ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೃಷಿ ವಿಜ್ಞಾನ ಕೇಂದ್ರ ದ.ಕ ಮಂಗಳೂರು ಇದರ ಸಹಯೋಗದೊಂದಿಗೆ ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ವಿಧಾನಗಳ ಕುರಿತು ಹಾಗೂ ಅಡಿಕೆ ಎಲೆಚುಕ್ಕಿ ರೋಗ, ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗದ ಹತೋಟಿ ಬಗ್ಗೆ ಮಾಹಿತಿ ಕಾರ್ಯಾಗಾರ ಡಿ.12 ರಂದು ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೆ.ವಿ.ಕೆ ಮಂಗಳೂರು ಸಸ್ಯ ಸಂರಕ್ಷಣೆಯ ವಿಜ್ಞಾನಿ ಡಾ.ಕೇದಾರನಾಥ ಮಾತನಾಡಿ ಸಾಮಾನ್ಯವಾಗಿ ಕೃಷಿಕರು ನಮ್ಮ ಹಿರಿಯರು ಮಾಡಿರುವ ಪದ್ದತಿಯನ್ನೇ ನಮ್ಮ ತೋಟದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದು ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾವಣೆ ಅವಶ್ಯಕವಾಗಿದೆ. ಕೃಷಿಕರು ತಮ್ಮ ಕೃಷಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದ್ದು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಾಗ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದರು.
ಕೆವಿಕೆ ಮಂಗಳೂರು ಇಲ್ಲಿನ ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ ಆರ್ ಮಾತನಾಡಿ ಅಡಿಕೆ ಗಿಡ ಚೆನ್ನಾಗಿ ಬೆಳೆಯಬೇಕಾದರೆ ಪೋಷಕಾಂಶಗಳನ್ನು ಕ್ರಮಬದ್ದವಾಗಿ ಸಮತೋಲನವಾಗಿ ನೀಡವುದು ಅತ್ಯಗತ್ಯವಾಗಿದ್ದು ಗಿಡದ ಬೆಳವಣಿಗೆಗೆ ಪೋಷಕಾಂಶ ಸರಿಯಾದ ರೀತಿಯಲ್ಲಿ ಹಾಕಬೇಕಾಗಿದೆ ಎಂದು ಹೇಳಿ ಅಡಿಕೆ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಅತಿಥಿಯಾಗಿದ್ದ ಹಿರಿಯ ವಿಜ್ಞಾನಿ, ಕೆ.ವಿ.ಕೆ ಮಂಗಳೂರು ಇದರ ಮುಖ್ಯಸ್ಥರಾದ ಡಾ.ಟಿ.ಜೆ ರಮೇಶ ಮಾತನಾಡಿ ಯಾವುದೇ ರೈತರಿಗೆ ತೋಟಗಾರಿಕೆ ಕೃಷಿ ವಿಚಾರದಲ್ಲಿ ಮಾಹಿತಿ, ತರಬೇತಿ ಅಗತ್ಯವಿದ್ದಲ್ಲಿ ಕೆವಿಕೆ ಮಂಗಳೂರು ವತಿಯಿಂದ ನೀಡಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ನಮ್ಮ ಸಂಘವು ಆರ್ಥಿಕತೆಯೊಂದಿಗೆ ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಹಿತಿ ನೀಡುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ ಮಾತನಾಡಿ . ಸಂಘದ ಸದಸ್ಯರಿಗೆ ಸರಕಾರದ ಯೋಜನೆಯಾದ ಯಶಸ್ವಿನಿ ಆರೋಗ್ಯ ರಕ್ಷಣಾ ವಿಮೆಯ ಮಾಹಿತಿಯನ್ನು ನೀಡಿದರು. ಯಶಸ್ವಿನಿ ಯೋಜನೆ ಈ ತಿಂಗಳ ಕೊನೆಯವರೆಗೆ ನೋಂದಾವಣೆ ಇರಲಿದ್ದು ಇದನ್ನು ಮಾಡಿಸಿಕೊಳ್ಳದವರು ಆದಷ್ಟು ಬೇಗನೇ ಮಾಡಿಸಿಕೊಳ್ಳಿ ಎಂದು ಹೇಳಿದರು.
ಗೇರು ಕೃಷಿಕರಿಗೆ ಉಚಿತ ಔಷಧಿ ವಿತರಣೆ:
ಗೇರು ಬೆಳೆಯಲ್ಲಿ ಕಾಂಡ ಮತ್ತು ಬೇರು ಕೊರೆಕದ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ಮತ್ತು 10 ಗೇರು ಕೃಷಿಕರಿಗೆ ಉಚಿತ ಔಷಧಿಯನ್ನು ನೀಡಲಾಯಿತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಗುಲಾಬಿ ಎನ್ ಶೆಟ್ಟಿ, ಮೋಹಿನಿ ಪಜಿಮಣ್ಣು, ವಸಂತ ಬಿ.ಎನ್, ಆನಂದ ಪೂಜಾರಿ ಹಾಗೂ ಅನೇಕ ಕೃಷಿಕರು ಉಪಸ್ಥಿತರಿದ್ದರು. ಮುಂಡೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು.