ದೇಶವನ್ನು ಉತ್ತಮ ಮನಸ್ಸಿನ ಬೃಂದಾವನವನ್ನಾಗಿಸಬೇಕು-ಪ್ರೊ|ಸುಬ್ಬಪ್ಪ ಕೈಕಂಬ
ಪುತ್ತೂರು: ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲಾ ಜಾತಿ-ಧರ್ಮದವರು ಜೀವಿಸುತ್ತಿದ್ದಾರೆ. ಹೂದೋಟದಲ್ಲಿ ಹೇಗೆ ಎಲ್ಲಾ ಜಾತಿಯ ಹೂವುಗಳು ಸೇರಿ ಪರಿಮಳ ಸೂಸುವ ಬೃಂದಾವನ ಎನಿಸಿಕೊಳ್ಳುತ್ತಿದೆಯೋ ಹಾಗೆಯೇ ನಮ್ಮ ದೇಶವನ್ನು ಉತ್ತಮ ವ್ಯಕ್ತಿತ್ವವುಳ್ಳ ಮನಸ್ಸಿನ ಬೃಂದಾವನವನ್ನಾಗಿಸಿದಾಗ ದೇಶ ಪ್ರಗತಿಯತ್ತ ಸಾಗಬಹುದು ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬರವರು ಹೇಳಿದರು.
ಡಿ.6 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ್ದು, ಇದರ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯಾರದೋ ಉದ್ಧೇಶಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಹೆಜ್ಜೆಯಿಡಬಾರದು. ವಿದ್ಯಾರ್ಥಿ ದಿಸೆಯಲ್ಲಿ ಬ್ಲೈಂಡ್ ಆಗಿ ಹೆಜ್ಜೆ ಮುಂದಿಡುವ ಮುನ್ನ ಪರಾಮರ್ಶಿಸುವ ವಿವೇಚನೆ ನಮ್ಮಲ್ಲಿರಬೇಕಾಗುತ್ತದೆ. ಪರಸ್ಪರ ಹಣತೆಯನ್ನು ಹಚ್ಚುವ ಮೂಲಕ ಹೇಗೆ ಬೆಳಕು ಹೊರ ಹೊಮ್ಮುತ್ತದೆಯೋ ಹಾಗೆಯೇ ಶಿಕ್ಷಣದ ಸಂಸ್ಕೃತಿಯು ಜ್ಞಾನವನ್ನು ಪಸರಿಸುವಂತಿರಬೇಕು. ಅಂತರಂಗದ ಕಣ್ಣುಗಳನ್ನು ತೆರೆದು ದೇಶದಲ್ಲಿ, ವಿಶ್ವದಲ್ಲಿ ನಾಯಕತ್ವ ಗುಣವನ್ನು ನಾವು ಹೊಂದುವಂತಾಗಬೇಕು. ಪ್ರಪಂಚದಲ್ಲಿ ತಾನು ಒಬ್ಬ ಸರಿಯಾದರೆ ಒಬ್ಬ ಮೂರ್ಖ ಕಡಿಮೆಯಾಗುತ್ತಾನೆ ಅದರಂತೆ ನನ್ನ ಮನೆಯಂಗಳವು ಮೊದಲು ಸ್ವಚ್ಛವಾಗಿಡಬೇಕು ಅದುವೇ ನಿಜವಾದ ಬದಲಾವಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಡೆ-ನುಡಿಯಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಮೂಲಕ ಎಲ್ಲರನ್ನು ಪ್ರೀತಿಯಿಂದ, ಗೌರವದಿಂದ ಕಾಣಬೇಕು. ಹೇಗೆ ನಿಮ್ಮ ಮನೆ, ಕುಟುಂಬ, ಹೆತ್ತವನ್ನು ಪ್ರೀತಿಸುತ್ತಿದ್ದಿರೋ ಹಾಗೆಯೇ ಕಲಿಸಿದ ಸಂಸ್ಥೆಯನ್ನು ಕೂಡ ಅಷ್ಟೇ ಪ್ರೀತಿಯಿಂದ ಕಾಣಬೇಕು. ದೇವರು ಕೊಟ್ಟ ಅಲೋಚನೆ, ಬುದ್ಧಿಶಕ್ತಿಯನ್ನು ಉಪಯೋಗ ಮಾಡದಿದ್ದರೆ ಜೀವನ ವ್ಯರ್ಥವೆನಿಸುತ್ತದೆ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರು ಎಂದು ಅವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಂಸ್ಥೆಯ ಪ್ರತಿಯೋರ್ವರನ್ನೂ ಗೌರವ ಭಾವನೆಯಿಂದ ಕಾಣುತ್ತಾ, ಸಿಕ್ಕಿದ ಅವಕಾಶಗಳನ್ನು ಸದ್ಭಳಕೆಗೊಳಿಸಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. 62 ವರುಷದ ಹಿಂದೆ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರ ಪರಿಣಾಮವಾಗಿ ಇಂದಿಗೂ ಅವರನ್ನು ನೆನೆಯುತ್ತೇವೆ. ಅದರಂತೆ ವಿದ್ಯಾರ್ಥಿಗಳು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಭವಿಷ್ಯದಲ್ಲಿ ಗುರುತಿಸುವವರಾಗಬೇಕು. ಜೀವನದಲ್ಲಿ ಉದಾರತೆ ಜಾಸ್ತಿ ತೋರಿಸಬೇಡಿ, ಜಾಸ್ತಿ ಉದಾರತೆ ತೋರಿದರೆ ಕೆಡಹುವ ಚಿಂತನೆ ಕೂಡ ಸಮಾಜದಲ್ಲಿದ್ದು ಜಾಗೃತೆಯಿಂದಿರಬೇಕು ಎಂದರು.
ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿಗಳಾದ ಡಾ|ಚಂದ್ರಶೇಖರ್ ಕೆ, ಪ್ರೊ|ಭಾರತಿ ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಮೊಹಮದ್ ಆಶಿಕ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶಿವಾನಿ ಎಂ ವಂದಿಸಿದರು. ಕಾರ್ಯದರ್ಶಿ ಅನುಶ್ರೀ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿ ರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನೆ..
2022-23ನೇ ಸಾಲಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ಹಾಗೂ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಪ್ರಮಾಣವಚನ..
ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಕಾಲೇಜಿನ ಆಯಾ ತರಗತಿಯ ಪ್ರತಿನಿಧಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಪರ್ಫಾಮಿಂಗ್ ಆರ್ಟ್ಸ್ ಹಾಗೂ ಕ್ರೀಡಾ ಪದಾಧಿಕಾರಿಗಳು ಬೆಳಗುವ ಹಣತೆಯೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ಮೊಂತೇರೊ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಮೆರವಣಿಗೆ..
ಕಾರ್ಯಕ್ರಮದ ಆರಂಭಕ್ಕೆ ಮುನ್ನ ಮುಖ್ಯ ಅತಿಥಿಗಳು, ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಾಲೇಜಿನ ಬ್ಯಾಂಡ್ ವಾದ್ಯದೊಂದಿಗೆ ಕಾಲೇಜಿನ ಕಛೇರಿಯಿಂದ ಸಿಲ್ವರ್ ಜ್ಯುಬಿಲಿ ಸಭಾಂಗಣದವರೆಗೆ ಶಿಸ್ತುಬದ್ಧವಾದ ಮೆರವಣಿಗೆಯೊಂದಿಗೆ ವೇದಿಕೆಗೆ ಆಗಮಿಸಿದರು.