ಸಮಿತಿ ಸದಸ್ಯರಾಗಿ ಸಚಿವ ಎಸ್.ಅಂಗಾರ
ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ ಒಳ ಮೀಸಲಾತಿ ಕೂಗು ಜೋರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಒಳಮೀಸಲಾತಿ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ.
ನ.17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಕುರಿತು ಸಂಪುಟ ಉಪ ಸಮಿತಿ ರಚಿಸಲು ನಿರ್ಣಯಿಸಲಾಗಿತ್ತು. ಆದರೆ, ಇದೀಗ ಒಳಮೀಸಲಾತಿ ಆಗ್ರಹಿಸಿ ಹೋರಾಟ ಆರಂಭವಾಗುತ್ತಿದ್ದಂತೆ ಸಂಪುಟ ಉಪ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ, ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ,ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈ ಸಮಿತಿಯ ಸದಸ್ಯರು.ಈ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಗತ್ಯ ನೆರವು ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಒಳಮೀಸಲಾತಿಗಾಗಿ ಮುಂದುವರಿದ ಪ್ರತಿಭಟನೆ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ‘ಪರಿಶಿಷ್ಟ ಜಾತಿಯ ಒಳಮೀಸಲಾತಿ ಹೋರಾಟ ಜಾರಿ ಹೋರಾಟ ಸಮಿತಿ’ ನಡೆಸುತ್ತಿರುವ ಹೋರಾಟ ಎರಡನೇ ದಿನವಾದ ದ.13ರಂದೂ ಮುಂದುವರಿದಿದ್ದು ಅಹೋರಾತ್ರಿ ಹೋರಾಟಕ್ಕೆ ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಳೆಯ ನಡುವೆ ಧರಣಿ ಮುಂದುವರಿದಿದ್ದು, ಒಳ ಮೀಸಲಾತಿ ಜಾರಿ ಆಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ. ಸದಾಶಿವ ಆಯೋಗದ ವರದಿಯ ಗಂಟನ್ನು ಬಿಚ್ಚಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲೇಬೇಕು. ಇಲ್ಲದಿದ್ದರೆ 2018ರಲ್ಲಿ ಕಾಂಗ್ರೆಸ್‌ಗೆ ಆದ ಗತಿಯೇ 2023ರಲ್ಲಿ ಬಿಜೆಪಿಗೂ ಆಗಲಿದೆ ಎಂದೂ ಹೋರಾಟಗಾರರು ಎಚ್ಚರಿಸಿದರು.