ಗ್ರಾಮೀಣ ಭಾಗದವರೂ ರಾಜಧಾನಿಯನ್ನು ಸುಲಭವಾಗಿ ತಲುಪಬೇಕು-ಮಠಂದೂರು
ಬೆಟ್ಟಂಪಾಡಿ: ಗಡಿಪ್ರದೇಶವಾದ ಪಾಣಾಜೆ ಪರಿಸರದ ಹಲವು ಮಂದಿಯ ಬೇಡಿಕೆಗೆ ಮನ್ನಣೆ ದೊರೆತಿದೆ. ಈ ಭಾಗದ ಅನೇಕರು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿ, ವಿದ್ಯಾರ್ಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿದ್ದಾರೆ. ಅವರ ಪ್ರಯಾಣದ ಅನುಕೂಲತೆಗಾಗಿ ಪಾಣಾಜೆಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಸೇವೆ ಆರಂಭಗೊಂಡಿದೆ. ಆರ್ಲಪದವು ಸಿಎ ಬ್ಯಾಂಕ್ ಬಳಿ ಶಾಸಕ ಸಂಜೀವ ಮಠಂದೂರುರವರು ದ. 16 ರಂದು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಪುರೋಹಿತರಾದ ಶಿವಶಂಕರ ಕಾರಂತ್ ವೈದಿಕ ವಿಧಿವಿಧಾನ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ’ಉದ್ಯೋಗ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರಿನಲ್ಲಿರುವವರು ತಮ್ಮ ಕುಟುಂಬದವರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು, ಗ್ರಾಮೀಣ ಭಾಗದವರೂ ಸುಲಭವಾಗಿ ರಾಜಧಾನಿ ತಲುಪುವಂತಾಗಲು ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಸೇವೆ ಆರಂಭಗೊಳ್ಳುತ್ತಿದೆ. ಎಲ್ಲಾ ಕಡೆ ಬಸ್ ಸಮಸ್ಯೆ ಇದೆ. ಆದರೆ ಇಲ್ಲಿ ಹೇಗಾಯಿತು ? ಎಂಬುದು ಪ್ರಶ್ನೆ.. ಆದರೆ ಗಡಿ ಪ್ರದೇಶ ಪಾಣಾಜೆ ಭಾಗದ ಪರಿಸರದವರ ಮನಸೋಇಚ್ಛೆಯಿಂದಾಗಿ ಈ ಸೇವೆ ಆರಂಭಗೊಂಡಿದೆ. ಇಲ್ಲಿಂದ ಪುತ್ತೂರಿಗೆ ಹೋಗಿ ಬೆಂಗಳೂರು ಬಸ್ ಗೆ ಕಾಯುವ ಪರಿಸ್ಥಿತಿ ಬರಬಾರದು. ಸಾರ್ವಜನಿಕರೂ ಇದನ್ನು ಬಳಸಿಕೊಂಡು ಇದೇ ಬಸ್‌ನಲ್ಲಿ ಸಂಚರಿಸಿ ನಿರಂತರ ಸೇವೆ ಇರುವ ಹಾಗೇ ನೋಡಿಕೊಳ್ಳಬೇಕಾಗಿದೆ. ರಸ್ತೆ ಸಮಸ್ಯೆಯೂ ಪರಿಹಾರಗೊಂಡಿದೆ. ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಚರ್ಚಿಸಿ 15 ದಿನಗಳೊಳಗಾಗಿ ಅದಾಲತ್ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ರೈ ಮಾತನಾಡಿ ’ಪ್ರಯಾಣಿಕರ ಸಂಖ್ಯೆ, ಆದಾಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಬಸ್ ಸಂಚಾರದ ಅವಧಿ, ದಿನ ಕೈಗೊಳ್ಳುತ್ತೇವೆ. ಸದ್ಯ ಬಸ್ ಪುತ್ತೂರಿನಿಂದ ಪಾಣಾಜೆಗೆ ಬಂದು ಬಳಿಕ ಸುಳ್ಯ ಮಡಿಕೇರಿ ಮೈಸೂರು ಮಾರ್ಗವಾಗಿ ಬೆಂಗಳೂರು ಕೆಬಿಎಸ್ ತಲುಪಲಿದೆ. ಬರುವಾಗ ಸ್ಯಾಟಲೈಟ್ ನಿಂದ ಹೊರಟು ಬರಲಿದೆ’ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಸ್ವಾಗತಿಸಿ ಪ್ರಸ್ತಾಪಿಸಿ, ಸುರೇಶ್ ಭಟ್ ಸ್ವರ್ಗ ಹಾಗೂ ವಕೀಲರಾದ ರಾಜಾರಾಮ ಭಟ್ ಸೂರಂಬೈಲುರವರ ವಿಶೇಷ ಕಾಳಜಿ ಪರಿಶ್ರಮದ ಫಲವಾಗಿ ಶಾಸಕ ಸಂಜೀವ ಮಠಂದೂರುರವರು ಪಾಣಾಜೆಯ ಜನರ ಬೇಡಿಕೆಗೆ ಸ್ಪಂದಿಸಿ ಬಸ್ ಸೇವೆ ಕಲ್ಪಿಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ ವಂದಿಸಿದರು. ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಭಟ್, ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಸದಸ್ಯರಾದ ಸುಭಾಸ್ ರೈ, ಕೃಷ್ಣಪ್ಪ ಪೂಜಾರಿ, ವಿಮಲ, ಮೈಮೂನತ್ತುಲ್ ಮೆಹ್ರಾ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ನಿರ್ದೇಶಕರು, ಕೆಎಂಎಫ್ ನಿರ್ದೇಶಕರುಗಳು, ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಸದಾಶಿವ ರೈ ಸೂರಂಬೈಲು, ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಸೇರಿದಂತೆ ನೂರಾರು ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.
ಪಾಣಾಜೆಯಿಂದ 9 ಗಂಟೆಗೆ ಹೊರಡಲಿದೆ
ಸಾಂಕೇತಿಕವಾಗಿ ಸ್ಲೀಪರ್ ಕೋಚ್ ಬಸ್ ಪುತ್ತೂರಿನಿಂದ ರಾತ್ರಿ 8.20 ಗಂಟೆಗೆ ಬಿಟ್ಟು ಪಾಣಾಜೆಗೆ 9.೦೦ ಗಂಟೆಗೆ ಬಂದು ಹೊರಡಲಿದೆ. ಸುಳ್ಯ ಮಾರ್ಗವಾಗಿ ಮಡಿಕೇರಿ ಮೈಸೂರು ಮಾರ್ಗವಾಗಿ ಹೋಗಲಿದೆ. ಮುಂದಿನ ದಿನಗಳಲ್ಲಿ ಜನರ ಸ್ಪಂದನೆ ದೊರೆತಲ್ಲಿ ಹಾಸನ ಮಾರ್ಗವಾಗಿಯೂ ಸಂಚರಿಸುವ ಕ್ರಮ ಕೈಗೊಳ್ಳುತ್ತೇವೆ. ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಯಕರ ರೈ ಹೇಳಿದರು.