





ಪುತ್ತೂರು: ರಾಜ್ಯ ಸರಕಾರದ ಧಾರ್ಮಿಕ ಧತ್ತಿ ಇಲಾಖೆಗೆ ಒಳಪಟ್ಟ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.25 ಹಾಗೂ 26 ರಂದು ಶ್ರೀ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ಪಂಚಮಿ ಉತ್ಸವ, ಆಶ್ಲೇಷ ಬಳಿ, ನಾಗತಂಬಿಲ ಹಾಗೂ ವಿಜ್ರಂಭಣೆಯ ಷಷ್ಠಿ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ಜರಗಲಿದೆ.


ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ಕ್ಷೇತ್ರದಲ್ಲಿ ನ.19 ರಂದು ಬೆಳಿಗ್ಗೆ ಗೊನೆ ಕಡಿಯುವ ಮುಹೂರ್ತ ಈಗಾಗಲೇ ನೆರವೇರಿದೆ., ನ.23 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ನ.24 ರಂದು ಬೆಳಿಗ್ಗೆ ಶ್ರೀ ದೇವರಿಗೆ ಪವಮಾನಾಭಿಷೇಕ, 6 ತೆಂಗಿನಕಾಯಿ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಪಂಚವಿಂಶತಿ ಕಲಶಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ದೇವರಿಗೆ ಕಾರ್ತಿಕಪೂಜೆ, ಪ್ರಸಾದ ವಿತರಣೆ ಜರಗಲಿದೆ.





ಪಂಚಮಿ ಉತ್ಸವ, ಷಷ್ಠಿ
ನ.25 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ ಸೇವೆಗಳು, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆಗಳು, ಶಿರಾಡಿ ದೈವದ ಕಿರುವಾಳು ಬರುವುದು, ನ.26 ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ತಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು ನಂತರ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ರಾತ್ರಿ ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ, ನ.27 ರಂದು ಬೆಳಿಗ್ಗೆ ಪಂಚವಿಂಶತಿ ಕಲಶಪೂಜೆ, ಶ್ರೀ ದೇವರಿಗೆ ಸೀಯಾಳಿಭಿಷೇಕ, ಸಂಪ್ರೋಕ್ಷಣಾ ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ
ನ.25 ರಂದು ಬೆಳಿಗ್ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ಅಶೋಕ್ ಕುಮಾರ್ ರೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ವಹಿಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಪುತ್ತೂರು ನಗರ ಠಾಣೆ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಪುತ್ತೂರು ನಗರಸಭೆ ಸದಸ್ಯೆಯರಾದ ಮಮತಾ ರಂಜನ್, ಶೈಲಾ ಪೈ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ್ ನಡುಬೈಲು, ಉದ್ಯಮಿ ನಾಗೇಶ್ ರಾವ್ ಅತ್ತಾಳ ಬೆಂಗಳೂರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ನ.25 ರಂದು ಮಧ್ಯಾಹ್ನ ಸುಮನಾ ರಾವ್ ಪುತ್ತೂರು ಹಾಗೂ ಶಿಷ್ಯ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಣಿಮಾಲಿನಿ ರೈ ಬಳಗದವರಿಂದ ಭಕ್ತಿ ರಸಮಂಜರಿ, ಅಪರಾಹ್ನ ಶ್ರೀದೇವಿ ಮಹಿಳಾ ಯಕ್ಷತಂಡ ಬಾಲವನ ಪುತ್ತೂರು ಇವರಿಂದ ಯಕ್ಷಗಾನ-ಮಹಿಷವಧೆ, ಸಂಜೆ ಕೆಮ್ಮಿಂಜೆ ಧಾರ್ಮಿಕ ಶಿಕ್ಷಣ ಮಕ್ಕಳಿಂದ ಕಾರ್ಯಕ್ರಮ, ನ.26 ರಂದು ಸಂಜೆ ಸಾಯಿಕಲಾ ಯಕ್ಷಕಲಾ ಬಳಗ ಡಾ|ಶಿವರಾಮ ಕಾರಂತ ಬಾಲವನ ಪುತ್ತೂರು ಇವರಿಂದ ಯಕ್ಷಗಾನ-ಶಶಿಪ್ರಭಾ ಪರಿಣಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಭಜನಾ ಕಾರ್ಯಕ್ರಮ
ನ.24 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಪುರುಷರಕಟ್ಟೆ ಶ್ರೀ ವನದುರ್ಗಾಂಭಿಕಾ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಮಹಿಳಾ ಭಜನಾ ಮಂಡಳಿ, ಸವಣೂರು ದೇವಸ್ಯ ಶ್ರೀಹರಿ ಭಜನಾ ಮಂಡಳಿ, ಪುಣ್ಚಪ್ಪಾಡಿ ಕುಮಾರಮಂಗಲ ಶ್ರೀ ಕೃಷ್ಣಾರ್ಪಿತ ಮಹಿಳಾ ಭಜನಾ ಮಂಡಳಿ, ಬೆಳಂದೂರು ವಲಯವ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಳಿ, ಕುಂಟ್ಯಾನ ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ, ಶಾಂತಿಗೋಡು ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ, ಸುಳ್ಯಪದವು ಮಹಾಲಕ್ಷ್ಮೀ ವನಿತಾ ಭಜನಾ ಮಂಡಳಿ, ತೆಂಕಿಲ ಈಶಪ್ರಿಯ ಭಜನಾ ಮಂಡಳಿ, ನರಿಮೊಗರು ಸೇರಾಜೆ ಶ್ರೀ ಶಾರದಾಂಬಾ ಭಜನಾ ಮಂಡಳಿ, ಬೆದ್ರಾಳ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿ, ನ.25 ರಂದು ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಶಾಂತಿಗೋಡು ಪಜಿರೋಡಿ ಅಯ್ಯಪ್ಪ ಭಜನಾ ಮಂಡಳಿ, ಕಲ್ಲಾರೆ ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ, ನೆಟ್ಡಾರು ಬ್ರಾಹ್ಮರಿ ಭಜನಾ ಮಂಡಳಿ, ಚಾರ್ವಾಕ ಸಾಕ್ಷಾತ್ ಶಿವ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಲಿರುವರು.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಹಾಗೂ ಸದಸ್ಯರು, ಅರ್ಚಕರು, ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.24: ಹಸಿರು ಹೊರೆಕಾಣಿಕೆ
ನ.24 ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ ಜರಗಲಿದ್ದು ಹಸಿರು ಕಾಣಿಕೆ ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಿಂದ ಹೊರಟು ದರ್ಬೆ ಮಾರ್ಗವಾಗಿ ಕೆಮ್ಮಿಂಜೆ ದೇವಸ್ಥಾನಕ್ಕೆ ತಲುಪುವುದು. ಭಕ್ತಾಧಿಗಳಿಂದ ಬೆಳ್ತಿಗೆ ಅಕ್ಕಿ, ಸೀಯಾಳ, ತೆಂಗಿನಕಾಯಿ, ಬಾಳೆಎಲೆ, ತರಕಾರಿ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ವರ್ಷಂಪ್ರತಿ ಶ್ರೀ ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆದು ಶ್ರೀ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ವಿಜ್ರಂಭಣೆಯಲ್ಲಿ ಜರಗಲಿರುವುದು. ಪ್ರತೀ ವರ್ಷ ಷಷ್ಠಿ ಮಹೋತ್ಸವ ಕಾರ್ಯಕ್ರಮ ಭಕ್ತಾಭಿಮಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆದು ಬಂದಿದೆ. ಈಗಾಗಲೇ ಶ್ರೀ ಕ್ಷೇತ್ರದ ಆಮಂತ್ರಣ ಪತ್ರಿಕೆಯನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಹಸಿರು ಹೊರೆಕಾಣಿಕೆ, ಧಾರ್ಮಿಕ ಕಾರ್ಯಕ್ರಮ ಇತ್ಯಾದಿಗಳನ್ನು ಭಕ್ತಾದಿಗಳು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಕೇಶವ ಪೂಜಾರಿ ಬೆದ್ರಾಳ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನ, ಕೆಮ್ಮಿಂಜೆ










