ಈಶ್ವರಮಂಗಲ ಬೆಳ್ಳಿಚಡವು ಶ್ರೀ ಅಯ್ಯಪ್ಪ ಸ್ವಾಮಿ, ಶಾರದಾಂಬ ಭಜನಾ ಮಂದಿರ ನಾಗ ಸಾನಿಧ್ಯದ ಪ್ರತಿಷ್ಠಾ ಮಹೋತ್ಸವ

0

ಧಾರ್ಮಿಕ ಕೇಂದ್ರಗಳಿಗೆ ಮಕ್ಕಳನ್ನು ಕರೆ ತರುವ ಕೆಲಸ ಹೆತ್ತವರಿಂದ ಆಗಬೇಕು : ಮಾಣಿಲ ಶ್ರೀ

ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಬೆಳ್ಳಿಚಡವು ಇದರ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶಾರದಾಂಬ ಭಜನಾ ಮಂದಿರ ಮತ್ತು ನಾಗ ಸಾನಿಧ್ಯದ ಪ್ರತಿಷ್ಠಾ ಮಹೋತ್ಸವವು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ದ.೦೮ ರಂದು ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿಯ ಛಾಯಾ ಬಿಂಬ, ಶ್ರೀ ಶಾರಾದಾಂಭ ದೇವಿಯ ಬೆಳ್ಳಿಯ ಛಾಯಾ ಬಿಂಬ ಹಾಗೂ ನಾಗನ ಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಿತು. ನಿತ್ಯನೈಮಿತ್ಯಾದಿಗಳ ನಿರ್ಣಯ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತಾಧಿಗಳು ದೇವರ ಪ್ರಸಾದ ಸ್ವೀಕರಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮ
ಹಿಂದೂ ಸಂಸ್ಕೃತಿಯ ಉಳಿವಿನ ಬಗ್ಗೆ ಚಿಂತನೆ ಮಾಡಬೇಕಾದ ಕಾಲ ಬಂದಿದೆ: ಕುಂಟಾರು ರವೀಶ್ ತಂತ್ರಿ
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ತಂತ್ರಿಯವರು, ಸನಾತನ ಹಿಂದೂ ಸಂಸ್ಕೃತಿಯ ಉಳಿವಿನ ಬಗ್ಗೆ ಚಿಂತನೆ ಮಾಡುವ ಕಾಲ ಬಂದಿದೆ. ಧರ್ಮ ರಕ್ಷಣೆಯೊಂದಿಗೆ ಸಮಾಜದ ರಕ್ಷಣೆಯ ಕೆಲಸ ಆಗಬೇಕಾಗಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಅದಕ್ಕಾಗಿ ಇಂತಹ ಧಾರ್ಮಿಕ, ಶ್ರದ್ಧಾ ಕೇಂದ್ರಗಳ ಅಗತ್ಯತೆ ಇದೆ. ಇಂತಹ ಶ್ರದ್ಧಾ ಕೇಂದ್ರಗಳ ಮೂಲಕ ಧರ್ಮ ರಕ್ಷಣೆಯ ಕೆಲಸ ಆಗಬೇಕು ಎಂದು ತಂತ್ರಿಯವರು ಹೇಳಿ ಶುಭ ಹಾರೈಸಿದರು.

ದೇವಸ್ಥಾನ, ಧಾರ್ಮಿಕ ಕೇಂದ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕು :ಮೋಹನದಾಸ ಸ್ವಾಮೀಜಿ

ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಹಿಂದೂಗಳು ನಾವೆಲ್ಲರೂ ಒಗ್ಗಟ್ಟಾಗಬೇಕಾದ ಅಗತ್ಯತೆ ಇದೆ. ಹಿಂದುತ್ವದ ಮೇಲೆ ಆಘಾತಕಾರಿ ಘಟನೆಗಳು ಬಹಳಷ್ಟು ಕಡೆ ನಡೆಯುತ್ತಿದೆ. ನಮ್ಮವರನ್ನು ಪ್ರೀತಿಸುವ ಅವಶ್ಯಕತೆ ತುಂಬಾ ಇದೆ. ನಮ್ಮಲ್ಲಿರುವ ಅಂಧಶ್ರದ್ಧೆಗಳನ್ನು ಬಿಡಬೇಕು. ಹಿಂದಿನ ಚರಿತ್ರೆಯನ್ನು ಪುನರ್ ಅವಲೋಕನ ಮಾಡಿದರೆ ನಮ್ಮಿಂದಲೇ ನಮ್ಮ ಜನರಿಂದಲೇ ದೇಶವನ್ನು ವಿಭಜನೆ ಮಾಡುವ ಕೆಲಸ ಆಗಿದೆ. ನಾವು ಯೋಚನೆ ಮಾಡಬೇಕಾಗಿದೆ. ಸಂಪ್ರದಾಯ ಇರಲಿ ಆದರೆ ಧಾರ್ಮಿಕ ಕೇಂದ್ರಗಳಲ್ಲಿ ನಾವೆಲ್ಲರೂ ಒಟ್ಟಾಗಿ ಒಂದೇ ಮನಸ್ಸಿನಿಂದ ಸೇರುವ ಕೆಲಸ ಆಗಬೇಕು ಎಂದ ಅವರು, ದೇವಸ್ಥಾನಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಕೆಲಸ ಹೆತ್ತವರಿಂದ ಆಗಬೇಕು ಆಗಲೇ ನಮ್ಮ ಸಂಸ್ಕೃತಿ, ಸಂಸ್ಕಾರ ಮುಂದಿನ ಪೀಳಿಗೆಗೆ ಬರಲು ಸಾಧ್ಯ ಈ ಕೆಲಸ ನಮ್ಮಿಂದ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಊರಿಗೆ ಒಳ್ಳೆಯದನ್ನು ಕರುಣಿಸಲಿ : ವಲ್ಸನ್ ತಿಲ್ಲಂಕೇರಿ

ಕೇರಳ ಹಿಂದೂ ಐಕ್ಯ ವೇದಿಕೆಯ ಕಾರ್ಯಧ್ಯಕ್ಷ ವಲ್ಸನ್ ತಿಲ್ಲಂಕೇರಿರವರು ಧಾರ್ಮಿಕ ಉಪನ್ಯಾಸ ನೀಡುತ್ತಾ, ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ನಡೆಯುತ್ತಿರುವ ಮಂಡಲ ಪೂಜೆಯ ಶುಭ ಸಮಯದಲ್ಲಿ ಬೆಳ್ಳಿಚಡವುನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾ ಬಿಂಬ ಪ್ರತಿಷ್ಠೆ ನಡೆದಿರುವುದು ಒಂದು ಒಳ್ಳೆಯ ಕಾರ್ಯವಾಗಿದೆ. ಇದು ಈ ಊರಿಗೆ ಶುಭವನ್ನು ತರಲಿ ಎಂದು ಹೇಳಿ ಶುಭ ಹಾರೈಸಿದರು. ಉದ್ಯಮಿ ಮೇನಾಲ ಕಿಶನ್ ಜೆ. ಶೆಟ್ಟಿಯವರು, ಆಚಾರ, ವಿಚಾರಗಳೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕೃತಿಯನ್ನು ಮರೆಯಬಾರದು, ನಮ್ಮ ಹೆತ್ತವರು, ಗುರುಗಳನ್ನು ಸದಾ ಸ್ಮರಣೆ ಮಾಡುವ ಗುಣ ನಮ್ಮಲ್ಲಿ ಇರಬೇಕು ಆಗ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.

ಮಂಗಳೂರು ಎಮ್.ಆರ್.ಪಿ.ಎಲ್.ನ ಸೀತಾರಾಮ ರೈ ಕೈಕಾರ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದಾಗ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೆ ಶ್ರೀ ಕ್ಷೇತ್ರವೇ ಸಾಕ್ಷಿಯಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು.


ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾದ ಡಾ.ಶ್ರೀಕುಮಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಬೇರೆ ಬೇರೆ ಮನೆಗಳಲ್ಲಿ ಭಜನೆ ಆಗುತ್ತಿತ್ತು ಅದೆಲ್ಲಾ ಒಂದೇ ಕಡೆಯಲ್ಲಿ ಆಗಬೇಕು ಎಂಬುಕೊಂಡು ಶ್ರೀ ಶಾರಾದಾಂಭ ಭಜನ ಮಂದಿರವನ್ನು ಮಾಡಲಾಯಿತು. ಆದರೆ ಕೆಲವು ಕಾರಣಗಳಿಂದ ಭಜನ ಮಂದಿರದಲ್ಲಿ ಕೂಡ ಭಜನೆ ನಿಂತುಹೋಯಿತು, ಮಂದಿರವೂ ನಿರ್ನಾಮವಾಯಿತು ಆ ಬಳಿಕ ಕೆಲಸ ದುರ್ಘಟನೆಗಳು ನಡೆದುಹೋದವು ಈ ಬಗ್ಗೆ ಸ್ವರ್ಣ ಪ್ರಶ್ನಾ ಚಿಂತನೆ ನಡೆಸಿ ಪರಿಹಾರವನ್ನು ಕಂಡುಹೋಗಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತೆ ಅಯ್ಯಪ್ಪ ಸ್ವಾಮಿ, ಶಾರದಾಂಭ ದೇವಿ, ನಾಗ ಸಾನ್ನಿಧ್ಯ ಹಾಗೂ ಗಣಪತಿ ಸಾನ್ನಿಧ್ಯವನ್ನು ಮಾಡಲಾಗಿದೆ. ಈ ಎಲ್ಲಾ ಕೆಲಸಗಳ ಹಿಂದೆ ಗ್ರಾಮದ ಭಕ್ತಾಧಿಗಳು, ಊರಪರವೂರ ದಾನಿಗಳ, ಭಕ್ತಾಧಿಗಳ ಸಹಕಾರದಿಂದ ಸಾಧ್ಯವಾಗಿದೆ. ಈ ಎಲ್ಲಾ ಕೆಲಸಗಳ ಹಿಂದೆ ಕೈಜೋಡಿಸಿದ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಅಣ್ಣಯ್ಯ ಗೌಡ ಕನ್ನಟಿಮಾರು, ಹಿಂದೂ ಐಕ್ಯ ವೇದಿ ಕೇರಳ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಲೂ, ಕಾರ್ಯದರ್ಶಿ ಶಾಜಿ, ನಾರಾಯಣ ಗುರುಸ್ವಾಮಿ ಕುಂಜೋಡಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೇನಾಲ ರಾಮಪ್ರಸಾದ್ ಆಳ್ವ ಸ್ವಾಗತಿಸಿದರು. ದೇವಪ್ಪ ದಂಪತಿ ಬೆಳ್ಳಿಚಡವು ಸ್ವಾಮೀಜಿ ಫಲಪುಷ್ಪ ಹಾರ ಹಾಕಿ ಸ್ವಾಗತಿಸಿದರು. ರವಿ ಬೆಳ್ಳಿಚಡವುರವರು ತಂತ್ರಿವರ್ಯರಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಚಿದಾನಂದ ಬೆಳ್ಳಿಚಡವು, ಶ್ರೀಕಾಂತ್ ಬೆಳ್ಳಿಚಡವು, ಉದಯ ಪುಳಿಮಾರಡ್ಕ, ದಿವಾಕರ ಬೆಳ್ಳಿಚಡವು,ಅಜಿತ್ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ರಜತ್ ಬಸಿರಡ್ಕ ಪ್ರಾರ್ಥಿಸಿದರು. ಹಿಂದೂ ಜಾಗರಣ ವೇದಿಕೆಯ ರಾಜೇಶ್ ಪಂಚೋಡಿ ವಂದಿಸಿದರು. ಪ್ರತಿಷ್ಠಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಿನ್ಮಯ್ ರೈ ನಡುಬೈಲು, ಜಯನ್ ಕಾಟುಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಸಂಜೀವ ಮಠಂದೂರು, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಯಕ್ಷಗಾನ ಬಯಲಾಟ/ ಅನ್ನಸಂತರ್ಪಣೆ
ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆದು ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆಯಿಂದಲೇ ಭಜನಾ ಕಾರ್ಯಕ್ರಮ ನಡೆದು ಸುಮಾರು ೧೧ ಭಜನಾ ತಂಡಗಳು ಭಾಗವಹಿಸಿದ್ದವು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಜ್ಙಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ `ಶ್ರೀ ದೇವಿ ಮಹಾತ್ಮೆ’ ನಡೆಯಿತು.

LEAVE A REPLY

Please enter your comment!
Please enter your name here