ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ಅಸಮಾಧಾನ- ವರ್ತಕ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

0

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಗತಿ ಸಾಧಿಸದೆ ಇರುವುದು ಕಳವಳಕಾರಿ ವಿದ್ಯಾಮಾನಗಳಾಗಿದ್ದು, ನಾಗರಿಕ ವಲಯದಲ್ಲಿ ಮೂಡಿರುವ ಇಲಾಖೆಯ ಮೇಲಿನ ಅವಿಶ್ವಾಸದ ಬಗ್ಗೆ ಸಮಾಜಕ್ಕೆ ಉತ್ತರದಾಯಿತ್ವ ತೋರಬೇಕೆಂದು ಪುತ್ತೂರು ಡಿವೈಎಸ್ಪಿಯವರನ್ನು ಉಪ್ಪಿನಂಗಡಿ ಛೇಂಬರ್ ಆಫ್ ಕಾಮರ್ಸ್ ಅಗ್ರಹಿಸಿದ ಬಗ್ಗೆ ವರದಿಯಾಗಿದೆ.


ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದಿದ್ದ ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್‌ರವರನ್ನು ಭೇಟಿ ಮಾಡಿದ ಉಪ್ಪಿನಂಗಡಿಯ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಶಾಂತ ಡಿಕೋಸ್ತ ಅವರ ನೇತೃತ್ವದ ನಿಯೋಗವು, ಅವರಗೆ ಮನವಿ ಸಲ್ಲಿಸಿ ಉಪ್ಪಿನಂಗಡಿ ಪರಿಸರದಲ್ಲಿ ಘಟಿಸಿದ ಹಲವು ಕಳ್ಳತನ ಪ್ರಕರಣಗಳಲ್ಲಿ ಹಾಗೂ ವಂಚನಾ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಇಲಾಖೆ ಯಾವುದೇ ಪ್ರಗತಿ ಸಾಧಿಸದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಪರಾಧ ಕೃತ್ಯಗಳ ಪತ್ತೆ ಕಾರ್ಯಕ್ಕೆ ನೆರವಾಗಲೆಂದು ವರ್ತಕ ಸಂಘದ ಮುಂದಾಳತ್ವದಲ್ಲಿ ಹಲವು ಸಿಸಿ ಕ್ಯಾಮರಾಗಳನ್ನು ತಮ್ಮ ಇಲಾಖೆಗೆ ಕೊಡುಗೆಯಾಗಿ ನೀಡಿದ್ದರೂ, ಕಳ್ಳತನದಂತಹ ಕೃತ್ಯಗಳು ನಡೆದಾಗ ಸಿಸಿ ಕ್ಯಾಮರಾಗಳು ನಿಷ್ಕ್ರಿಯತೆಗೆ ಒಳಗಾಗುತ್ತಿರುವುದು ವಿಸ್ಮಯಕಾರಿ ವಿದ್ಯಾಮಾನವೆನಿಸಿದೆ.

ಉಪ್ಪಿನಂಗಡಿಯ ರಥಬೀದಿಯಲ್ಲಿ ವಂಚನಾ ನಡೆಯಲ್ಲಿ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನಾಭರಣವನ್ನು ಕಬಳಿಸಿದ ಕೃತ್ಯ ನಡೆದು ತಿಂಗಳು ಕಳೆದರೂ ಬೈಕಿನಲ್ಲಿ ಬಂದ ವಂಚಕರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಅಸಾಧ್ಯವಾಗಿದೆ. ಪೊಲೀಸ್ ಠಾಣೆಯ ಮುಂಭಾಗದಲ್ಲೇ ಅಂಗಡಿಯೊಂದರಲ್ಲಿ ಕಳವು ಸೇರಿದಂತೆ ಉಪ್ಪಿನಂಗಡಿಯ 5 ಕಡೆಗಳಲ್ಲಿ ಕಳ್ಳತನ ಹಾಗೂ ಕಳ್ಳತನ ಯತ್ನ ನಡೆದು ತಿಂಗಳು ಕಳೆದರೂ ಪೊಲೀಸರಿಂದ ಯಾವುದೇ ಪತ್ತೆ ಕಾರ್ಯ ನಡೆದಿರುವುದಿಲ್ಲ. ಕೆಲ ಸಮಯದ ಹಿಂದೆ ದೀಪಾವಳಿಯ ಕಾರಣಕ್ಕೆ ತರಿಸಲಾದ ಸಾವಿರಾರು ರೂಪಾಯಿ ಬೆಲೆಯ ಹೂವಿನ ಕಟ್ಟನ್ನು ಕಳ್ಳರು ಕದ್ದೊಯ್ದಿದ್ದರೂ ಕಳ್ಳತನದ ಪ್ರಕರಣವನ್ನು ಭೇದಿಸಲು ಪೊಲೀಸರು ಯಾವುದೇ ಪ್ರಯತ್ನವನ್ನು ಮಾಡದಿರುವುದು ತೀವ್ರ ಕಳವಳವನ್ನು ಮೂಡಿಸಿದೆ. ಮಾತ್ರವಲ್ಲದೆ ಹೂವಿನ ವರ್ತಕರು ನೀಡಿದ ದೂರನ್ನೂ ದಾಖಲಿಸಿಕೊಳ್ಳದೇ , ರಸ್ತೆ ಬದಿ ಬಸ್ಸಿನಿಂದ ಇಳಿಸಿ ಹೋದ ಹೂವನ್ನು ಕಾವಲು ಕಾಯಲು ಪೊಲೀಸರಿಂದ ಸಾಧ್ಯವೇ? ಎಂದು ಉಡಾಫೆಯಿಂದ ವರ್ತಿಸಿದ ಇಲಾಖಾಧಿಕಾರಿಗಳ ನಡೆ ನೋವು ಮೂಡಿಸಿದೆ. ಕಳ್ಳತನಕ್ಕೆ ಒಳಗಾದ ಹೂವಿನ ವರ್ತಕ ಕಳವುಗೀಡಾದ ಹೂವು ನನಗೆ ಬೇಡ. ಆದರೆ ಕಳವು ನಡೆಸಿದ ಕಳ್ಳನನ್ನು ಪತ್ತೆ ಹಚ್ಚಿ ಎಂದು ವಿನಂತಿಸಿದಾಗ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅನಾರೋಗ್ಯಕರವಾಗಿತ್ತು. ರಥಬೀದಿಯಲ್ಲಿನ ಮಹಿಳೆಯನ್ನು ವಂಚಿಸಿದ ಪ್ರಕರಣದಲ್ಲೂ ಮಹಿಳೆಯಿಂದ ದೂರು ಸ್ವೀಕರಿಸದೆ ಇದ್ದು ಬಳಿಕ ಹಲವು ದಿನಗಳ ಬಳಿಕ ನೀಡಲಾದ ದೂರನ್ನು ಎನ್‌ಸಿಆರ್ ನೆಲೆಯಲ್ಲಿ ಸ್ವೀಕರಿಸಿ ವಂಚನೆ ಪ್ರಕರಣವನ್ನು ಇಲಾಖಾ ಅಧಿಕೃತ ಪಟ್ಟಿಯಿಂದ ಹೊರಗಿರಿಸುವ ನಡೆ ಪೊಲೀಸರಿಂದ ವ್ಯಕ್ತವಾಗಿರುವುದು ಖಂಡಿತವಾಗಿಯೂ ಪೊಲೀಸ್ ಇಲಾಖೆಗೆ ಶೋಭೆಯಲ್ಲ. 2022 ರ ಮಾರ್ಚ್ 20 ರಂದು ಹಿಂದೂ ವರ್ತಕ ಸಂಘದ ಹೆಸರಿನಲ್ಲಿ ವಾಟ್ಸಪ್ ಸಂದೇಶ ಹರಿದಾಡಿಸಿ ಸಮಾಜದಲ್ಲಿ ಮತೀಯ ಸಂಘರ್ಷವನ್ನು ಮೂಡಿಸಲು ಯತ್ನಿಸಿದ ಪ್ರಕರಣದಲ್ಲೂ ಆರೋಪಿಯನ್ನು ಪತ್ತೆ ಹಚ್ಚಲು ನಮ್ಮ ಸಂಘಟನೆ ಖುದ್ದು ಮನವಿ ಸಲ್ಲಿಸಿದ್ದರೂ ಈವರೆಗೆ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಅಸಾಧ್ಯವಾಗಿರುವುದು ಕಳವಳಕಾರಿ ಎನಿಸಿದೆ. ಮಾತ್ರವಲ್ಲದೆ ಉಪ್ಪಿನಂಗಡಿಯಲ್ಲಿ ಮಾದಕ ದ್ರವ್ಯಗಳ ಮಾರಾಟ, ಬಳಕೆ, ಸಾಗಾಟ ನಿತ್ಯ ನಿರಂತರವಾಗಿ ನಡೆಯುತ್ತಿದ್ದರೂ ಮೂಲವನ್ನು ಭೇದಿಸಲು ಪೊಲೀಸ್ ಇಲಾಖೆ ಅಸಮರ್ಥವಾಗಿರುವುದು ಕೂಡಾ ವರ್ತಕ ಸಮೂಹವನ್ನು ಹಾಗೂ ನಾಗರಿಕ ಸಮೂಹವನ್ನು ಆತಂಕಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪೊಲೀಸ್ ಇಲಾಖಾ ನಿಷ್ಕ್ರಿಯತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಮುಂದಿನ ಹದಿನೈದು ದಿನಗಳ ಒಳಗಾಗಿ ಕಳವು ಪ್ರಕರಣ ಹಾಗೂ ವಂಚನಾ ಪ್ರಕರಣಗಳನ್ನು ಭೇದಿಸಲು ವಿಫಲವಾದರೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾದೀತೆಂದು ನಿಯೋಗದಲ್ಲಿದ್ದವರು ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಯೂನಿಕ್ , ಕೈಲಾರ್ ರಾಜಗೋಪಾಲ್ ಭಟ್, ಯು.ಟಿ. ತೌಶಿಫ್ , ಶಬೀರ್ ಕೆಂಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here