ವಿಟ್ಲ: ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಎಂಬಲ್ಲಿನ ಗುಡ್ಡಪ್ರದೇಶದಲ್ಲಿರುವ ಹೊಂಡದಲ್ಲಿ ಪತ್ತೆಯಾದ ವ್ಯಕ್ತಿಯೋರ್ವರ ಅಸ್ಥಿಪಂಜರದ ಗುರುತು ಪತ್ತೆಯಾಗಿದೆ.
ಮೃತಪಟ್ಟವರನ್ನು ಪುಣಚ ಗ್ರಾಮದ ಕೆದುಮೂಲೆ ದಿ.ವೀರಪ್ಪ ನಾಯ್ಕ್ ರವರ ಪುತ್ರ ಕಮಲಾಕ್ಷ (28 ವ.) ಎಂದು ಅವರ ಮನೆಯವರು ಗುರುತು ಪತ್ತೆಹಚ್ಚಿದ್ದಾರೆ.
ಡಿ.21ರಂದು ಸೊಪ್ಪು, ಸೌದೆ ತರಲು ಗುಡ್ಡಕ್ಕೆ ತೆರಳಿದ್ದ ಸ್ಥಳೀಯ ನಿವಾಸಿಗಳಿಗೆ ಒಂದು ಮೊಬೈಲ್ ಫೋನ್ ಹಾಗೂ ಬ್ಯಾಗ್ ಕಂಡುಬಂದಿತ್ತು. ಅಲ್ಲಿಂದ ಅಲ್ಪ ದೂರದಲ್ಲಿ ವ್ಯಕ್ತಿಯೋರ್ವರ ಅಸ್ಥಿಪಂಜರ ಪತ್ತೆಯಾಗಿದ್ದು, ಮರವೊಂದರಲ್ಲಿ ಹಗ್ಗವೊಂದು ನೇತಾಡುತ್ತಿರುವುದು ಕಂಡುಬಂದಿದ್ದು ವಿಟ್ಲ ಠಾಣಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿರುವ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಪತ್ತೆಯಾಗಿರುವ ಮೃತದೇಹ ಪುಣಚ ಗ್ರಾಮದ ಕೆದುಮೂಲೆ ದಿ.ವೀರಪ್ಪ ನಾಯ್ಕ್ ರವರ ಪುತ್ರ ಕಮಲಾಕ್ಷರವರದೆಂದು ತಿಳಿದುಬಂದಿದೆ. ಮೃತರ ಸಂಬಂಧಿಕರು ಗುರುತು ಪತ್ತೆ ಹಚ್ಚಿದ್ದಾರೆ. ಮನೆಯಿಂದ ಕೆಲಸಕ್ಕೆಂದು ತೆರಳಿದರೆ ಹಲವು ದಿನಗಳವರೆಗೆ ಕಮಲಾಕ್ಷ ಮರಳಿ ಮನೆಗೆ ಬರುತ್ತಿರಲಿಲ್ಲ. ಕೆಲದಿನಗಳ ಹಿಂದೆ ಮನೆಗೆ ಬಂದಿದ್ದ ಕಮಲಾಕ್ಷ ಮತ್ತೆ ಕೆಲಸಕ್ಕೆ ತೆರಳಿದ್ದರು ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.