ಜಿ.ಪಂ.,ತಾ.ಪಂ.ಚುನಾವಣೆ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ

0

ರಾಜ್ಯ ಸರ್ಕಾರಕ್ಕೆ ರೂ.5 ಲಕ್ಷ ದಂಡ

ಬೆಂಗಳೂರು:ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ರೂ.5 ಲಕ್ಷ ದಂಡ ವಿಧಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ ರದ್ದುಪಡಿಸಬೇಕು ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪಟ್ಟಿ ನೀಡಲು ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ದ.14ರಂದು ವಿಚಾರಣೆ ನಡೆಸಿತು. ಸೀಮಾ ನಿರ್ಣಯ ಆಯೋಗ ಪರ ಹಾಜರಾಗಿದ್ದ ಹಿರಿಯ ವಕೀಲರು, ಕ್ಷೇತ್ರ ಪುನರ್ ವಿಂಗಡಣೆಗೆ ಇನ್ನೂ 90 ದಿನಗಳ ಕಾಲಾವಾಕಾಶ ನೀಡಬೇಕು ಎಂದು ವಿಚಾರಣೆ ವೇಳೆ ಮನವಿ ಮಾಡಿದರು. ಆದರೆ ಇದನ್ನು ಒಪ್ಪದ ನ್ಯಾಯಪೀಠ, ಪದೇ ಪದೇ ಕಾಲಾವಕಾಶ ಕೇಳುತ್ತಿರುವ ನಿಮ್ಮ ಹಾಗೂ ಸರ್ಕಾರದ ನಡೆ ಸರಿಯಲ್ಲ.ಇದು ಬಸವನಹುಳು ರೀತಿಯ ನಿಧಾನ ಗತಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಹೈಕೋರ್ಟ್ ಈ ವಿಷಯದಲ್ಲಿ ಈಗಾಗಲೇ ಆರು ತಿಂಗಳ ಸುದೀರ್ಘ ಕಾಲಾವಕಾಶ ನೀಡಿದ್ದರೂ ಈ ಪ್ರಕ್ರಿಯೆಯಲ್ಲಿ ಒಂದಿಂಚೂ ಪ್ರಗತಿಯಾಗಿಲ್ಲ.ಇದು ಕೋರ್ಟ್ ಆದೇಶಗಳನ್ನು ನಿಷ್ಕ್ರಿಯಗೊಳಿಸುವ ಧೋರಣೆಯಿಂದ ಕೂಡಿದ ವರ್ತನೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

2023ರ ಫೆಬ್ರವರಿ 1ರೊಳಗೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದ ನ್ಯಾಯಪೀಠ ವಿಚಾರಣೆಯನ್ನು2023ರ ಫೆಬ್ರವರಿ 2ಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here