`ಕಲಿತಿರುವುದನ್ನು ಮುಂದುವರಿಸುವುದು ನಮ್ಮೆಲ್ಲರ ಧರ್ಮ’

0

ವೇದಾಧ್ಯಯನ ತರಗತಿಯ ಸಮಾರೋಪದಲ್ಲಿ ಕೇಶವಪ್ರಸಾದ್ ಮುಳಿಯ

ಪುತ್ತೂರು:ಬ್ರಾಹ್ಮಣರಾಗಿ ಹುಟ್ಟಿ ನಾವು ವೇದಾಧ್ಯಯನ ಮಾಡುವುದು ನಮ್ಮ ಕರ್ತವ್ಯ ಆಗಿದೆ.ಬ್ರಾಹ್ಮಣ್ಯ ಅನ್ನುವುದು ಜಾತಿಯಲ್ಲ.ಇದೊಂದು ಅರ್ಹತೆ.ಹಾಗೆ ವೇದಾಧ್ಯಯನ ವರ್ಷಾನುಗಟ್ಟಲೆ ಮಾಡಿದಾಗ ಮಾತ್ರ ಬ್ರಾಹ್ಮಣ್ಯ ಒಲಿಯುತ್ತದೆ.ಈ ನಿಟ್ಟಿನಲ್ಲಿ ಕಲಿತಿರುವುದನ್ನು ಮುಂದಿನ ದಿನ ಮುಂದುವರಿಸುವುದು ನಮ್ಮೆಲ್ಲರ ಧರ್ಮ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಹೇಳಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ವೇದ ಸಂವರ್ಧನಾ ಪ್ರತಿಷ್ಠಾನದ ವತಿಯಿಂದ ದೇವಳದ ವಠಾರದಲ್ಲಿ ಸುಮಾರು ಐದವರೆ ತಿಂಗಳು ನಡೆದ ವೇದ ಪಾಠ ಶಿಬಿರದ ಪ್ರಥಮ ಹಂತದ ತರಗತಿಯ ಸಮಾರೋಪದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೈದ್ಯನಾದವನಿಗೆ ಪೂರ್ಣ ಶಿಕ್ಷಣದ ಬಳಿಕವೇ ಆಪರೇಷನ್ ಥಿಯೇಟರ್‌ಗೆ ಹೋಗಲು ಅರ್ಹತೆ ಇದ್ದಂತೆ ದೇವರ ವೇದಾಭ್ಯಾಸವನ್ನು ವರ್ಷಾನುಗಟ್ಟಲೆ ಮಾಡಿದಾಗ ಮಾತ್ರ ಬ್ರಾಹ್ಮಣ್ಯ ಒಲಿಯುತ್ತದೆ.ಹಾಗಾಗಿ ಒಂದಷ್ಟು ಸೂಕ್ತ ಮಂತ್ರಗಳನ್ನು ಪ್ರಾರಂಭ ಹಂತದಲ್ಲಿ ಮಾಡಲು ವೇದ ಸಂವರ್ಧನಾ ಪ್ರತಿಷ್ಠಾನ ಮತ್ತು ವ್ಯವಸ್ಥಾಪನಾ ಸಮಿತಿಯ ಮೂಲಕ ಅವಕಾಶ ನೀಡಲಾಯಿತು.ಕಲಿತಿರುವುದನ್ನು ಮುಂದಿನ ದಿನ ಮುಂದುವರಿಸುವುದು ನಮ್ಮೆಲ್ಲರ ಧರ್ಮ ಎಂದರು.

ವೇದ ಪಾಠ ಶಾಲೆಯ ಮುಖ್ಯಗುರು ವೇ.ಮೂ.ಜಯರಾಮ ಜೋಯಿಷ, ವೇ.ಮೂ.ತೇಜಶಂಕರ್ ವೇದಾಧ್ಯಯನದ ಕುರಿತು ಉಪನ್ಯಾಸ ನೀಡಿದರು.

ಗುರುವಂದನೆ:
ಜೂನ್ ತಿಂಗಳಲ್ಲಿ ಪ್ರಾರಂಭವಾದ ವೇದ ಪಾಠ ತರಗತಿಯಲ್ಲಿ ಸುಮಾರು 40ಮಂದಿ ವೇದಾಧ್ಯಯನ ಮಾಡುತ್ತಿದ್ದು, ಅವರೆಲ್ಲ ತಮ್ಮ ಅಧ್ಯಯನದಲ್ಲಿ ಗುರುಗಳಾಗಿ ಮಾರ್ಗದರ್ಶನ ನೀಡಿದ ಮುಖ್ಯಗುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ.ಜಯರಾಮ ಜೋಯಿಷ, ವೇ.ಮೂ.ಉದಯಕೃಷ್ಣ ಭಟ್, ವೇ.ಮೂ.ತೇಜಶಂಕರ್‌ರವರಿಗೆ ಗುರುಕಾಣಿಕೆ ನೀಡಿ ಗುರುವಂದನೆ ಸಲ್ಲಿಸಿದರು.ಉಪಗುರು ಪ್ರತೀಕ್ ಎನ್.ಎಸ್ ಅವರಿಗೂ ಗೌರವ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ವೇದಾಧ್ಯಯನ ಶಾಲೆಯಲ್ಲಿ ಭಾಗವಹಿಸಿದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ವೇದ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ಎಂ.ಟಿ.ಜಯರಾಮ ಭಟ್, ಉಪಾಧ್ಯಕ್ಷ ಮಹಾದೇವ ಶಾಸ್ತ್ರಿ, ಯು.ಗೋಪಾಲ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸತೀಶ್ ವಂದಿಸಿದರು.ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here