




ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಾಗೂ ಕನ್ನಡದಲ್ಲಿ IAS, IPS ಪರೀಕ್ಷೆ ಬರೆಯಿರಿ ಅಭಿಯಾನದ ಉದ್ಘಾಟನಾ ಸಮಾರಂಭ ದ.13ರಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.



ಭಾರತದಲ್ಲಿ ಪ್ರತಿ ವರ್ಷವೂ 12ರಿಂದ 13 ಲಕ್ಷ ಮಂದಿ ಕೇಂದ್ರ ಲೋಕಸೇವಾ ಆಯೋಗದಿಂದ ನಡೆಸುವ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಕೇವಲ 700-800 ಮಂದಿ ಅಷ್ಟೇ ಆಯ್ಕೆಯಾಗುತ್ತಾರೆ. ದಕ್ಷಿಣ ಕನ್ನಡದಿಂದ ಈ ಪರೀಕ್ಷೆ ಬರೆಯುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯ ಕೊರತೆ ಹಾಗೂ ಈ ಪರೀಕ್ಷೆಗಳನ್ನು ಕನ್ನಡದಲ್ಲಿ ಕೂಡ ಬರೆಯಬಹುದೆಂಬ ಮಾಹಿತಿಯ ಕೊರತೆ ಇದಕ್ಕೆ ಕಾರಣವಾಗಿದೆ.





ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ ಯಶಸ್ ಪುತ್ತೂರು ಇವರು ಜಂಟಿಯಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಸುವ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಈಗಾಗಲೇ ವಿವೇಕಾನಂದ ವಿದ್ಯಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ 8 ಕಾರ್ಯಾಗಾರವನ್ನು ನಡೆಸಲಾಗಿದೆ. ಸುಮಾರು 2,800 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡಿದ್ದಾರೆ.
ಈ ಅಭಿಯಾನದ ಉದ್ಘಾಟನೆ ದ. 13ರಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಸುರೇಂದ್ರ ಕಿಣಿ, ವಿವೇಕಾನಂದ IAS ಅಧ್ಯಯನ ಕೇಂದ್ರ ಯಶಸ್ ಇದರ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಭಾಗವಹಿಸಲಿದ್ದಾರೆ. ಸಂಸ್ಥೆಯ ತಜ್ಞ ತರಬೇತುದಾರ ದರ್ಶನ್ ಗರ್ತಿಕೆರೆಯವರು ಸಂಪನ್ಮೂಲ ವ್ಯಕ್ತಿಯಾಗಿ ಈ ಸರಣಿ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.







