ಪುತ್ತೂರು: ಪುತ್ತೂರು ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಾಂಕ್ರೀಟ್ ಮಿಕ್ಸಿಂಗ್ ಹೊತ್ತು ಬಂದ ಮಿಲ್ಲರ್ ಲಾರಿಯು ರಸ್ತೆ ಬದಿ ಕುಸಿದು ಪಲ್ಟಿಯಾದ ಘಟನೆ ಡಿ.೨೧ರಂದು ಬೆಳಿಗ್ಗೆ ನಡೆದಿದೆ.
ಪುತ್ತೂರು ಕಡೆಯಿಂದ ಬಂದ ಮಿಲ್ಲರ್ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ತಡೆಗೋಡೆಗೆ ಕಾಂಕ್ರೀಟ್ ತುಂಬಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿ ಕುಸಿದು ಲಾರಿಯು ಸುಮಾರು 20 ಅಡಿ ಆಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಕೆಳ ಭಾಗದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು ಈ ವೇಳೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಚಾಲಕ ಲಾರಿಯ ಒಳಗಡೆಯೇ ಇದ್ದರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಟ್ಟಂಪಾಡಿ ಪಂಚಾಯತ್ ವ್ಯಾಪ್ತಿಯ ಚೆಲ್ಯಡ್ಕ ಅಪಾಯಕಾರಿ ತಿರುವುನಲ್ಲಿ ರೂ.೩ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಕಾಮಗಾರಿ ಪ್ರಾರಂಭವಾಗಿ ಸುಮಾರು ಒಂದು ವರ್ಷ ಕಳೆದರೂ ಇನ್ನೂ ಕುಂಟುತ್ತಾ ಸಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ನಡೆಸುವ ಕಾಮಗಾರಿಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ಬದಿಯ ಧರೆಯು ರಸ್ತೆಯ ಅಂಚಿನ ತನಕ ಕುಸಿದು ಬಿದ್ದಿದೆ. ಸದರಿ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು ಇನ್ನಷ್ಟು ಅಪಘಾತಗಳಿಗೆ ಆಹ್ವಾನಿಸುವಂತಿದೆ. ಇದರ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ನಿರ್ಮಿಸಿಕೊಟ್ಟು ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಯಾವುದೇ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಂಜಿನಿಯರ್ ಉಪಸ್ಥಿತಿಯಿರಬೇಕು. ಇಲ್ಲಿ ಇಂಜಿನಿಯರ್ ಇಲ್ಲದೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ವೈಜ್ಞಾನಿಕ ಹಾಗೂ ತಾಂತ್ರಿಕ ತರಬೇತಿಯಿಲ್ಲದವರ ಮೂಲಕ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಳು ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಸ್ಥಳದಲ್ಲಿ ಅಧಿಕಾರಿಗಳು ಇಲ್ಲದೇ ಇದ್ದು ಅಲ್ಲಿ ಕಳಪೆಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳ ನಿರ್ಲಕ್ಷದಿಂದ ಈ ಘಟನೆ ನಡೆಯುತ್ತಿದೆ. ಸರಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದೇ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿದೆ.
-ನವೀನ್ ರೈ ಚೆಲ್ಯಡ್ಕ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ