ಸಿಕ್ಕಂತಹ ಪ್ರಥಮ ಅವಕಾಶವನ್ನೇ ಸದುಪಯೋಗಗೊಳಿಸಿ-ಮಧು ಎಸ್.ಮನೋಹರ್
ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ತಾವು ತಲುಪಬೇಕಾದ ಗುರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟತೆಯಿರಲಿ. ಪದೇ ಪದೇ ಅವಕಾಶಗಳು ಸಿಗಲಿ ಎಂಬುದನ್ನು ಕಾಯದೆ, ಸಿಕ್ಕಂತಹ ಪ್ರಥಮ ಅವಕಾಶವನ್ನೇ ಧನಾತ್ಮಕವಾಗಿ ಸ್ವೀಕರಿಸಿ ಅದನ್ನು ಸದುಪಯೋಗಗೊಳಿಸುವಲ್ಲಿ ಹೆಜ್ಜೆಯಿಡಬೇಕು ಎಂದು ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರು ಹೇಳಿದರು.
ದ.23 ರಂದು ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರತಿಭೆಗೆ ದೇಹದ ಅಂಗಸೌಷ್ಟತೆ ಮುಖ್ಯವಲ್ಲ. ಪ್ರತಿಯೋರ್ವ ವಿದ್ಯಾರ್ಥಿಗಳು ಅವರವರ ದಾರಿಯಲ್ಲಿ ಅನನ್ಯವಂತರೆ. ವಿದ್ಯಾರ್ಥಿಗಳು ಹೇಗೆ 4ಜಿ, 5ಜಿ ಮೊಬೈಲ್‌ನತ್ತ ಆಕರ್ಷಿತರಾಗಿರುತ್ತಾರೋ ಹಾಗೆಯೆ ಮಾತಾಜಿ, ಪಿತಾಜಿ, ಗುರೂಜಿ ಎನಿಸಿಕೊಂಡ ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಮುಂದೆ ಸಾಗಿದಾಗ ಭವಿಷ್ಯ ಉತ್ತಮವಾಗುವುದು. ಪಿಯುಸಿ ಕಾಲಘಟ್ಟವೆನ್ನುವುದು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಕಾಲಘಟ್ಟವಾಗಿದೆ. ಪಿಯುಸಿ ಬಳಿಕ ತನ್ನ ಸುಂದರ ಭವಿಷ್ಯದೆಡೆಗೆ ಯಾವ ಕೋರ್ಸ್ ಆರಿಸಿದರೆ ಉತ್ತಮ ಎಂದು ಅರಿತುಕೊಂಡು ಧನಾತ್ಮಕವಾಗಿ ಹೆಜ್ಜೆಯಿಡುವಂತಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ಓದುವ ಮೂಲಕ ಉತ್ತಮ ಭವಿಷ್ಯದ ಕನಸನ್ನು ಹೊಂದುವವರಾಗಬೇಕು. ತಮ್ಮ ಸುತ್ತಮುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸುವ ಮೂಲಕ ನಾಯಕತ್ವ ಗುಣವನ್ನು ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಜ್ಞಾನ ವೃದ್ಧಿಸುವಂತಾಗಬೇಕು ಎಂದರು.
ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ಫಿಲೋಮಿನಾ ಪಿಯು ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡುತ್ತಾ ಬಂದಿದೆ. ಪ್ರಸಕ್ತ ವಿದ್ಯಾರ್ಥಿಗಳು ಕೂಡ ವರ್ಷದುದ್ದಕ್ಕೂ ಕಠಿಣ ಪರಿಶ್ರಮಪಟ್ಟು ಸಾಧನೆ ಮಾಡುವ ಮೂಲಕ ವಿದ್ಯಾಸಂಸ್ಥೆಗೆ ಹೆಸರನ್ನು ತರುವವರಾಗಬೇಕು ಎಂದರು.
ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ಬೆಳೆಯುತ್ತದೆ. ಶಿಕ್ಷಣವು ನಮ್ಮಲ್ಲಿನ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳಿಗೆ ತಾವು ಕಲಿತ ಸಂಸ್ಥೆಯ ಬಗ್ಗೆ ಅಭಿಮಾನವಿರಲಿ. ದೇಶದ ಯಾವ ಮೂಲೆಯಲ್ಲಾದರೂ ಇರಿ, ಆದ್ರೆ ನಮ್ಮ ದೇಶದ ಹಾಗೂ ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಏನೂ ಇಲ್ಲ, ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇರಕೂಡದು. ಯಾಕೆಂದರೆ ದೇವರು ಪ್ರತಿಯೋರ್ವನಲ್ಲೂ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಅದರ ಅನಾವರಣವಾಗಬೇಕಿದೆ. ವಿದ್ಯಾರ್ಥಿಗಳು ಹೊಸತನವುಳ್ಳ ವಿಷಯಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನಾಶಕ್ತರಾಗಬೇಕು. ಸಾಮರಸ್ಯದಿಂದ ಬದುಕಲು ಎಲ್ಲರ ಮನಸ್ಸು ಒಗ್ಗೂಡಬೇಕು ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈ ಮಾತನಾಡಿ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ದೂರದೃಷ್ಟಿತ್ವದ ಚಿಂತನೆಯಿಂದ ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಉದಯವಾಗಿತ್ತು. ಪತ್ರಾವೋರವರಿಂದ ಸ್ಥಾಪಿತವಾದ ಶಿಕ್ಷಣ ಸಂಸ್ಥೆಯಿಂದ ಹಲವಾರು ಮಂದಿಗೆ ಸಮಾಜದಲ್ಲಿ ಉತ್ತಮ ಬದುಕನ್ನು ಕಾಣಲು ಸಾಧ್ಯವಾಗಿದ್ದು ನಿಜವಾಗಿಯೂ ಪತ್ರಾವೋರವರಿಗೆ ಸೆಲ್ಯೂಟ್ ಹೊಡೆಯಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧನೆ ಮಾಡುತ್ತಾ ಸಂಸ್ಥೆಯನ್ನು ಮೆಮೋರೇಬಲ್ ಸಂಸ್ಥೆಯಾಗಿ ಮಾಡಿಕೊಳ್ಳುವ ಮೂಲಕ ಹೊಸ ಭಾಷ್ಯ ಬರೆಯುವವರಾಗಿ ಎಂದರು.
ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಶ್ಮಿ ಎಂ.ಡಿ ವಂದಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಫುಲ್ಲ ಜ್ಯೋತ್ಸ್ನಾ ಪಿರೇರಾ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕರಾದ ಭರತ್ ಜಿ.ಪೈ, ಡಾ.ಆಶಾ ಸಾವಿತ್ರಿ, ಸುಮ ಡಿ, ಸುಮ ಪಿ.ಆರ್, ಶರತ್ ಆಳ್ವ ಚನಿಲರವರು ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರ, ಶೈಕ್ಷಣಿಕ ಸಾಲಿನ ಪಾಠ ಹಾಗೂ ಪಠ್ಯೇತರ, ಕ್ರೀಡೆ, ಎನ್‌ಸಿಸಿ, ರೋವರ್‍ಸ್ ರೇಂಜರ್‍ಸ್ ಸಾಧಕರ ಹೆಸರನ್ನು ಓದಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಶ್ಮಿ ಎಂ.ಡಿ ವಂದಿಸಿದರು. ಉಪನ್ಯಾಸಕ ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸುಳ್ಳಿನ ಮುಖವಾಡವನ್ನು ಬಯಲು ಮಾಡುವವರಾಗಬೇಕು..
ಸಮಾಜದಲ್ಲಿ ಪ್ರಸ್ತುತ ಸತ್ಯದ ಮುಖವಾಡ ಹೊತ್ತು ಸುಳ್ಳು ತಾಂಡವವಾಡುತ್ತಿದೆ. ಸುಳ್ಳೆ ಸಮಾಜದಲ್ಲಿ ತುಂಬಿ ತೇಲುತ್ತಿದೆ ಆದರೆ ಸತ್ಯ ಮಾತ್ರ ನಗ್ನತೆಯನ್ನು ಪಡೆದುಕೊಂಡು ಸತ್ತೇ ಹೋಗಿದೆ. ಸುಳ್ಳೇ ಕಾಯ್ದೆ, ಕಾನೂನಿಗೆ ಬುನಾದಿಯಾಗಿಬಿಟ್ಟಿದೆ. ಸುಳ್ಳು ಎಂಬುದು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ವಿದ್ಯಾರ್ಥಿಗಳು ಸಮಾಜದಲ್ಲಿನ ಸುಳ್ಳಿನ ಮುಖವಾಡವನ್ನು ಹೊತ್ತಂತಹ ವ್ಯಕ್ತಿಗಳ ಮುಖವಾಡ ಬಯಲು ಮಾಡುವವರಾಗಬೇಕು ಮತ್ತು ಸುಂದರ ಭಾರತದ ಭವಿಷ್ಯವನ್ನು ಕಾಪಾಡುವವರಾಗಬೇಕು. ಹೆತ್ತವರ ಕನಸನ್ನು ಈಡೇರಿಸುವ ಮೂಲಕ ವಿದ್ಯಾರ್ಥಿಗಳು ಮುಂದಡಿಯಿಡಬೇಕು.
-ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರು, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ
-2022-23ನೇ ವರ್ಷದ ಮಲ್ಟಿ ಟ್ಯಾಲೆಂಟೆಡ್ ವಿದ್ಯಾರ್ಥಿಯಾಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ ಆಯ್ಕೆ
-2022-23ನೇ ವರ್ಷದ ಮಲ್ಟಿ ಟ್ಯಾಲೆಂಟೆಡ್ ವಿದ್ಯಾರ್ಥಿನಿಯಾಗಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಫುಲ್ಲ ಜ್ಯೋತ್ಸ್ನಾ ಪಿರೇರಾ ಆಯ್ಕೆ
-ಎಲ್ಲಾ ವಿಭಾಗಗಳಲ್ಲಿ ಅತ್ತ್ಯುತ್ತಮ ಸ್ಪರ್ಧೆ ನೀಡಿ ಚಾಂಪಿಯನ್ ತರಗತಿ ಎನಿಸಿಕೊಂಡ `ದ್ವಿತೀಯ ಎಸ್‌ಸಿಬಿಎ’ಗೆ ಪ್ರಶಸ್ತಿ