ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಮನೆಯೊಂದರಲ್ಲಿ 2 ಲಕ್ಷ ರೂ.ನಗದು ಕಳವುಗೊಂಡಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ಮಹಮ್ಮದ್ ರಾಹೀಲ್‌ರವರು ಈ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾನು ತಂದೆ, ತಾಯಿ ಹಾಗೂ ತಮ್ಮನೊಂದಿಗೆ ವಾಸವಾಗಿದ್ದು ಮನೆ ಇಂಟೀರಿಯರ್ ಡಿಸೈನ್ ಕೆಲಸ ಮಾಡಿಕೊಂಡಿರುತ್ತೇನೆ. ತಂದೆಯವರು ಇಂಟಿರೀಯರ್ ಡಿಸೈನ್ ಹಾಗೂ ಅಂಗಡಿ ವ್ಯಾಪಾರ ಮಾಡಿ ದುಡಿದ ರೂ.2 ಲಕ್ಷವನ್ನು ಅವರು ಮಲಗುವ ಕೋಣೆಯ ಕಪಾಟಿನಲ್ಲಿ 10 ದಿನಗಳ ಹಿಂದೆ ಇಟ್ಟಿರುತ್ತಾರೆ. ಸದ್ರಿ ಕೋಣೆಯ ಬಾಗಿಲಿನ ಕೀ ತಾಯಿಯ ಬಳಿ ಇರುತ್ತದೆ. ಡಿ.13ರಂದು ನನ್ನ ತಂಗಿಗೆ ಪ್ರೆಗ್ನೆನ್ಸಿ ಸ್ಕ್ಯಾನಿಂಗ್ ಮಾಡಿಸುವರೇ ನಾನು ಮತ್ತು ತಾಯಿ ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ತಂಗಿಯನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ. ತಂಗಿಯ ಆರೈಕೆಯಲ್ಲಿ ತಾಯಿಯೂ ಆಸ್ಪತ್ರೆಯಲ್ಲಿರುತ್ತಾರೆ. ಆ ದಿನ ತಾಯಿಯವರು ತಂದೆಯ ಮಲಗುವ ಕೋಣೆಯ ರೂಮಿನ ಬಾಗಿಲಿನ ಕೀಯನ್ನು ಕೊಟ್ಟು ರೂಮಿನ ಕಪಾಟಿನಲ್ಲಿದ್ದ ಹಣದಲ್ಲಿ 5 ಸಾವಿರ ತೆಗೆದುಕೊಂಡಿದ್ದು ಉಳಿದ ಹಣ ರೂಮಿನಲ್ಲಿಯೇ ಇದೆ ಎಂದು ತಿಳಿಸಿ ತಂಗಿಯ ಓಡವೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಇಡು ಎಂದು ಹೇಳಿ ಕಳುಹಿಸಿರುತ್ತಾರೆ. ನಾನು ಆಸ್ಪತ್ರೆಯಿಂದ ರಾತ್ರಿ 11.30 ಗಂಟೆಗೆ ಹೊರಟು ಮನೆಗೆ ಬಂದಾಗ ಮನೆಯಲ್ಲಿ ತಮ್ಮಂದಿರು, ದೊಡ್ಡಪ್ಪ ಸಿದ್ದಿಕ್ ಮತ್ತು ಸಂಬಂಧಿಕರಾದ ಮಹಮ್ಮದ್ ಝುನೈದ್ ಇದ್ದರು. ಆಸ್ಪತ್ರೆಯಲ್ಲಿ ತಾಯಿ ಕೊಟ್ಟ ಒಡವೆಗಳನ್ನು ತನ್ನ ರೂಮಿನಲ್ಲಿ ಇರಿಸಿ ಬಳಿಕ ಮಲಗಿರುತ್ತೇನೆ. ರಾತ್ರಿ 2.30 ಗಂಟೆಯವರೆಗೆ ಮನೆಯಲ್ಲಿದ್ದ ತಮ್ಮಂದಿರು, ದೊಡ್ಡಪ್ಪ ಹಾಗೂ ಮಹಮ್ಮದ್ ಝುನೈದ್ ಮೊಬೈಲ್‌ನಲ್ಲಿ ಫುಟ್ಬಾಲ್ ಮ್ಯಾಚ್ ನೋಡಿಕೊಂಡಿರುತ್ತಾರೆ. ಬೆಳಗ್ಗೆ 5.30 ಗಂಟೆಗೆ ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಹಾಗೂ ತಂದೆಯವರು ಮಲಗುವ ಕೋಣೆಯ ಬಾಗಿಲು ತೆರೆದಿರುತ್ತದೆ. ಅಲ್ಲದೇ ಸದ್ರಿ ರೂಮಿನ ಕಪಾಟಿನಲ್ಲಿದ್ದ 2 ಲಕ್ಷ ಹಣವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 454.457.380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.