ಕೋಡಿಂಬಾಳದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ

0

ಜನಸಾಮಾನ್ಯರಿಗೂ ಆರೋಗ್ಯ ಸೇವೆ ಸರಕಾರದ ಆಶಯ: ಸಚಿವ ಅಂಗಾರ

ಕಡಬ: ಗ್ರಾಮಾಂತರ ಮಟ್ಟದಲ್ಲಿ ಜನಸಾಮಾನ್ಯರಿಗೂ ಅತ್ಯಂತ ಸುಲಭದಲ್ಲಿ ಆರೋಗ್ಯ ಸೇವೆ ದೊರೆಯಬೇಕು ಎನ್ನುವ ಉದ್ದೇಶದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್‌ನ್ನು ಪ್ರಾರಂಭಿಸಲಾಗಿದೆ ಎಂದು ಬಂದರು ಮೀನುಗಾರಿಕೆ , ಒಳನಾಡು, ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಅವರು ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಾಳದಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ನಮ್ಮ ಕ್ಲಿನಿಕ್ ಆರೋಗ್ಯ ಸೇವಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಸರಕಾರ ರಾಜ್ಯದಲ್ಲಿ ನಾನಾ ತಾಲೂಕುಗಳಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ ಘಟಕಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಈ ಪೈಕಿ 114 ಘಟಕಗಳನ್ನು ಬುಧವಾರ ಏಕ ಕಾಲದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ|ಸುಧಾಕರ ಲೋಕಾರ್ಪಣೆ ಮಾಡಿದ್ದಾರೆ. ನಮ್ಮ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕದಲ್ಲಿ ಹಾಗೂ ನೂತನ ಕಡಬ ತಾಲೂಕಿನ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಾಳದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಲಾಗಿದೆ ಎಂದು ಹೇಳಿದ ಸಚಿವ ಅಂಗಾರ, ಪ್ರಧಾನಿ ನರೇಂದ್ರ ಮೋದಿಯವರು ಎಂಟು ವರ್ಷಗಳ ಆಡಳಿತದಲ್ಲಿ ದೇಶದ ಭವಿಷ್ಯವನ್ನು ಕಣ್ಣಮುಂದೆ ಇಟ್ಟುಕೊಂಡು ಆಡಳಿತದಲ್ಲಿ ಸುಧಾರಣೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಲ್ಲಿ ಸರಕಾರದ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುವಂತೆ ಮಾಡಿದ್ದಾರೆ ಎಂದರು.

ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಅಮಿತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸರಕಾರ 15 ನೇ ಹಣಕಾಸು ಅಡಿಯಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಅನುದಾನ ಶಿಫಾರಸ್ಸು ಮಾಡಿದೆ, ನಗರಕ್ಕೆ ಹೊಂದಿಕೊಡಿರುವ ಗ್ರಾಮೀಣ ಪ್ರದೇಶದ ಸಮುದಾಯದ ಸಮಗ್ರ ಪ್ರಾಥಮಿಕ ಸೇವೆಗಳನ್ನು ನೀಡುವ ಸದುದ್ದೇಶ ಹೊಂದಿದೆ, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಮತ್ತು ನಿರಂತರ ಪಾಲನೆ ಮೇಲಿನ ಹಂತದ ಸೇವೆ ನೀಡುವ ಆಸ್ಪತ್ರೆಗಳಿಗೆ ಶಿಫಾರಸ್ಸು ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶಗಳನ್ನು ಹೊಂದಿದೆ, ಇಲ್ಲಿ 15 ಉಚಿತ ಸೇವೆಗಳನ್ನು ನೀಡಲಾಗುತ್ತದೆ, ಹಾಗೂ ಯೋಗ ಕಾರ್ಯಕ್ರಮ ನಡೆಯುತ್ತದೆ, ಇಲ್ಲಿ ಒಬ್ಬರು ವೈದ್ಯಾಧಿಕಾರಿ ಒಬ್ಬರು ಶುಶ್ರೂಷಣಾಧಿಕಾರಿ, ಒಬ್ಬ ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ನೌಕರ ಹೀಗೆ ಒಟ್ಟು ನಾಲ್ಕು ಸಿಬ್ಬಂದಿಗಳು ಸೇವೆ ನೀಡಲಿದ್ದಾರೆ ಎಂದರು.

ಕಡಬ ತಹಸೀಲ್ದಾರ್ ರಮೇಶ್ ಬಾಬು, ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್, ಕಟ್ಟಡದ ಮಾಲಿಕ ರಾಮಚಂದ್ರ, ನಮ್ಮ ಕ್ಲಿನಿಕ್‌ನ ಪ್ರಭಾರ ವೈದ್ಯಾಧಿಕಾರಿ ಡಾ. ಸಂಜನಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಡಾ|ಅಮಿತ್ ಕುಮಾರ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ರವಿಶಂಕರ್ ವಂದಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here