ ಗ್ರಾಮಸ್ಥರೇ ಒಟ್ಟು ಸೇರಿ ವಾಟ್ಸಾಪ್ ಗ್ರೂಪ್ಂದನ್ನು ರಚಿಸಿ ಆ ಮೂಲಕ ಅನೇಕ ವರ್ಷದಿಂದ ಹಡಿಲು ಬಿದ್ದ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ. ಈ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.


ಕೊಲ್ಕಜೆದಿಂದ ನಾರಡ್ಕ, ನೆಟ್ಟನ ರೈಲ್ವೆ ನಿಲ್ದಾಣದ ಮೂಲಕ ನೆಟ್ಟಣಕ್ಕೆ ಸಂಪರ್ಕಿಸುವ ಬಹಳ ಹಿಂದಿನ ಕಾಲದ ಹಡಿಲು ಬಿದ್ದ ರಸ್ತೆಯನ್ನು ದುರಸ್ತಿ ಮಾಡಿ ಸಂಚಾರ ಯೊಗ್ಯ ಮಾಡಿದ್ದಾರೆ. ದುರಸ್ತಿ ಕಾರ್ಯವು ಊರವರ ಸಹಕಾರದಿಂದ ಜೆ.ಸಿ.ಬಿ ಮತ್ತು ಹಿಟಾಚಿ ಯಂತ್ರದ ಮೂಲಕ ನಡೆದಿದೆ.


ಸಿರಿಬಾಗಿಲು ಗ್ರಾಮ ಮತ್ತು ಕೊಂಬಾರು ಗ್ರಾಮದ ಕಟ್ಟೆ ಪೆರುಂದೊಡಿ ಮಣಿಭಾಂಡ. ಕೆಂಜಲ, ಬಗ್ಪುಣಿ, ಕಾಪಾರು ಮುಗೇರು ಕೊಡೆಂಕಿರಿ, ಡಮ್ಮಡ್ಕ. ಕೋಲ್ಕಜೆ ಪೋರ್ದೆಲು, ಓಡೋಲಿ ಕಾರ್ಯತಡ್ಕ, ಮುರುವಂಚಿ ಆರ್ದೇಲು ಭಾಗದ ಜನರು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣ, ನೆಟ್ಟಣ ಪೇಟೆಗೆ ಸಂಪರ್ಕಿಸಲು ಕೆಂಜಲದಿಂದ-ಕೈಕಂಬ ಮಾರ್ಗವಾಗಿ ಸುಮಾರು 15 ಕಿಲೋಮಿಟರ್ ಅಥಾವ ಕೆಂಜಲ ಬೊಳ್ನಡ್ಕ-ಸುಂಕದಕಟ್ಟೆಯಾಗಿ 15 ಕಿಲೋಮೀಟರ್ ಸುತ್ತು ಬಳಸಿ ಬರುವುದರಿಂದ ಆ ಭಾಗದ ಜನರಿಗೆ ಬಹಳಷ್ಟು ಅನಾನೂಕೂಲ ವಾಗುತ್ತಿತ್ತು. ಆದರೆ ಈ ರಸ್ತೆಯು ಸುಮಾರು 60 ವರ್ಷಕ್ಕಿಂತ ಹಿಂದೆ ನಿರ್ಮಾಣವಾಗಿ ಬಹಳ ದುಸ್ಥಿತಿಯಲ್ಲಿ ಇತ್ತು. ಈ ರಸ್ತೆಯು ದುರಸ್ತಿಯಾದಲ್ಲಿ ನಾಲ್ಕೂವರೆ ಕಿ.ಮೀಟರ್ ದೂರದಿಂದ ಈ ಭಾಗದ ಜನರು ನೆಟ್ಟಣವನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ಪ್ರತಿ ವರ್ಷವು ಸ್ಥಳೀಯರೇ ಶ್ರಮದಾನದ ಮೂಲಕ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದರು. ಇದನ್ನು ಮನಗಂಡ ಪ್ರಮುಖರಾದ ರಾಮಕೃಷ್ಣ ಹೊಳ್ಳಾರು ಮತ್ತು ದೇವರಾಜ ಕೋಲ್ಕಜೆ ಅವರುಗಳು ಒಂದು ವಾಟ್ಸಾಪ್ ಗ್ರೂಪ್‌ನ್ನು ರಚಿಸಿ, ಅದರಲ್ಲಿ ಚರ್ಚಿಸಿ ಸುಮಾರು 25,೦೦೦ ರೂಪಾಯಿಗಳ ಅಂದಾಜು ವೆಚ್ಚವನ್ನು ಇರಿಸಿ ಊರ ಮತ್ತು ಪರವೂರ ದಾನಿಗಳಿಂದ ಆರ್ಥಿಕ ಸಹಾಯವನ್ನು ಯಾಚಿಸಿದರು.  ಇದಕ್ಕೆ ಗ್ರಾಮಸ್ಥರಿಂದ ಅಭೂತಪೂರ್ವ ಸ್ಪಂದನೆ ದೊರೆತು ಹೆಚ್ಚಿನ ಧನ ಸಂಗ್ರಹವಾಯಿತು.

ಬಳಿಕ ಡಿ.5ರಂದು ಹಿಟಾಚಿ ಹಾಗೂ ಜೆಸಿಬಿ ಯಂತ್ರದ ಸಹಾಯದಿಂದ ಕಾಮಗಾರಿ ಪ್ರಾರಂಭಿಸಲಾಯಿತು. ಡಿ.6ರ ಸಂಜೆ ವೇಳೆಗೆ ಬಹುತೇಕ ಮಣ್ಣಿನ ಕಾಮಗಾರಿ ಮುಗಿದಿದೆ, ಈ ಮೂಲಕ ಗ್ರಾಮಸ್ಥರೇ ಸೇರಿಕೊಂಡು ಸಂಪರ್ಕ ರಸ್ತೆ ದುರಸ್ತಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕಾಮಗಾರಿಗೆ ಚಾಲನೆ:
ಡಿ.5ರಂದು ಕೋಲ್ಕಜೆ ಸಮೀಪ ಕೊಂಬಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ಕಾಪಾರು ಇವರು ತೆಂಗಿನ ಕಾಯಿ ಒಡೆಯುವ ಮೂಲಕ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದರು. ಅದೇ ರೀತಿ ನೆಟ್ಟಣ ರೈಲ್ವೆ ನಿಲ್ದಾಣದ ಬಳಿ ಬಿಳಿನೆಲೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಶಿವಶಂಕರ್ ಬಿಳಿನೆಲೆ ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಈ ಸಂರ್ದಭದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಸದಸ್ಯರಾದ ಚೆನ್ನಕೇಶವ ಕೈಂತಿಲ, ಮಧೂಸೂಧನ ಓಡೋಳಿ ಬಿಳಿನೆಲೆ ಗ್ರಾಮ ಪಂಚಾಯತ್ ನ ಸದಸ್ಯರಾದ ಚಂದ್ರ್ರಾವತಿ ಸ್ಥಳಿಯಾರಾದ ಕೃಷ್ಣಪ್ಪ ಗೌಡ ಕೆಂಜಲ, ಶಿವಪ್ರಸಾದ್ ಕಲ್ಲರ್ಪಣೆ, ಗೋಪಾಲಕೃಷ್ಣ ಭಟ್ ಕಲ್ಲರ್ಪಣೆ, ರಾಮಚಂದ್ರ ಗೌಡ ಕಾಪಾರು ಪಂಚಮುಖಿ ಗೆಳೆಯರ ಬಳಗದ ಅಧ್ಯಕ್ಷ ಪವನ್ ಚಿಮ್ಲಗುರಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಹಲವರಿಂದ ಧನ ಸಹಾಯ:
ಸ್ಥಳಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಂದಕುಮಾರ್ ಇವರು ಆಗಮಿಸಿ ರಸ್ತೆ ದುರಸ್ತಿಗೆ 15,೦೦೦ ರೂಪಾಯಿಗಳನ್ನು ನೀಡಿದ್ದಾರೆ. ಈ ಸಂಧರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಿರ್ ಕುಮಾರ್ ಶೆಟ್ಟಿ ಬಿಳಿನೆಲೆ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ ಇವರು ಉಪಸ್ಥಿತರಿದ್ದರು. ಅಲ್ಲದೆ ಗ್ರಾಮ ಪಂಚಾಯತ್ ನಿಂದಲೂ ಸಹಕಾರ ದೊರೆತಿದ್ದು, ಕೊಂಬಾರು ಗ್ರಾಮ ಪಂಚಾಯತ್ ನಿಂದ 5೦೦೦ ರೂಪಾಯಿಗಳನ್ನು ನೀಡಲಾಗಿದೆ.ಈಗಾಗಲೇ ಸುಮಾರು 80 ಸಾವಿರಕ್ಕಿಂತಲೂ ಮಿಕ್ಕಿ ಧನ ಸಹಾಯ ಬಂದಿದೆ.

ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ
ನಡೆದಿದೆ-ರಾಮಕೃಷ್ಣ ಹೊಳ್ಳಾರು

ಈ ರಸ್ತೆ ದುರಸ್ತಿಯ ನೇತೃತ್ವ ವಹಿಸಿದ್ದ ರಾಮಕೃಷ್ಣ ಹೊಳ್ಳಾರು ಅವರು ಪ್ರತಿಕ್ರಿಯೆ ನೀಡಿ, ಈ ರಸ್ತೆ ದುರಸ್ತಿ ಕಾರ್ಯಕ್ಕೆ ನಾವು ಪ್ರಸ್ತಾಪ ಮಾಡಿದಾಗ ಊರವರ ಸಹಕಾರ ದೊರೆಯಿತು, ಅಲ್ಲದೆ ದೇವರಾಜ ಕೋಲ್ಕಜೆ ಅವರು ಸದಾ ನನ್ನ ಜತೆ ಇದ್ದು ಸಹಕಾರ ನೀಡಿದ್ದಾರೆ, ಈ ಕಾರಣಗಳಿಂದಲೇ ಕಾಮಗಾರಿ ಪ್ರಾರಂಭಿಸಲು ಸಾದ್ಯವಾಯಿತು, ಕಾಮಗಾರಿ ಪ್ರಾರಂಭವಾದ ಬಳಿಕ ಗ್ರಾಮಸ್ಥರಿಂದ ಹೆಚ್ಚಿನ ಸಹಕಾರ ದೊರೆತಿದೆ. ಇಲ್ಲಿ ಪಕ್ಷಭೇಧ ಮರೆತು ಎಲ್ಲರೂ ಒಟ್ಟಾಗಿ ಸಹಕಾರ ನೀಡಿರುವುದು ನಮಗೆ ತುಂಬಾ ಸಂತೋಷವಾಗಿದೆ. ಈಗಾಗಲೇ ಮಣ್ಣಿನ ಕಾಮಗಾರಿ ಮುಗಿದಿದೆ, ಇನ್ನು ಮುಂದೆ ಚರಂಡಿ ಹಾಗೂ ರಸ್ತೆಯನ್ನು ಸಂಚಾರಯೋಗ್ಯ ಮಾಡಲು ಕಾಮಗಾರಿ ಬಾಕಿಯಿದೆ, ಅಲ್ಲದೆ ರಸ್ತೆಯು ಹಾದು ಹೋಗುವ ಮಧ್ಯ ಭಾಗದ ಓಡೋಳಿ ಎಂಬಲ್ಲಿ ರೈಲ್ವೇ ಇಲಾಖೆಯಿಂದ ಸುಮಾರು ೫೦ ವರ್ಷಗಳ ಹಿಂದೆ ನಿಮಾಣವಾದ ಮುರಿದು ಬಿದ್ದ ಸೇತುವೆ ಇದೆ, ಇಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೇವೆ, ಅಲ್ಲದೆ ಸರ್ವಋತು ರಸ್ತೆಯನ್ನಾಗಿ ಮಾಡಲು ಕೂಡ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುತ್ತೇವೆ.

LEAVE A REPLY

Please enter your comment!
Please enter your name here