ವೃತ್ತಿಪರತೆ ಕುರಿತ ಒಲವು ವಕೀಲರಿಗೆ ಅವಶ್ಯಕ: ಎನ್ ರವೀಂದ್ರನಾಥ್ ಕಾಮತ್
ವಕೀಲ ವೃತ್ತಿಯಲ್ಲಿ ವೃತ್ತಿಪರತೆ ಹಾಗೂ ಕಠಿಣ ಪರಿಶ್ರಮ ಇದ್ದಾಗ ವಿಶೇಷ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಯಾವುದೇ ಹುದ್ದೆಗಳನ್ನು ನಿರ್ವಹಿಸಿದರೂ ಸಿಗದಂತಹ ಪ್ರೀತಿ, ವಿಶ್ವಾಸ ವಕೀಲ ವೃತ್ತಿಯಲ್ಲಿ ಸಿಗುತ್ತದೆ. ವಕೀಲರು ಹೆಚ್ಚು ಹೆಚ್ಚು ಕಾನೂನನ್ನು ತಿಳಿದುಕೊಂಡರೆ ಒಳ್ಳೆಯ ವಕೀಲರಾಗಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯವಾದಿ ಎನ್ ರವೀಂದ್ರನಾಥ್ ಕಾಮತ್ ತಿಳಿಸಿದರು.
ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಜ್ಯುರಿಸ್-ಜುರಾ- ವಿಶೇಷ ಉಪನ್ಯಾಸಗಳ ಸರಣಿಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ನಂತರ ವಿಶೇಷ ಉಪನ್ಯಾಸ ನೀಡಿದ ಅವರು, ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜತೆಗೆ ತಮ್ಮ ವೃತ್ತಿಯಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಹೆಚ್ಚು ಜ್ಞಾನ ಸಂಪಾದನೆಯ ಜತೆಗೆ ಹಿರಿಯ ವಕೀಲರ ಮಾಗದರ್ಶನ ಪಡೆದರೆ ಉತ್ತಮ ವಕೀಲರಾಗಬಹುದು. ವಕೀಲರಾದವರು ಹಣದ ಹಿಂದೆ ಓಡುವ ಬದಲು ಜ್ಞಾನದ ಹಿಂದೆ ಹೋದರೆ ತಾನಾಗಿಯೇ ಹಣ ನಮ್ಮ ಬಳಿ ಬರುತ್ತದೆ. ಕಾನೂನು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಕಾನೂನು ಜ್ಞಾನವನ್ನು ಎಲ್ಲಾ ರೀತಿಯಲ್ಲೂ ಪಡೆದುಕೊಂಡು ಈ ಶ್ರೇಷ್ಠ ವೃತ್ತಿಗೆ ಬನ್ನಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕ ಡಾ. ಬಿ. ಕೆ. ರವೀಂದ್ರ ಮಾತನಾಡಿ, ಕಾನೂನು ಜಗತ್ತಿನ ಆಗು-ಹೋಗುಗಳ ಬಗ್ಗೆ ನಿರಂತರ ಅಧ್ಯಯನ, ಕೆಲಸದಲ್ಲಿ ಶ್ರದ್ಧೆ, ಕಲಿಕಾ ಪ್ರವೃತ್ತಿ ಕೌಶಲ್ಯಗಳು ಅದನ್ನು ಪಡೆಯಲು ಬೇಕಾದ ಸರಿಯಾದ ತರಬೇತಿಯನ್ನು ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಪಡೆದುಕೊಳ್ಳಬೇಕು. ಮನುಷ್ಯನ ಅತ್ಯಂತ ದೊಡ್ಡ ಶ್ರೀಮಂತಿಕೆ ಅಂದರೆ ತನ್ನ ವೃತ್ತಿ ಕ್ಷೇತ್ರದಲ್ಲಿ ತಾನು ಪಡೆದ ಕೌಶಲ್ಯವಾಗಿದೆ. ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ತಮ್ಮ ತಮ್ಮ ವಿಶೇಷ ಕ್ಷೇತ್ರಗಳಲ್ಲಿ ಹೆಚ್ಚಿನ ಕುಶಲತೆ ಹೊಂದಿದಾಗ ಗೆಲುವು ಸಾಧ್ಯವಾಗುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ಬರುವ ವ್ಯತಿರಿಕ್ತ ಸನ್ನಿವೇಶಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮೂಲಕ ತನ್ನ ವೃತ್ತಿ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಉಪಸ್ಥಿತರಿದ್ದರು. ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀರಕ್ಷಾ ಸ್ವಾಗತಿಸಿ, ವಿದ್ಯಾರ್ಥಿನಿ ಸ್ವರ್ಣಗೌರಿ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಋತ್ವಿಕಾ ನಿರೂಪಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.