ಪುತ್ತೂರು: ಕಾಂಗ್ರೆಸ್ ಪಕ್ಷಕ್ಕೆ ಆರ್.ಎಸ್.ಎಸ್. ಸ್ವಯಂಸೇವಕರಾಗಿರುವ ಬಿಜೆಪಿಯ ವ್ಯಕ್ತಿಯೊಬ್ಬರು ಸೇರುತ್ತಾರೆ, ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವುದು ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಒಂದು ರೀತಿಯ ಗೊಂದಲದ ವಾತಾವರಣ ಸೃಷ್ಟಿಗೆ ಕಾರಣವಾಯಿತು.ಅದಕ್ಕೆ ಕಾರ್ಯಕರ್ತರ ಒತ್ತಾಯದ ಮೇರೆಗೆ ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ವರದಿ ನೀಡುವ ಸಲುವಾಗಿ ಸಭೆ ನಡೆಸಿದ್ದೆವು. ಈ ಸಭೆಯಲ್ಲಿ ನಾನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡಿದ್ದೇನೆ ಎಂದು ಸಭೆ ನಡೆದ ಮೂರು ದಿನಗಳ ಬಳಿಕ ವೆಬ್ ನ್ಯೂಸ್ ಒಂದು ವಾಸ್ತವವನ್ನು ತಿರುಚಿ ವರದಿ ಮಾಡಿತ್ತು. ನಮ್ಮ ಸಭೆಗೆ ಬಂದಿರುವ ಪತ್ರಕರ್ತರು ಪ್ರತಿನಿಧಿಸುವ ಯಾವುದೇ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಹೀಗೆ ವರದಿ ಬಂದಿಲ್ಲ. ವೆಬ್ ನ್ಯೂಸಲ್ಲಿ ಪ್ರಕಟವಾದ ವರದಿ ಇದು ಶುದ್ಧ ಸುಳ್ಳು. ನಮ್ಮ ನಾಯಕರಾದ ಡಿಕೆಶಿ ವಿರುದ್ಧ ನಾನು ಮಾತನಾಡಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದೇನೆ. ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಬಂದಾಗ ಅದನ್ನು ದೂರೀಕರಿಸಲು ಅವರಿಗಾಗಿ ಪೂಜೆ ಪ್ರಾರ್ಥನೆ ಮಾಡಿದವರು ನಾವು. ಅವರು ಸಂಕಷ್ಟದಿಂದ ದೂರವಾಗುವಾಗ ಪಟಾಕಿ ಸಿಡಿಸಿ ಸಂಭ್ರಮಿಸಿದವರು ನಾವು. ಅಧ್ಯಕ್ಷರು, ಪಕ್ಷದ ಹಿರಿಯರು ನಮ್ಮೊಂದಿಗೆ ಇದ್ದಾರೆ ಎನ್ನುವುದನ್ನು ಸಹಿಸಲು ಕೆಲವು ವಿಘ್ನ ಸಂತೋಷಿಗಳಿಗೆ ಸಾಧ್ಯವಾಗುವುದಿಲ್ಲ. ಕೆಲವು ವಿಘ್ನ ಸಂತೋಷಿಗಳು ನನ್ನ ಮತ್ತು ಡಿಕೆಶಿಯವರ ಮಧ್ಯೆ ಇರುವ ಉತ್ತಮ ಸಂಬಂಧವನ್ನು ಹಾಳು ಮಾಡಲು ಸದಾ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಆಗಿರುವ ಸಂತೋಷ ಕ್ಷಣಿಕ ಮಾತ್ರ ಉಳಿಯಬಹುದು. ನನಗೆ ರಾಜಕೀಯ ಎನ್ನುವುದು ವ್ಯಾಪಾರ ಅಲ್ಲ. ಸೇವಾ ಮನೋಭಾವನೆಯಿಂದ ಮಾಡುತ್ತಿರುವುದು. ಜನರ ಸೇವೆಯೇ ನನ್ನ ಗುರಿ. ಸಂಯೋಜಕ ಸ್ಥಾನದಿಂದ ವಿಮುಕ್ತಿ ಮಾಡಿರುವ ಮಾಹಿತಿ ಅಧಿಕೃತವಾಗಿ ನನಗೆ ಲಭಿಸಿಲ್ಲ ಎಂದು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.