ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ

0

  • 800 ವರ್ಷಗಳ ಇತಿಹಾಸವಿರುವ ದೇವಸ್ಥಾನ
  • ಗ್ರಾಮ ವಿಕಾಸದ ಪರಿಕಲ್ಪನೆಯ ದೇವಸ್ಥಾನ
  • 1.5 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ ಅಭಿವೃದ್ಧಿ ಕಾಮಗಾರಿಗಳು
  • ಜ. 3 – 8 ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿಶೇಷ ವರದಿ: ನಿಶಾಕಿರಣ್ ಬಾಳೆಪುಣಿ

ಎಂಟುನೂರುವರ್ಷಗಳ ಇತಿಹಾಸವಿರುವ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿದೆ. ವೃತ್ತಾಕಾರದ ಗರ್ಭಗುಡಿ ಹೊಂದಿರುವ ಕ್ಷೇತ್ರದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರು ಪ್ರಧಾನ ದೇವರಾಗಿ, ಶ್ರೀ ಗಣಪತಿ, ಶ್ರೀ ಶಾಸ್ತಾರ ಹಾಗು ಶ್ರೀ ನಾಗಬ್ರಹ್ಮ ದೇವರು, ಪಿಲಿಚಾಮುಂಡಿ ಉಪಸಾನ್ನಿಧ್ಯಗಳಾಗಿ ಅನಾದಿಕಾಲದಿಂದ ಭಕ್ತಜನತೆಯ ಆರಾಧನೆಗೊಳಪಡುತ್ತಿವೆ. ಧಾರ್ಮಿಕ ಶ್ರದ್ದಾ ಕೇಂದ್ರವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಸಾಮಾಜಿಕ ಕಾರ್ಯಗಳ ಕೇಂದ್ರ ಬಿಂದುವಾಗಿಯೂ ಕಾರ್ಯನಿರ್ವಹಿಸುವಂತಾಗಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ’ಗ್ರಾಮ ವಿಕಾಸ’ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದ ಮಾದರಿ ದೇವಸ್ಥಾನ ಇದಾಗಿದೆ. ಸಂಘದ ಸರಸಂಘಚಾಲಕ ದಿ. ಸುದರ್ಶನ್‌ಜೀಯವರು ಇಲ್ಲಿಗೆ ಭೇಟಿ ನೀಡಿ ಗ್ರಾಮ ವಿಕಾಸದ ಕಾರ್ಯಚಟುವಟಿಕೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

1.5 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳು: ಕ್ಷೇತ್ರದಲ್ಲಿ ಜನವರಿ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ವಾಸ್ತುಶಿಲ್ಪಿ ಕಾರ್ತಿಕ್ ತಂತ್ರಿ ಹಾಗೂ ನಾಗೇಶ್ ಕುಂಡಡ್ಕರವರ ಮಾರ್ಗದರ್ಶನದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 3500 ಚ.ಅಡಿ ವಿಸ್ತೀರ್ಣದ ಅಂಗಣಕ್ಕೆ ಗ್ರಾನೈಟ್ ಹಾಸಲಾಗುತ್ತಿದೆ. ಕ್ಷೇತ್ರದ ದೈವ ಸಾನ್ನಿಧ್ಯ ಪಿಲಿಚಾಮುಂಡಿಯ ಹೊಸ ಗುಡಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಪಡುಬಾಗಿಲು ಹೊಸದಾಗಿ ಮಾಡಲಾಗಿದೆ. ದೇವಳದ ಸುತ್ತುಪೌಳಿಯ ಹಂಚು ಅಳವಡಿಸಿ ಹೊಸ ಮೇಲ್ಛಾವಣಿ ಮಾಡಲಾಗಿದೆ. ನಾಗದೇವರಿಗೆ ಹೊಸ ಮಾದರಿಯಲ್ಲಿ ನಾಗನ ಕಟ್ಟೆ ಈಗಾಗಲೇ ನಿರ್ಮಿಸಿ ನಾಗಪ್ರತಿಷ್ಟೆಯೂ ಆಗಿದೆ. ಒಳಭಾಗದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ, ಗರ್ಭಗುಡಿ ಯ ಪಕ್ಕ ದೇವರ ವಿವಿಧ ಚಿತ್ರಾವಳಿಗಳನ್ನು ನಿರ್ಮಿಸಲಾಗಿದೆ.

ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರುರವರು ವಿವಿಧ ಸಲಹೆ ಸೂಚನೆಗಳ ಜೊತೆಗೆ ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ. ಕ್ಷೇತ್ರದಲ್ಲಿ 3500 ಚದರ ಅಡಿ ವಿಸ್ತೀರ್ಣದ ನೂತನ ಸಭಾಂಗಣದ ಕಾಮಗಾರಿ ನಡೆಯುತ್ತಿದೆ. 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಭಾಂಗಣ ದೇವಳದ ಭೋಜನ ಶಾಲೆಯಾಗಿಯೂ, ಕಲ್ಯಾಣ ಮಂಟಪವಾಗಿಯೂ ಬಳಕೆಯಾಗಲಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲತೆಗಾಗಿ ನೂತನವಾಗಿ ಶೌಚಾಲಯ ನಿರ್ಮಿಸಲಾಗಿದೆ.

2010 ರಲ್ಲಿ ನವೀಕರಣ ಪುನಃಪ್ರತಿಷ್ಠೆ ನಡೆದಿತ್ತು: 1986 ನೇ ಇಸವಿಯಲ್ಲಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. 1998 ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. 2010 ರಲ್ಲಿ ದೇವರನ್ನು ಬಾಲಾಲಯದಲ್ಲಿಟ್ಟು ನವೀಕರಣ ಪುನಃಪ್ರತಿಷ್ಠೆ ನಡೆಸಲಾಗಿತ್ತು. 12 ವರ್ಷಗಳ ಬಳಿಕ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಬ್ರಹ್ಮಕಲಶೋತ್ಸವ ಅವಿಸ್ಮರಣೀಯವಾಗಿಸಲು ಮತ್ತು ಕ್ಷೇತ್ರದಲ್ಲಿ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಿ ಕಾಮಗಾರಿಗಳು ನಡೆಯುತ್ತಿವೆ.

ಬೈಲುವಾರು ಸಮಿತಿ ರಚನೆ: ಯಾವುದೇ ಸೀಮೆಗೆ ಒಳಪಡದ ಈ ದೇವಸ್ಥಾನದ ಕಾರ್ಯವ್ಯಾಪ್ತಿಯಲ್ಲಿ ಸುಮಾರು 850 ಹಿಂದು ಮನೆಗಳಿವೆ. ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಸಲು 13 ಬೈಲುವಾರು ಸಮಿತಿಗಳನ್ನು ರಚಿಸಿಕೊಂಡು ಅಚ್ಚುಕಟ್ಟಿನ ಕಾರ್ಯಯೋಜನೆ ರೂಪುಗೊಳಿಸಲಾಗಿದೆ.

ನಿರಂತರ ಶ್ರಮಸೇವೆ: ಜೀರ್ಣೋದ್ದಾರ ಕಾಮಗಾರಿಗಳಲ್ಲಿ ಗ್ರಾಮದ ಭಕ್ತರು, ಸ್ಥಳೀಯ ಯುವಕ ಮಂಡಲಗಳು ನಿರಂತರ ಶ್ರಮಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಕಲಶೋತ್ಸವದ ವ್ಯವಸ್ಥೆಯ ಏರ್ಪಾಡು ಮಾಡಲಾಗುತ್ತಿದ್ದು, ಆಕರ್ಷಕ ಚಪ್ಪರ ವ್ಯವಸ್ಥೆಯಲ್ಲಿಯೂ ಭಕ್ತ ಸಮುದಾಯ ಹಗಲಿರುಳು ಶ್ರಮಸೇವೆಗೈಯುತ್ತಿದೆ.

ಜನವರಿ 3 ರಿಂದ ಬ್ರಹ್ಮಕಲಶೋತ್ಸವ: 2023 ನೇ ಜನವರಿ 3 ರಿಂದ 6 ದಿನಗಳ ಕಾಲ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಶ್ರೀಗಳ ಆಶೀರ್ವಚನ, ಧಾರ್ಮಿಕ ಉಪನ್ಯಾಸ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಕೈಂಕರ್ಯದಲ್ಲಿ ದೇಣಿಗೆ ಮೂಲಕ ಭಾಗಿಗಳಾಗುವ ಭಕ್ತರ ಅನುಕೂಲಕ್ಕಾಗಿ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿರುವ ಉಳಿತಾಯ ಖಾತೆ ನಂ. 3169 ಕ್ಕೆ ಅಥವಾ ಬ್ಯಾಂಕ್ ಆಫ್ ಬರೋಡಾ ವಿಟ್ಲ ಶಾಖೆಯಲ್ಲಿರುವ ಉಳಿತಾಯ ಖಾತೆ ನಂ. 83730100006631 ಗೆ (IFSC CODE: BARB0(zero)VJVITL) ಪಾವತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9480203981, 9480056883 ಸಂಪರ್ಕಿಸಬಹುದಾಗಿದೆ.

ಸಂತಾನ ಪ್ರಾಪ್ತಿ, ಕಂಕಣ ಭಾಗ್ಯಕ್ಕಾಗಿ ಊರ ಪರವೂರ ಭಕ್ತರು ತಮ್ಮ ಸಂಕಷ್ಟಗಳನ್ನು ಭಕ್ತಿಯಿಂದ ಹೇಳಿಕೊಂಡು ಇಷ್ಟಾರ್ಥ ಬೇಡಿಕೊಂಡಾಗ ಅನುಗ್ರಹಿಸುವ ದೇವರು ನಮ್ಮೆಲ್ಲರ ಆರಾಧ್ಯಮೂರ್ತಿ ಷಣ್ಮುಖ ಸುಬ್ರಹ್ಮಣ್ಯ ದೇವರು. ಇಲ್ಲಿ 1986 ರಿಂದ 2023 ರವರೆಗಿನ ಅವಧಿಯಲ್ಲಿ ನಾಲ್ಕನೇ ಬಾರಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

– ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು
ಅಧ್ಯಕ್ಷರು, ಜೀರ್ಣೋದ್ಧಾರ ಹಾಗು ಬ್ರಹ್ಮಕಲಶೋತ್ಸವ ಸಮಿತಿ

6 ತಿಂಗಳ ಹಿಂದಿನಿಂದ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದೇವೆ. ಸಂಕಲ್ಪ ಮಾಡಿರುವ ಎಲ್ಲಾ ಅಭಿವೃದ್ದಿ ಕಾರ್ಯಗಳು ದೇವರ ಅನುಗ್ರಹದಿಂದ ಸಾಕಾರಗೊಂಡು ಜನವರಿ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀ ದೇವರಿಗೆ ಅರ್ಪಣೆಯಾಗಲಿದೆ.

– ಸುರೇಶ್ ಕೆ.ಎಸ್. ಮುಕ್ಕುಡ
ಆಡಳಿತ ಮೊಕ್ತೇಸರರು

ಇಡ್ಕಿದು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಆರಾದ್ಯ ದೇವರಾಗಿರುವ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕಾಗಿ ಸಿದ್ದತೆಗಳು ನಡೆಯುತ್ತಿವೆ. 850 ಮನೆಯವರು ಸೇರಿಕೊಂಡು ಬ್ರಹ್ಮಕಲಶೋತ್ಸವಕ್ಕಾಗಿ ಪೂರ್ವಭಾವಿಯಾಗಿ 13 ಬೈಲುವಾರು ಸಮಿತಿ ರಚಿಸಿಕೊಂಡು ಪೂರ್ವಸಿದ್ದತೆಗಳ ಸಮಾಲೋಚನೆ ನಡೆಸಲಾಗುತ್ತಿದೆ. ಇಡೀ ಗ್ರಾಮಸ್ಥರು ಭಾಗಿಯಾಗುವ ರೀತಿಯಲ್ಲಿ ಮನೆಮನೆ ಭೇಟಿ ಮಾಡಲಾಗುತ್ತಿದೆ. ಒಟ್ಟು ಕಾರ್ಯಕ್ರಮಗಳು ಒಂದು ಐತಿಹಾಸಿಕವಾಗಿ ಆಗಬೇಕೆಂಬ ಸಂಕಲ್ಪದೊಂದಿಗೆ ಕಾರ್ಯಾನುಷ್ಠಾನ ಮಾಡುತ್ತಿದ್ದೇವೆ.

– ಪ್ರಫುಲ್ಲಚಂದ್ರ ಪಿ.ಜಿ. ಕೋಲ್ಪೆ ಪ್ರಧಾನ ಕಾರ್ಯದರ್ಶಿ
ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ

LEAVE A REPLY

Please enter your comment!
Please enter your name here