ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ತಾ.ಪಂ.,ನಗರಸಭೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ.7, 8ರಂದು ಕಿಲ್ಲೆ ಮೈದಾನದಲ್ಲಿ ಸಸ್ಯಜಾತ್ರೆ ; ಯಶಸ್ಸುಗೊಳಿಸಲು ಪೂರ್ವಭಾವಿ ಸಭೆ

0

ಮುಖಂಡರಿಂದ ಸಂಪೂರ್ಣ ಸಹಕಾರದ ಭರವಸೆ

ಪುತ್ತೂರು:ಸುದ್ದಿ ಮಾಹಿತಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ತಾಲೂಕು ಪಂಚಾಯತ್., ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ.7 ಹಾಗೂ 8ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಸಸ್ಯ ಜಾತ್ರೆಯ ಪೂರ್ವಭಾವಿ ಸಭೆಯು ಡಿ.20ರಂದು ಸಂಜೆ ಇಲ್ಲಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪ್ರಗತಿಪರ ಕೃಷಿಕರು, ವರ್ತಕರು, ಸಹಕಾರಿ ಸಂಘಗಳ ಅಧ್ಯಕ್ಷರು, ಶಿಕ್ಷಣ ಸಂಸ್ಥೆಗಳ ಪ್ರಮುಖರು ಭಾಗವಹಿಸಿ ಕೃಷಿಯ ಅಭಿವೃದ್ಧಿ, ಮೌಲ್ಯವರ್ಧನೆಗಾಗಿ ಸುದ್ದಿಯ ಮೂಲಕ ನಡೆಯುವ ಸಸ್ಯ ಜಾತ್ರೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸುರೇಶ್ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷರಾದ ಯು.ಲೋಕೇಶ್ ಹೆಗ್ಡೆ, ಪ್ರೇಮಲತಾ ರಾವ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪೂಡಾದ ಸದಸ್ಯ ಪಿ.ವಾಮನ ಪೈ, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಸುಹಾಸ್ ಮರಿಕೆ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಪೂರ್ಣಿಮಾ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ನಿತಿನ್ ರೈ ಕುಕ್ಕುವಳ್ಳಿ, ನ್ಯಾಯವಾದಿಗಳಾದ ಹರಿಣಾಕ್ಷಿ ಜೆ.ಶೆಟ್ಟಿ, ಅಶ್ವಿನಿ ಕೆ, ಅರವಿಂದ ಭಂಡಾರಿ, ಹೀರಾ ಉದಯ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಜಿಲ್ಲಾಧ್ಯಕ್ಷೆ ನಯನಾ ರೈ, ಪ್ರಗತಿಪರ ಕೃಷಿಕೆ ಪ್ರ-ಲ್ಲಾ ರೈ, ರೋಟರಿ ಕ್ಲಬ್‌ನ ಭರತ್ ಪೈ, ಶ್ರೀಮತಿ ಶೋಭಾಶಿವಾನಂದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ ಸ್ವಾಗತಿಸಿದರು, ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯೇ ಉದ್ದೇಶ

ಸಸ್ಯಜಾತ್ರೆಯ ಮೂಲಕ ಕೃಷಿಯ ಮಾಹಿತಿ ಸಂಗ್ರಹಣೆಯನ್ನು ಪ್ರಾರಂಭಿಸಲಾಗುವುದು. ಪ್ರತಿ ಮನೆಯಲ್ಲಿಯೂ ಆರೋಗ್ಯ ಪೂರ್ಣ ವಾತಾವರಣ ಪೂರಕವಾಗಿಡುವುದು, ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದು, ಕೃಷಿ ತರಬೇತಿ ನೀಡುವುದು ಸಸ್ಯಜಾತ್ರೆ ಉದ್ದೇಶವಾಗಿದೆ. ಅಡಿಕೆ ಸಮಸ್ಯೆ, ಪರಿಹಾರ, ಅಡಿಕೆಗೆ ಪರ್ಯಾಯ ಬೆಳೆ, ತಾರಸಿ ಕೃಷಿ, ಜೇನುಕೃಷಿ, ಕೃಷಿ ಮೌಲ್ಯವರ್ಧನೆಯ ವಿಚಾರಗೋಷ್ಟಿ ನಡೆಯಲಿದೆ. ಸಸ್ಯಜಾತ್ರೆಯಲ್ಲಿ ಮೆರವಣಿಗೆ, ಉದ್ಘಾಟನೆ, ಫುಡ್‌ಕೋರ್ಟ್, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಲಿದೆ.ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿಕರ ಮೌಲ್ಯವರ್ಧನೆಯಾಗಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ.ಇದಕ್ಕಾಗಿ ಪತ್ರಿಕೆ ಹಾಗೂ ಚಾನೆಲ್‌ನಲ್ಲಿ ವಿಶೇಷ ಅಂಕಣಗಳಿಗೆ ಅವಕಾಶ ನೀಡಲಾಗುವುದು. ಸುದ್ದಿಯ ಮೂಲಕ ಕೃಷಿಗೆ ಪೂರಕವಾದ ಎಲ್ಲಾ ರೀತಿಯ ಸಲಹೆ, ತರಬೇತಿ, ಉತ್ತಮ ಸೇವೆ ನೀಡಲಾಗುವುದು.ಅದಕ್ಕಾಗಿ ಕೃಷಿ ಮಾಹಿತಿ ಸೇವಾ ಕೇಂದ್ರ ಪ್ರಾರಂಭಿಸಿ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.ಸಸ್ಯಜಾತ್ರೆಯ ವಿಚಾರಗೋಷ್ಠಿಯಲ್ಲಿ ಎಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಸಹಕಾರ ಸಂಘಗಳಿಂದ ಕನಿಷ್ಟ ಎರಡು ಜನರಾದರೂ ಭಾಗವಹಿಸಿ ಕೃಷಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಮೇಳದಲ್ಲಿ ಕೃಷಿ ಸಾಧಕರನ್ನು ಗುರುತಿಸುವ ಮೂಲಕ ಗೌರವ ದೊರೆಯುವಂತೆ ಮಾಡಲಾಗುವುದು. ಕೃಷಿಕರು ಸಾಧಕರಾಗಿ ಬರಬೇಕು, ಮಹಿಳೆಯರು ಮತ್ತು ವಿದ್ಯಾರ್ಥಿಗಳೂ ಅಧಿಕ ಸಂಖ್ಯೆಯಲ್ಲಿ ಸಸ್ಯಜಾತ್ರೆಯಲ್ಲಿ ಭಾಗವಹಿಸುವಂತೆ ಡಾ.ಯು.ಪಿ.ಶಿವಾನಂದರು ಕರೆ ನೀಡಿದರು.

ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ನಾವೂ ಲಾಭ ಪಡೆಯೋಣ-ರೆ|ವಿಜಯ ಹಾರ್ವಿನ್:

ಸುದಾನ ಶಿಕ್ಷಣ ಸಂಸ್ಥೆ ಸಂಚಾಲಕ ರೆ|ವಿಜಯ ಹಾರ್ವಿನ್ ಮಾತನಾಡಿ,ಡಾ.ಶಿವಾನಂದರು ಹೊಸ ಹೊಸ ವಿಚಾರಗಳನ್ನು ಆಲೋಚನೆ ಮಾಡಿ ಅದರ ಅನುಷ್ಠಾನಕ್ಕಾಗಿ ಹೋರಾಡುವವರು.ಸುಳ್ಯದಲ್ಲಿ ಕುಡಿಯುವ ಶುದ್ದ ನೀರಿಗಾಗಿ ಅವರ ನೇತೃತ್ವದಲ್ಲಿ ನಡೆದ ಹೋರಾಟ ಯಶಸ್ವಿಯಾಗಿದೆ.ಪ್ರಸ್ತುತ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆದಿದೆ. ಅವರು ಒಂಟಿ ಸಲಗದಂತೆ ಕೆಲಸ ಮಾಡಿದವರು. ವಿಜ್ಞಾನ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಅದನ್ನು ಬಳಸಿಕೊಳ್ಳುವುದರಲ್ಲಿ ನಾವು ಹಿಂದಿದ್ದೇವೆ. ಮುಂದುವರಿದ ದೇಶಗಳಲ್ಲಿ ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯಲ್ಲಿ ಅಧಿಕ ಲಾಭ ಪಡೆಯುವಂತೆ ನಾವೂ ಬಳಸಿಕೊಂಡು ಅಧಿಕ ಲಾಭ ಪಡೆಯಬೇಕು.ಹೈನುಗಾರಿಕೆ, ಜೇನು ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಅಧಿಕ ಲಾಭ ಪಡೆಯಬೇಕು. ಸಸ್ಯ ಜಾತ್ರೆಯ ಮೂಲಕ ಕೃಷಿಗೆ ಪೂರಕವಾದ ಎಲ್ಲಾ ರೀತಿಯ ಮಾಹಿತಿ, ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಅವಕಾಶವಿದೆ.ಈ ಸಸ್ಯಜಾತ್ರೆ ಯಶಸ್ವಿಯಾಗಲಿ.ಮುಂದೆ ಮೇ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಸಮ್ಮೇಳನ ನಡೆಸಲಾಗುವುದು ಎಂದರು. ಸಸ್ಯಜಾತ್ರೆ ಕಾರ್ಯಕ್ರಮಕ್ಕೆ ಸುದಾನ ಶಿಕ್ಷಣ ಸಂಸ್ಥೆಯಿಂದ ಮಕ್ಕಳನ್ನೂ ಕಳುಹಿಸಿಕೊಡುವುದಾಗಿ ಹೇಳಿದ ಅವರು ಚರ್ಚ್ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಈ ಕುರಿತು ವಿಷಯ ತಿಳಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಕೃಷಿಪೂರಕ ಮಾಹಿತಿ,ಸೌಕರ್ಯ ಒಂದೇ ಕಡೆ ದೊರೆಯಲು ಪೂರಕ-ಡಾ.ಪಿ.ಕೆ.ಎಸ್.ಭಟ್:

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಡಾ.ಪಿ.ಕೆ.ಎಸ್ ಭಟ್ ಮಾತನಾಡಿ, ಕೃಷಿಕರಿಗಾಗಿ ಸರಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದರೂ ಅದು ಎಲ್ಲಿಗೆ ಹೋಗುತ್ತಿದೆ ಗೊತ್ತಾಗುತ್ತಿಲ್ಲ. ಸವಲತ್ತುಗಳಿದ್ದರೂ ಎಲ್ಲ ರೈತರಿಗೆ ದೊರೆಯುತ್ತಿಲ್ಲ. ರೈತರಿಗೆ ಕೃಷಿಗೆ ಪೂರಕವಾದ ಎಲ್ಲಾ ಮಾಹಿತಿಗಳು, ಸೌಕರ್ಯಗಳು ಒಂದೇ ಕಡೆ ದೊರೆಯಲು ಸಸ್ಯಜಾತ್ರೆ ಮೇಳ ಸಹಕಾರಿಯಾಗಲಿದೆ. ನಿಮ್ಮ ಜೊತೆ ನಾವಿದ್ದೇವೆ ಎಂದರಲ್ಲದೆ, ಡಾ.ಶಿವಾನಂದರವರಿಗೆ ಅದ್ಭುತ ಶಕ್ತಿಯಿದೆ. ಅವರು ಅದನ್ನು ಸಾಧಿಸುತ್ತಾರೆ. ರೈತರಿಗಾಗಿ ಅವರು ಈ ಸಸ್ಯಜಾತ್ರೆ ಪ್ರಾರಂಭಿಸಿದ್ದು ನಾವೆಲ್ಲರೂ ಸೇರಿ ಇದನ್ನು ಯಶಸ್ಸುಗೊಳಿಸಬೇಕು ಎಂದರು.

ರೈತರಿಗೆ ಪೂರಕವಾದ ದೊಡ್ಡ ಕನಸು-ಜಯಂತ ನಡುಬೈಲು:

ಉದ್ಯಮಿ, ಅಕ್ಷಯ ಕಾಲೇಜಿನ ಚೆಯರ್‌ಮೆನ್ ಜಯಂತ ನಡುಬೈಲು ಮಾತನಾಡಿ, ಡಾ.ಯು.ಪಿ.ಶಿವಾನಂದರವರು ರೈತರಿಗೆ ಪೂರಕವಾದ ದೊಡ್ಡ ಕನಸು ಹೊತ್ತಿದ್ದಾರೆ. ಅದು ಪುತ್ತೂರಿಗೆ ಅಗತ್ಯವಾಗಿದೆ. ಕೃಷಿಯಲ್ಲಿ ಕಲಿತುಕೊಳ್ಳಲು ಸಾಕಷ್ಟಿದೆ. ಯಾವ ಕೃಷಿಗೆ ಒತ್ತು ಕೊಡಬೇಕು ಎಂಬುದನ್ನು ತಿಳಿಯಲು ಮೇಳವು ಸಹಕಾರಿಯಾಗಲಿದೆ. ನಮ್ಮ ಊರಿನ ಹವಾಮಾನಕ್ಕೆ ಪೂರಕವಾದ ಕೃಷಿ ಮಾಹಿತಿ ಮೇಳದಲ್ಲಿ ದೊರೆಯಬೇಕು. ಜೀವನಕ್ಕೆ ಪೂರಕವಾದ ಮಾಹಿತಿ ದೊರೆಯಬೇಕು. ಕೊರೋನಾದ ಬಳಿಕ ಕೃಷಿಯ ಅವಶ್ಯಕತೆ ಅರಿವಾಗಿ ಕೃಷಿಕ್ಷೇತ್ರದಲ್ಲಿ ಪ್ರಗತಿಯಾಗಿದೆ ಎಂದರು. ಎರಡು ದಿನ ನಡೆಯಲಿರುವ ಸಸ್ಯ ಜಾತ್ರೆಯಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಕಳುಹಿಸಿಕೊಡಲಾಗುವುದು ಮಾತ್ರವಲ್ಲದೆ ಮೇಳದಲ್ಲಿ ಒಂದೆರಡು ಸ್ಟಾಲ್‌ಗಳನ್ನೂ ಹಾಕಲಾಗುವುದು ಜೊತೆಗೆ ಮೇಳದ ಯಶಸ್ಸಿಗೆ ಬೇಕಾದ ನೆರವು ನೀಡಲಾಗುವುದು ಎಂದರು.

ತಾರಸಿಕೃಷಿಯಿಂದ ಮಾಸಿಕ 20 ಸಾವಿರ ರೂ.ಗಳಿಕೆ-ಬ್ಲ್ಯಾನಿ ಡಿಸೋಜ:

ಪ್ರಗತಿಪರ ತಾರಸಿ ಕೃಷಿಕ ಮಂಗಳೂರು ಬ್ಲ್ಯಾನಿ ಡಿಸೋಜ ಮಾತನಾಡಿ, ಅಲ್ಪ ಸ್ವಲ್ಪ ಜಾಗವಿದ್ದವರಿಗೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತಾರಸಿ ಕೃಷಿ ಉತ್ತಮ ವಿಧಾನ.ತಾರಸಿ ಕೃಷಿ ಮೂಲಕ ನಾನು ಪ್ರತಿ ತಿಂಗಳು 20,000 ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಇನ್ನೂರಕ್ಕಿಂತ ಹೆಚ್ಚಿನ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಹಸಿರು ನಗರ ನಿರ್ಮಿಸುವುದೇ ನಮ್ಮ ಉದ್ದೇಶ. ತಾರಸಿಕೃಷಿಯ ಬಗ್ಗೆ ಬಂದು ಮಾಹಿತಿ ನೀಡಲು ನಾನು ಸಿದ್ಧನಿದ್ದೇನೆ.ಎಲ್ಲರೂ ಸೇರಿ ಈ ಮೇಳವನ್ನು ಯಶಸ್ವಿಗೊಳಿಸೋಣ ಎಂದರು.

ನ್ಯೂಟ್ರಿಷಿಯನ್ ಆಹಾರದ ಗಿಡಬೆಳೆಸುವ ವಿಚಾರವೂ ಇರಲಿ-ವಿಶ್ವಪ್ರಸಾದ್ ಸೇಡಿಯಾಪು:

ಉದ್ಯಮಿ, ಪ್ರಗತಿಪರ ಕೃಷಿಕರೂ ಆಗಿರುವ ವಿಶ್ವಪ್ರಸಾದ್ ಸೇಡಿಯಾಪು ಮಾತನಾಡಿ, ಸಣ್ಣ ಜಾಗವಾದರೂ ಪ್ರತಿ ಮನೆಯಲ್ಲಿ ನುಗ್ಗೆ, ಪಪ್ಪಾಯಿ, ಪೇರಲೆ ಮೊದಲಾದ ನ್ಯೂಟ್ರಿಷನ್ ಆಹಾರೋತ್ಪನ್ನಗಳ ಗಿಡ ಬೆಳೆಸಬೇಕು. ಅದು ಖರ್ಚಿಲ್ಲದೆ ಸುಲಭದಲ್ಲಿ ಬೆಳೆಯಬಹುದಾದ ಕೃಷಿಯಾಗಿದೆ. ಸಸ್ಯಜಾತ್ರೆಯ ಕಾರ್ಯಾಗಾರದಲ್ಲಿ ನ್ಯೂಟ್ರಿಷಿಯನ್ ಆಹಾರ ನೀಡುವ ಗಿಡಬೆಳೆಸುವ ವಿಚಾರವೂ ಅಳವಡಿಸಬೇಕು. ನಾವು ಕೃಷಿಯಲ್ಲಿ ಹೊಸ ಹೊಸ ಸಂಶೋಧನೆ ನಡೆಸುತ್ತಿದ್ದು ಕೃಷಿಯಲ್ಲಿ ಅಡಗಿಸಿಟ್ಟು ಮಾಡುವುದು ಏನೂ ಇಲ್ಲ. ಆರೋಗ್ಯದಾಯಕ ಕೃಷಿಗಳನ್ನು ಬಳಸಬೇಕು. ಸಸ್ಯಜಾತ್ರೆಯು ಎಲ್ಲಾ ರೀತಿಯಲ್ಲಿ ಯಶಸ್ವಿಯಾಗಲಿ ಎಂದರು.

ರೈತರಲ್ಲಿ ಒಗ್ಗಟ್ಟು ಇರಬೇಕು-ಪಂಜಿಗುಡ್ಡೆ ಈಶ್ವರ ಭಟ್;

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಕೃಷಿಕರು ಪಟ್ಟಣವನ್ನು ಅವಲಂಬಿಸಿದ್ದು ಕೃಷಿಯಲ್ಲಿ ಹಿಂದುಳಿದಿದ್ದೇವೆ. ಹಳ್ಳಿಯಲ್ಲಿ ಬಳಸುವ ಆಹಾರ ಉತ್ಪನ್ನಗಳು ಆರೋಗ್ಯದಾಯಕವಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವ ಕೆಲಸವೂ ಅಗತ್ಯವಾಗಿದೆ. ಉತ್ತಮ ಇಳುವರಿ ನೀಡುವ ಗುಣಮಟ್ಟದ ಅಡಿಕೆ ಬೀಜಗಳ ಸಸಿಗಳನ್ನು ಬೆಳೆಸಬೇಕು. ಅಡಿಕೆ ಕೃಷಿಗೆ ಬಾಧಿಸುವ ರೋಗಗಳಿಗೆ ಸಮರ್ಪಕವಾದ ಔಷಧಿಗಳ ಕುರಿತು ಮೇಳದಲ್ಲಿ ಮಾಹಿತಿ, ಸಹಕಾರಿ ಸಂಘ, ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನೂ ನೀಡಬೇಕು ಎಂದರು. ವ್ಯಾಪಾರದಲ್ಲಿ ಕೃಷಿಕರನ್ನು ಸೋಲಿಸುವವರೇ ಅಧಿಕ. ಹೀಗಾಗಿ ರೈತರಲ್ಲಿ ಒಗ್ಗಟ್ಟು ಇರಬೇಕು.ಸಬ್ಸಿಡಿ ಪ್ರಯೋಜನ ರೈತರು ಪಡೆಯುವಂತಾಗಬೇಕು. ಕೃಷಿಕರಿಂದ ಕೃಷಿಕರಿಗಾಗಿರುವ ಸಸ್ಯಜಾತ್ರೆಯಲ್ಲಿ ಎಲ್ಲಾ ಕೃಷಿಕರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದ ಅವರು, ಸಸ್ಯಜಾತ್ರೆಯ ಯಶಸ್ಸಿಗೆ ಸಹಕಾರ ನೀಡುವುದಾಗಿ ಹೇಳಿದರು.

ಸಂಜೀವಿನಿ ಒಕ್ಕೂಟ, ಮಹಿಳಾ ಒಕ್ಕೂಟದ ಮೂಲಕ ಪ್ರೋತ್ಸಾಹ-ಶಾಂತಿ ಟಿ.ಹೆಗಡೆ:

ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ.ಹೆಗಡೆ ಮಾತನಾಡಿ, ಸಸ್ಯಜಾತ್ರೆಯು ಉತ್ತಮ ಕಾರ್ಯಕ್ರಮ. ಇದಕ್ಕಾಗಿ ನಾವು ಕಾಯುತ್ತಿದ್ದೇವು. ವಿವಿಧ ಜಾತಿಯ ಔಷಧೀಯ ಗಿಡಗಳನ್ನು ಮನೆಯಲ್ಲಿ ಬೆಳೆಸಿದ್ದು ಕೊರೋನಾ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯಾಗಿ ಬಳಸಲಾಗಿದೆ. ಸಸ್ಯಜಾತ್ರೆಯಲ್ಲಿ ಸಂಜೀವಿನಿ ಒಕ್ಕೂಟ, ಮಹಿಳಾ ಒಕ್ಕೂಟದ ಮೂಲಕ ಪ್ರೋತ್ಸಾಹ ನೀಡಲಾಗುವುದು. ಅರ್ಥಪೂರ್ಣವಾದ ಕಾರ್ಯಕ್ರಮ ಇದಾಗಿದ್ದು ಇದರ ಯಶಸ್ಸಿಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ವಿದ್ಯಾರ್ಥಿಗಳಿಗೂ ಕೃಷಿ ವಿಚಾರದಲ್ಲಿ ಆಸಕ್ತಿ ಮೂಡಿಸಬೇಕು-ಗೋಕುಲ್‌ನಾಥ್:

ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಪಿ.ವಿ.ಮಾತನಾಡಿ, ಮುಂದಿನ ಪೀಳಿಗೆಗೂ ಕೃಷಿಯ ಬಗ್ಗೆ ಮಾಹಿತಿ ಪಡೆಯಲು, ಕೃಷಿ ವಿಚಾರದಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕು.ನಮ್ಮ ಸಂಸ್ಥೆಯಿಂದಲೂ ವಿದ್ಯಾರ್ಥಿಗಳನ್ನು ಸಸ್ಯಜಾತ್ರೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಕೃಷಿ ಪೂರಕ ಆವಿಷ್ಕಾರ ನಡೆಸಲು ಸಸ್ಯಜಾತ್ರೆ ಸಹಕಾರಿ-ಸುಂದರ ನಾಯ್ಕ್:

ಜಿ.ಪಂ.ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ್ ಮಾತನಾಡಿ, ಕೃಷಿಯ ಬಗ್ಗೆ ಪ್ರಾಯೋಗಿಕವಾಗಿ ಅಧ್ಯಯನ ನಡೆಸಬೇಕು.ಎಲ್ಲಾ ಕೃಷಿಕರನ್ನು ಸೇರಿಸಿಕೊಳ್ಳಬೇಕು.ಸಣ್ಣ ಹಿಡುವಳಿಗಳಲ್ಲಿ ಕೃಷಿಗೆ ಪೂರಕವಾದ ಆವಿಷ್ಕಾರ ನಡೆಸಲು, ಆರ್ಥಿಕ ಅಭಿವೃದ್ಧಿಗೆ ಸಸ್ಯಜಾತ್ರೆ ಸಹಕಾರಿಯಾಗಲಿದೆ.ಸಣ್ಣ ರೈತರೂ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಲು ಸಹಕಾರಿ ಎಂದರು.

ಮಕ್ಕಳಿಗೆ ವಿವಿಧ ಸ್ಪರ್ಧೆ-ಕುಕ್ಕುವಳ್ಳಿ:

ನಿವೃತ್ತ ಶಿಕ್ಷಕ, ಅಂಕಣಕಾರರೂ ಆಗಿರುವ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಸಾಮಾಜಿಕವಾದ ಆರೋಗ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿರುವ ಸುದ್ದಿ ಪತ್ರಿಕೆಯು ಸಸ್ಯಜಾತ್ರೆಯ ಮೂಲಕ ಮಕ್ಕಳಿಗೂ ಭವಿಷ್ಯ ರೂಪಿಸಲು, ಕೃಷಿಯಲ್ಲಿ ಕ್ರಿಯಾತ್ಮಕವಾಗಿ ಬಳಸಿಕೊಂಡು ಸ್ವಾವಲಂಬಿ ಬದುಕಿಗೆ ಪೂರಕವಾಗುವ ನಿಟ್ಟಿನಲ್ಲಿ ಸಸ್ಯಜಾತ್ರೆಯಲ್ಲಿ ಲೇಖನ, ಪ್ರಬಂಧ, ಚಿತ್ರಕಲೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಹಕಾರಿ ಸಂಘಗಳು ಪಾಲ್ಗೊಳ್ಳುವಂತೆ ಮಾಡಲಾಗುವುದು-ಬಾಲ್ಯೊಟ್ಟು:

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ತಾಲೂಕು ಬಂಟರ ಸಂಘದ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಇಂದು ಕೃಷಿಕರು ತಮ್ಮ ಗಂಡು ಮಕ್ಕಳಿಗೆ ಹುಡುಗಿ ಸಿಗದೆ ಮದುವೆ ಮಾಡಲು ಹರಸಾಹಸ ಪಡುವಂತಾಗಿದೆ.ಕೃಷಿ ಬಿಟ್ಟು ಹೋಗುವ ಸಂದರ್ಭದಲ್ಲಿ ಸುದ್ದಿಯ ಮೂಲಕ ಕೃಷಿಗೆ ಹೊಸ ರೂಪ ನೀಡಲು ಮುಂದಾಗಿದ್ದು ಕೃಷಿಯನ್ನು ಉದ್ಯಮವನ್ನಾಗಿ ಮಾರ್ಪಾಡು ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಸ್ಯಜಾತ್ರೆಯ ಪ್ರಯೋಜನ ಪಡೆದುಕೊಂಡು ಯಶಸ್ವಿಯಾಗುವ ಮೂಲಕ ಮುಂದಿನ ದಿನಗಳಲ್ಲಿ ರೈತರ ಮಕ್ಕಳ ಮದುವೆಗಾಗಿ ಹೆಣ್ಣು ಹುಡುಕುವ ಕೆಲಸವಾಗದೆ ಹೆಣ್ಣಿನ ಕಡೆಯವರೇ ಹುಡುಕಿಕೊಂಡು ಬರುವಂತಾಗಬೇಕು ಎಂದರು. ಸುದ್ದಿಯ ಮೂಲಕ ನಡೆಯುವ ಸಸ್ಯ ಜಾತ್ರೆಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಅವರು, ಸಹಕಾರಿ ಸಂಘಗಳೂ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದರು.

ಕೃಷಿಕನಿಗೆ ಜಾಗೃತಿ, ಮೌಲ್ಯವರ್ಧನೆ ಕಾರ್ಯಕ್ರಮದ ಉದ್ದೇಶದಲ್ಲಿರಲಿ-ಸಾಜ:

ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಕಾರ್ಮಿಕರ ಕೊರತೆಯಿಂದಾಗಿ ಕೃಷಿಗೆ ಹಿನ್ನಡೆಯಾಗಿದೆ.ಸಣ್ಣ ಜಾಗದಲ್ಲಿ ಕೃಷಿ ಮಾಡುವ ವಿಧಾನ, ದೊಡ್ಡ ಕೃಷಿಕನಿಗೆ ಜಾಗೃತಿ, ಕೃಷಿಯ ಮೌಲ್ಯವರ್ಧನೆ ಮಾಡುವ ಉದ್ದೇಶಗಳನ್ನು ಕಾರ್ಯಾಗಾರದಲ್ಲಿ ಅಳವಡಿಸಿಕೊಳ್ಳಬೇಕು.ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಸೇರಿಸಿ ಅವರಲ್ಲಿಯೂ ಜಾಗೃತಿ ಮೂಡಿಸಬೇಕು.ಸುದ್ದಿಯ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲವಿದೆ.ಸಂಜೀವಿನಿ ಒಕ್ಕೂಟದವರನ್ನೂ ತೊಡಗಿಸಿಕೊಂಡು ಯಶಸ್ಸುಗೊಳಿಸಬೇಕು.ಸುದ್ದಿ ಪತ್ರಿಕೆಯಲ್ಲಿ ಈಗಾಗಲೇ ಹಲವು ಉತ್ತಮ ಕೃಷಿ ಸಾಧಕರ ಪರಿಚಯ ಮಾಡಿದ್ದು ಅವರನ್ನೂ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಬೇಕು.ಅಡಿಕೆಗೆ ಪರ್ಯಾಯ ಬೆಳೆ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಬೇಕು ಎಂದರು.

ಕಸಿ ಕಟ್ಟುವ ಸಂಪನ್ಮೂಲ ವ್ಯಕ್ತಿಯನ್ನು ನೀಡಲಾಗುವುದು-ವತ್ಸಲಾರಾಜ್ಞಿ:

ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ವತ್ಸಲಾ ರಾಜ್ಞಿ ಮಾತನಾಡಿ, ಸಸ್ಯಜಾತ್ರೆಯಲ್ಲಿ ಕಸಿ ಕಟ್ಟುವ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿಕೊಡಲಾಗವುದು ಎಂದರು.

ಕೃಷಿ ಅಭಿವೃದ್ಧಿಗೆ ಪೂರಕ-ಉಲ್ಲಾಸ್ ಪೈ:

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಮಾತನಾಡಿ, ಸಣ್ಣಮಟ್ಟಿನ ಜಾಗವಿದ್ದವರೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಇರುವ ಕೃಷಿಯ ಇನ್ನಷ್ಟು ಅಭಿವೃದ್ಧಿಗೆ ಸಸ್ಯಜಾತ್ರೆಯು ಪೂರಕವಾಗಲಿದೆ ಎಂದರು.

ಕೃಷಿ, ಕೃಷಿಕರಿಗೆ ಮೌಲ್ಯವರ್ಧನೆ ಸಸ್ಯಜಾತ್ರೆಯ ಉದ್ದೇಶ-ಡಾ.ಶಿವಾನಂದ್:

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ಒಂದೇ ಕಡೆ ದೊರೆಯುವಂತೆ ಕೃಷಿಗೆ ಅವಶ್ಯಕವಾದ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ದೊರೆಯುವಂತೆ ಮಾಡುವುದೇ ಸಸ್ಯಜಾತ್ರೆಯ ಉದ್ದೇಶವಾಗಿದೆ.ಕೃಷಿ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿ, ಯಂತ್ರಗಳ ಮಾಹಿತಿ, ಮಾರುಕಟ್ಟೆ ಮಾಹಿತಿ, ಕೃಷಿ ಮತ್ತು ಕೃಷಿಕರಿಗೆ ಮೌಲ್ಯವರ್ಧನೆ ನಿಟ್ಟಿನಲ್ಲಿ ಸಸ್ಯಜಾತ್ರೆಯಲ್ಲಿ ಪ್ರಮುಖ ವಿಚಾರಗೋಷ್ಠಿಗಳನ್ನು ಆಯೋಜಿಸಿಕೊಳ್ಳಲಾಗಿದೆ. ಈ ವಿಚಾರ ಗೋಷ್ಠಿಯಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಮೇಳದ ಉದ್ದೇಶ ಈಡೇರುವಂತೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು. ಅಲಂಕಾರಿಕ ಹೂ, ಹಣ್ಣಿನ ಸಸ್ಯಗಳು ಮೇಳದಲ್ಲಿ ಲಭ್ಯವಿದೆ. ಮನೆ ಮನೆಯಲ್ಲಿ ಸಣ್ಣ ಕೃಷಿ ತೋಟ ನಿರ್ಮಾಣ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ಕೃಷಿಯ ಮೌಲ್ಯವರ್ಧನೆ ಮೇಳದ ಉದ್ದೇಶವಾಗಿದೆ. ಮೇಳದಲ್ಲಿ ಜಿಲ್ಲೆಯ ಸಂಜೀವಿನಿ ಒಕ್ಕೂಟದ ಉತ್ಪನ್ನಗಳ ಸಂತೆ, ಕೃಷಿ ಪೂರಕವಾದ ವಿವಿಧ ಸ್ಟಾಲ್‌ಗಳು ಭಾಗವಹಿಸಲಿವೆ. ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳು ಪ್ರದರ್ಶನ, ಮಾರಾಟ ನಡೆಯಲಿದೆ. ಜೊತೆಗೆ ಫುಡ್‌ಕೋರ್ಟ್, ವಿವಿಧ ಶಾಲಾ, ಕಾಲೇಜು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ ಎಂದ ಅವರು ಸಸ್ಯಜಾತ್ರೆ ವ್ಯಾಪಾರೀಕರಣವಲ್ಲ. ಕೃಷಿ ಹಾಗೂ ಕೃಷಿಕರಿಗೆ ಪ್ರೋತ್ಸಾಹ ನೀಡುವುದೇ ಉದ್ದೇಶವಾಗಿದೆ. ಕೃಷಿಕರ ಸ್ವಾವಲಂಬಿ ಜೀವನಕ್ಕೆ ಪೂರಕವಾದ ವಾತಾವರಣ ಒದಗಿಸುವುದರ ಜೊತೆಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದೂ ಮೇಳದ ಉದ್ದೇಶವಾಗಿದೆ ಎಂದರು.

LEAVE A REPLY

Please enter your comment!
Please enter your name here