ಪುತ್ತೂರು: ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರುವ ಬ್ಯಾನರ್ ಅಳವಡಿಸುವ ಮೂಲಕ ಮುಸ್ಲಿಂ ಬಾಂಧವರು ಸೌಹಾರ್ದತೆ ಸಾರಿದ್ದಾರೆ.
ದ.20ರಿಂದ 25ರವರೆಗೆ ನಡೆಯಲಿರುವ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ಶುಭ ಹಾರೈಸಿ ಬ್ಯಾನರ್ ಅಳವಡಿಸಿರುವ ಮುಸ್ಲಿಂ ಬಾಂಧವರು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಈ ಹಿಂದೆ ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸುವ ಮೂಲಕ ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದರು. ಆ ಬಳಿಕ ಕೋಡಿಂಬಾಡಿ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನೆಗೊಂಡಾಗ ಹಲವು ಹಿಂದೂ ಬಾಂಧವರು ಭಾಗವಹಿಸಿದ್ದರು. ಸಹೋದರತೆ, ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿರುವ ಶಾಂತಿನಗರದಲ್ಲಿ ಇದೀಗ ಮುಸ್ಲಿಂ ಬಾಂಧವರು ಬ್ರಹ್ಮಕಲಶೋತ್ಸವಕ್ಕೆ ಬ್ಯಾನರ್ ಅಳವಡಿಸುವ ಮೂಲಕ ಶುಭಕೋರಿದ್ದಾರೆ.