





ಪುತ್ತೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಹುಟ್ಟು ಹಬ್ಬದ ಸಲುವಾಗಿ ನ.19ಕ್ಕೆ ಪುತ್ತೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ‘ಅಟಲ್ ವಿರಾಸತ್’ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಪುತ್ತೂರಿನಲ್ಲಿ ನ.7ರಂದು ಕಲ್ಲೇಗ ಭಾರತ್ ಮಾತಾ ಸಭಾಂಗಣದಲ್ಲಿ ಬಿಜೆಪಿ ಮುಖಂಡರ ಪೂರ್ವಭಾವಿ ಸಭೆ ನಡೆದಿದೆ.


ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ, ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳೇ ಈ ಸಭೆಯಲ್ಲಿ ಉಪಸ್ಥಿತರಿರಲಿಲ್ಲ.ಜೊತೆಗೆ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರೂ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.ಇದರಿಂದಾಗಿ, ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ಮತ್ತೆ ಬಿರುಕು ಮೂಡಿದೆಯೇ ಎಂದು ಚರ್ಚೆಗಳು ನಡೆಯಲಾರಂಭಿಸಿದೆ.





‘ಅಟಲ್ ವಿರಾಸತ್’ ಜಿಲ್ಲಾ ಮಟ್ಟದ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಲಿದ್ದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದೆ.ಅಟಲ್ ವಿರಾಸತ್ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಸಂಚಾಲಕತ್ವದಲ್ಲಿ ಪುತ್ತೂರಿನಲ್ಲಿ ನಡೆಯಲಿದೆ.ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಅಧ್ಯಕ್ಷರು,ಇತರ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಆದರೆ,ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪೈ ಅವರು ಗೈರಾಗಿದ್ದರು.ನಾಗೇಶ್ ಪೈ ಅವರು ವೈಯಕ್ತಿಕ ಕಾರಣಗಳಿಂದಾಗಿ ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿಯುವುದಾಗಿ ಈ ಹಿಂದೆಯೇ ತಿಳಿಸಿದ್ದರು.ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ಹಾಗೂ ಅನಿಲ್ ತೆಂಕಿಲ ಮೂವರೂ ಪುತ್ತಿಲ ಪರಿವಾರ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವವರಾಗಿದ್ದು ಅವರು ಮೂವರೂ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿರುವುದು ಮತ್ತು ಪುತ್ತಿಲ ಪರಿವಾರದ ಮುಖ್ಯಸ್ಥರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರೂ ಗೈರು ಹಾಜರಾಗಿದ್ದ ವಿಚಾರ ನಾನಾ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಅವಕಾಶ ದೊರೆಯದೇ ಇದ್ದುದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು.ಪರಾಭವಗೊಂಡರೂ ಮತಗಳಿಕೆಯಲ್ಲಿ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.ಅದಾದ ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಘಟನೆ ಸ್ಥಾಪನೆಯಾಯಿತು.ಬಳಿಕದ ಬೆಳವಣಿಗೆಯಲ್ಲಿ ಹಲವು ಮಾತುಕತೆಗಳು ನಡೆದ ಬಳಿಕ ಕೊನೆಗೂ ಪುತ್ತಿಲ ಪರಿವಾರ ಮತ್ತು ಬಿಜೆಪಿ ಒಂದಾಗಿತ್ತು.ರಾಜಕೀಯವಾಗಿ ಒಂದಾದರೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನಿಂದ ಪ್ರತ್ಯೇಕವಾಗಿ ಕಾರ್ಯಕ್ರಮಗಳು ಮುಂದುವರಿದಿತ್ತು.ಬಿಜೆಪಿ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರೆಲ್ಲರೂ ಪಾಲ್ಗೊಳ್ಳುತ್ತಿದ್ದರು.ಆದರೆ ಪುತ್ತಿಲ ಪರಿವಾರದ ಕೆಲ ಪ್ರಮುಖ ಕಾರ್ಯಕ್ರಮಗಳಲ್ಲಿಯೂ ಬಿಜೆಪಿಯ ಕೆಲವರು ಪಾಲ್ಗೊಳ್ಳುತ್ತಿರಲಿಲ್ಲ.ಈ ನಡುವೆ ಅರುಣ್ ಕುಮಾರ್ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡುವ ಕುರಿತು ಪಕ್ಷದ ನಾಯಕರು ಭರವಸೆ ನೀಡಿದ್ದರೆನ್ನಲಾಗಿತ್ತಾದರೂ ಅದೂ ಅನುಷ್ಟಾನಗೊಂಡಿಲ್ಲ.ಬದಲಿಗೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆ, ಉಮೇಶ್ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ, ಅನಿಲ ತೆಂಕಿಲರವರಿಗೆ ಬಿಜೆಪಿ ಮಂಡಲದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಯಿತು.ಇನ್ನೇನು ಎಲ್ಲವೂ ಸರಿಯಾಯಿತು ಅಂದುಕೊಳ್ಳುತ್ತಿರುವಾಗಲೇ ಇದೀಗ ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿರುವ ಬಿಜೆಪಿಯ ಮೂವರು ಪ್ರಧಾನ ಕಾರ್ಯದರ್ಶಿಗಳು ಮತ್ತು ಅರುಣ್ ಕುಮಾರ್ ಪುತ್ತಿಲ ಅವರು ಅಟಲ್ ವಿರಾಸತ್ ಪೂರ್ವಭಾವಿ ಸಭೆಗೆ ಹಾಜರಾಗದೇ ಇರುವುದು ಮತ್ತೆ ಹಲವು ಊಹಾಪೋಹಗಳಿಗೆ ಕಾರಣವಾಗಿ ಚರ್ಚೆಗೆ ಗ್ರಾಸವಾಗಿದೆ.ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲವೇ ಅಥವಾ ಆಹ್ವಾನವಿದ್ದರೂ ಅಸಮಾಧಾನದಿಂದ ಸಭೆಗೆ ಹೋಗಿರಲಿಲ್ಲವೇ?ಸಾಮಾನ್ಯವಾಗಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಪ್ರಧಾನ ಕಾರ್ಯದರ್ಶಿಗಳೇ ಸಭೆಗೆ ಆಹ್ವಾನದಂತಹ ಜವಾಬ್ದಾರಿ ನಿರ್ವಹಿಸುವುದು.ಆದರೆ ಇಲ್ಲಿ ಪ್ರಧಾನ ಕಾರ್ಯದರ್ಶಿಗಳೇ ಸಭೆಗೆ ಗೈರು ಹಾಜರಾಗಿರುವುದು ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ.
ಜಿಲ್ಲೆಯ ಬಿಜೆಪಿ ಶಾಸಕರೂ ಗೈರು: ಜಿಲ್ಲಾ ಮಟ್ಟದ ಕಾರ್ಯಕ್ರಮದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ 7 ಮಂದಿ ಬಿಜೆಪಿ ಶಾಸಕರೂ ಗೈರಾಗಿದ್ದರು.









