ಮೂಡುಬಿದಿರೆಯಲ್ಲಿ ಮಿನಿ ಜಗತ್ತು ಅನಾವರಣಗೊಳಿಸಿದ `ಸಾಂಸ್ಕೃತಿಕ ಜಾಂಬೂರಿ’

0

ಮೂಡುಬಿದಿರೆ: 100 ಎಕರೆಗೂ ಅಧಿಕ ವಿಸ್ತೀರ್ಣದ ಪ್ರದೇಶ., 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 10 ಸಾವಿರಕ್ಕೂ ಅಧಿಕ ಸ್ಕೌಡ್ಸ್, ಗೈಡ್ಸ್ ಶಿಕ್ಷಕರು, ದೇಶದ ನಾನಾ ಭಾಗಗಳಿಂದ ಆಗಮಿಸಿದ ಪ್ರತಿನಿಧಿಗಳು, ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ಜಗತ್ತಿನ ಪರಿಚಯಕ್ಕೆ ಕೃಷಿ ಮೇಳ, ಕಲಾಜಗತ್ತಿನ ಅನಾವರಣಕ್ಕೆ ಕಲಾಮೇಳ, ವಿಜ್ಞಾನ ಲೋಕದ ವರ್ತಮಾನ ಭವಿಷ್ಯವನ್ನು ತಿಳಿಯಪಡಿಸಲು ವಿಜ್ಞಾನಮೇಳ, ಸಾಹಿತ್ಯ ಲೋಕದ ಗ್ರಂಥಭಂಡಾರದ ಪರಿಚಯಕ್ಕೆ ಪುಸ್ತಕಮೇಳ, ವೈವಿಧ್ಯಮಯ ವಸ್ತುಗಳು, ತಿಂಡಿ ತಿನಿಸುಗಳ ಪರಿಚಯಕ್ಕೆ ಪ್ರದರ್ಶನ-ಮಾರಾಟ ಮೇಳ, ನಿತ್ಯ ಎರಡು ಲಕ್ಷಕ್ಕೂ ಅಧಿಕ ಮಂದಿಗೆ ವೈವಿಧ್ಯಮಯ ಭೋಜನ, ದೇಶದ ನಾನಾ ಭಾಗಗಳ ಸಂಸ್ಕೃತಿ-ಪರಂಪರೆಯ ಜಗಜ್ಜಾಹೀರಿಗೆ ಐದು ವೇದಿಕೆಗಳಲ್ಲಿ ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮ, ವನ್ಯಜಗತ್ತಿನ ಅಳಿವು-ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ, ವಿದ್ಯಾರ್ಥಿಗಳಲ್ಲಿ ಸವಾಲನ್ನು ಎದುರಿಸುವ ಛಲ ಮೂಡಿಸುವ ಚಾಲೆಂಜಿಂಗ್ ವ್ಯಾಲಿ, ಫನ್‌ಬೇಸ್.. ಹೀಗೆ ಹೇಳುತ್ತಾ ಹೋದಂತೆ ವೈವಿಧ್ಯತೆಗಳ ಆಗರವೇ ತೆರೆದುಕೊಳ್ಳುವಂತೆ ಸಂಘಟನೆಯಾಗಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು `ನಭೂತೋ’ ಎನ್ನುವ ಹಾಗೆ ಸಂಘಟಿಸಿರುವ ಕೀರ್ತಿ ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವರ ಸಾರಥ್ಯದ `ಆಳ್ವಾಸ್’ಗೆ ಸಲ್ಲುತ್ತದೆ.

ಈ ಮೂಲಕ ಇಡೀ ದೇಶವೇ ಮೂಡುಬಿದಿರೆಯತ್ತ ತಿರುಗಿನೋಡುವಂತಹ ಕಾರ್ಯಕ್ರಮ 6 ದಿನಗಳ ಕಾಲ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ಸುವ್ಯವಸ್ಥಿತವಾಗಿ ಸಂಘಟನೆಯಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ದ.ಕ ಸಂಸದ ನಳಿನ್ ಕುಮಾರ್ ಕಟೀಲು ವಿಶ್ವ ಸ್ಕೌಟ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಲ್‌ಹೆಂದವಿ, ಸ್ಕೌಟ್ಸ್ ಗೈಡ್ಸ್ ಒಡಿಶಾ ಅಧ್ಯಕ್ಷ ಅಂತನು ಸಬ್ಯಸಾಚಿ ನಾಯಕ್, ಭಾರತೀಯ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ಡಾ.ಅನಿಲ್ ಕುಮಾರ್ ಜೈನ್, ಏಷಿಯಾ ಫೆಸಿಫಿಕ್ ಪ್ರದೇಶದ ನಿರ್ದೇಶಕ ರಿಝಾಲ್ ಸಿ.ಪಂಗಿಲಿನಾನ್, ವಿಶ್ವ ಬಾಲಕಿಯರ ಸ್ಕೌಟ್ ಅಸೋಸಿಯೇಷನ್ ಅಧ್ಯಕ್ಷ ಚಂಪ ಮಾಲಿನಿ ಷಹಮಿಲ್, ಭಾರತೀಯ ಸ್ಕೌಟ್ಸ್ ಗೈಡ್ಸ್ ರಾಷ್ಟ್ರೀಯ ಕಮಿಷನ್ ಮುಖ್ಯಸ್ಥ ಡಾ.ಕೆ.ಕೆ.ಖಂದೇಲ್ ವಾಲಾ, ಶಾಸಕ ಉಮಾನಾಥ ಕೋಟ್ಯಾನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ದಕ ಜಿಲ್ಲಾಧಿಕಾರಿ ರವಿ ಕುಮಾರ್, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಉಪಸ್ಥಿತಿಯಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರ ಮೂಲಕ ಚಾಲನೆ ಪಡೆದುಕೊಂಢ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ 25 ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಸಮಾರೋಪ ಸಮಾರಂಭವು ಡಿ.26 ರಂದು ನಡೆಯಿತು.

65 ಸಾವಿರಕ್ಕೂ ಅಧಿಕ ಮಂದಿ:
ಒಟ್ಟು 6 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 48,570 ವಿದ್ಯಾರ್ಥಿಗಳು, 2000 ಸಿಬ್ಬಂದಿಗಳು, 4000 ಕ್ಯಾಂಪ್ ಸ್ಟಾಫ್ ಮತ್ತು 500 ಕಲಾವಿದರು ಭಾಗವಹಿಸಿದ್ದರು. ದೇಶದ 30 ರಾಜ್ಯಗಳು, ಮಾತ್ರವಲ್ಲದೆ ಮಲೇಶಿಯಾ, ಸೌತ್ ಕೊರಿಯಾ, ಶ್ರೀಲಂಕಾ, ಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೃಷಿ ಜಗತ್ತನ್ನು ಅನಾವರಣಗೊಳಿಸಿದ ಕೃಷಿ ಮೇಳ:
ಹಲವು ಮೇಳಗಳೊಂದಿಗೆ ಜಾಂಬೂರಿ ಆಯೋಜನೆಗೊಂಡಿದ್ದು, ಬೃಹತ್ ಮೈದಾನದಲ್ಲಿ ನಡೆದ ಕೃಷಿ ಫಲ ವಸ್ತು ಪ್ರದರ್ಶನದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ತಳಿಗಳು ಕಂಗೊಳಿಸಿದವು. 150 ಬಗೆಯ ಬಾಳೆಗೊನೆಗಳು, ದೇಶ ವಿದೇಶಗಳ 750 ಬಗೆಯ ಭತ್ತದ ತಳಿಗಳು, 100 ಬಗೆಯ ಅಕ್ಕಿ, ವಿದೇಶದಿಂದ ತರಿಸಲಾದ ಬೃಹತ್ ಗಾತ್ರದ ತೆಂಗು, 15 ಬಗೆಯ ಅಡಕೆ ಗೊನೆ, ಸುಮಾರು ೫೦ ಬಗೆಯ ಗೆಡ್ಡೆಗಳು, 4 ವಿಧದ ಹಲಸು, ಸುಮಾರು 450 ವಿಧದ ಔಷಧೀಯ ಸಸ್ಯಗಳ ಜೊತೆಗೆ ಭಾರೀ ಗಾತ್ರದ ಚೀನಿಕಾಯಿ, ಸಹಸ್ರ ಕದಳಿ, ಬೃಹತ್ ಗಾತ್ರದ ತೆಂಗಿನಕಾಯಿ, ತೆಂಗಿನ ಗೆರಟೆಯಿಂದಲೇ ವಿನ್ಯಾಸ ಮಾಡಲಾದ ಸುಮಾರು 150 ಬಗೆಯ ಕಲಾ ಪ್ರಕಾರಗಳು ಗಮನ ಸೆಳೆದವು. 4 ತಿಂಗಳ ಹಿಂದೆ ಬೀಜ ಬಿತ್ತಿ, ನೀರುಣಿಸಿ, ಗೊಬ್ಬರ ಹಾಕಿ ಬೆಳೆಸಿದ ತರಕಾರಿ ಗಿಡಗಳು ವಿಸ್ತಾರವಾದ ಚಪ್ಪರಕ್ಕೆ ಹಬ್ಬಿದ್ದು, ಹೀರೆಕಾಯಿ, ಸೋರೆಕಾಯಿ, ಕುಂಬಳಕಾಯಿ ಸೇರಿದಂತೆ 50ಕ್ಕಿಂತಲೂ ಅಧಿಕ ಬಗೆಯ ತರಕಾರಿಗಳು ನೋಡುಗರ ಮನಸೂರೆಗೊಳಿಸಿದವು.

ತಂತ್ರಜ್ಞಾನ-ಮಾಹಿತಿಗಳ ಆಗರ ವಿಜ್ಞಾನ ಮೇಳ:
ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ವಿಜ್ಞಾನಮೇಳವೂ ಪ್ರಮುಖ ಆಕರ್ಷಣೆಯಾಗಿದ್ದು, ಸಾವಿರಕ್ಕೂ ಅಧಿಕ ವಿಜ್ಞಾನ ಮಾದರಿಗಳು ಪ್ರದರ್ಶನಗೊಳ್ಳುತ್ತಿದ್ದು, ಎಲ್ಲವೂ ಒಂದಕ್ಕೊಂದು ವಿಭಿನ್ನ. ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸೈನ್ಸ್ ಮಾಡೆಲ್‌ಗಳು ಇಲ್ಲಿದ್ದು, ಮಿನಿ ವಿಜ್ಞಾನಲೋಕವೇ ಅನಾವರಣಗೊಂಡಿತ್ತು. ಜೊತೆಗೆ ಡಿಆರ್‌ಡಿಒ ಅಂಗ ಸಂಸ್ಥೆಯಾಗಿರುವ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಈ ಪ್ರದರ್ಶನ ಏರ್ಪಡಿಸಿದೆ. ಸೂಪರ್‌ಸಾನಿಕ್ ಫೈಟರ್ ವಿಮಾನವಾಗಿರುವ ತೇಜಸ್, ಎಲ್‌ಸಿಎ ನೇವಿ, ಎಲ್‌ಸಿಎ ಏರ್‌ಫೋರ್ಸ್ ವಾಕ್-2 ಹೀಗೆ ಭಾರತದ ರಕ್ಷಣಾ ಕ್ಷೇತ್ರದ ಮುಂದಿನ ಭವಿಷ್ಯದ ಬಗೆಗೂ ಮಾಹಿತಿ ನೀಡುವ ಕೆಲಸ ಇಲ್ಲಿ ನಡೆದಿದೆ. ಜೊತೆಗೆ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಸಂಚಾರಿ ಬಸ್ ಮತ್ತು ಮೇಳದ ಒಳಗೆ ರಾಕೆಟ್ ಉಡಾವಣಾ ವಾಹನ ಮತ್ತು ವಿವಿಧ ಕೃತಕ ಉಪಗ್ರಹಗಳ ಮಾದರಿಗಳು ಕೂಡ ಮಾಹಿತಿ ಒದಗಿಸಿವೆ.

`ಚಾಲೆಂಜಿಂಗ್ ವ್ಯಾಲಿ’:
ಇಡೀ ಜಾಂಬೂರಿಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದುದು ಸುಮಾರು 8 ಎಕರೆ ವಿಶಾಲ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಲಾದ ಚಾಲೆಂಜ್ ವ್ಯಾಲಿ. ಸಾಹಸಿಕ ಚಟುವಟಿಕೆಗೆ ಮೀಸಲಿಟ್ಟಿರುವ ತಾಣ ಇದಾಗಿದ್ದು, ಸಾವಿರಾರು ಸ್ಕೌಟ್ಸ್ ಗೈಡ್ಸ್‌ಗಳು ಇಲ್ಲಿ ಸಾಹಸಿಕ ಪ್ರದರ್ಶನ ನೀಡಿದರು. ಬ್ಯಾಲೆನ್ಸ್ ಬೀಮ್ ವಾಕ್, ಅಬ್‌ಸ್ಟಕಲ್ ಫ್ಲಾಂಕ್‌ವಾಕ್, ಟೀಮ್ ಬೀಮ್ ಫ್ಲಾಂಕ್ ವಾಕ್, ಮಂಕಿ ಬ್ರಿಜ್, ಟಯರ್ ಬ್ಯಾಲೆನ್ಸ್, ಫ್ಲಾಂಕ್ ಬ್ಯಾಲೆನ್ಸ್, ಮೆರಿಗೋ ರೌಂಡ್ಸ್, ಟಯರ್ ಕ್ರಾಸಿಂಗ್, ಲ್ಯಾಡರ್ ಸ್ವಿಂಗಿಂಗ್, ಫ್ಲಾಂಕ್ ಸ್ವಿಂಗಿಂಗ್, ವಾಲ್ ಕ್ಲೈಂಬಿಂಗ್, ಫೋರ್ ಲೆಗ್ ಟವರ್, ರ್‍ಯಾಪ್ಲಿಂಗ್, ಟಯರ್ ವಾಲ್, ರಷ್ಯನ್ ವಾಲ್, ಏರಿಯಲ್ ರನ್‌ವೇ, ಸ್ಕೈ ಸೈಕ್ಲಿಂಗ್, ಕಮಾಂಡೋ ಬ್ರಿಜ್, ಟಾರ್ಜನ್ ಸ್ವಿಂಗ್ ಸೇರಿದಂತೆ 158 ಬಗೆಯ ಆಟಗಳ ಅವಕಾಶ ನೀಡಲಾಗಿತ್ತು.

ಮನಮೋಹಕ ಪುಷ್ಪಪ್ರದರ್ಶನ:
ಜಾಂಬೂರಿಯ ಸೊಬಗನ್ನು ಹೆಚ್ಚಿಸಿದ್ದು ಅಲ್ಲಲ್ಲಿ ಕಂಗೊಳಿಸುತ್ತಿದ್ದ ಬಣ್ಣಬಣ್ಣದ ಹೂಗಳು. ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ಬೆಳೆಯುವ ವೈವಿಧ್ಯಮಯ ವರ್ಣ ಗಿಡಗಳನ್ನು ಮಡಿಕೆಗಳಲ್ಲಿ ಬೆಳೆಸಿ ಸಿಂಗರಿಸಿದ್ದು, ಜೊತೆಗೆ ವಿವಿಧ ಪ್ರಾಣಿಗಳು, ಮಾನವಾಕೃತಿಗಳನ್ನು ರಚಿಸಿ ಅವುಗಳನ್ನು ಬಗೆಬಗೆಯ ಹೂಗಳಿಂದಲೇ ಮುಚ್ಚಲಾಗಿದೆ. ಹೂವಿನ ಟೆಡ್ಡಿ ಬೇರ್, ಆನೆ, ಚಿಟ್ಟೆ, ಹೂಗಳಿಂದಲೇ ತಯಾರಿಸಿದ ಯಕ್ಷ ಕಿರೀಟ ದ್ವಾರ, ಕಮಾನು ಎಲ್ಲವೂ ಪುಷ್ಪಲೋಕವನ್ನೇ ಧರೆಗಿಳಿಸಿದಂತಿತ್ತು.

ಹೊಸ ಅರಣ್ಯಲೋಕ:
ಕಾಡಿನ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬಿತ್ತಬೇಕೆನ್ನುವ ಉದ್ದೆಶದಿಂದ ಅರಣ್ಯ ಇಲಾಖೆಯ ಸಾರಥ್ಯದಲ್ಲಿ ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಹೊಸ ಅರಣ್ಯಲೋಕವನ್ನೇ ಸೃಷ್ಟಿ ಮಾಡಲಾಗಿದೆ. ನಾನಾ ಪ್ರಾಣಿಗಳು, ಕುಟೀರಗಳನ್ನು ಕೃತಕವಾಗಿ ರಚಿಸಲಾಗಿದೆ. ಇದಲ್ಲದೆ ನಕ್ಷತ್ರ ವನ, ರಾಶಿವನ, ಜಲಪಾತ, ಕೆರೆ ಇತ್ಯಾದಿಗಳನ್ನು ರೂಪಿಸಲಾಗಿದೆ. ಅರಣ್ಯದ ಮಧ್ಯೆ ರೋಪ್‌ವೇ ಮಾದರಿಯಲ್ಲಿ ಅಟ್ಟಳಿಗೆ ನಿರ್ಮಾಣಗೊಂಡಿದ್ದು ಕಾಂತಾರ ಸಿನಿಮಾದ `ಕೈಲಾಸ’ವನ್ನು ನೆನಪು ಮಾಡಿಕೊಳ್ಳುವಂತೆ ಅದ್ಭುತವಾಗಿ ರೂಪುಗೊಂಡಿದೆ.

ಸಾಹಿತ್ಯ ಜಗತ್ತನ್ನು ತೆರೆದಿಟ್ಟ ಪುಸ್ತಕ ಮೇಳ:
ಮೂಡುಬಿದಿರೆಗೂ ಸಾಹಿತ್ಯಕ್ಕೂ ಇರುವ ನಂಟು ನುಡಿಸಿರಿಯ ಮೂಲಕವೇ ಜಗಜ್ಜಾಹೀರಾಗಿದೆ. ಇನ್ನು ಅಂತಾರಾಷ್ಟ್ರೀಯ ಉತ್ಸವ ಎಂದರೆ ಕೇಳಬೇಕೇ? ಇಲ್ಲೂ ಅದ್ಭುತ ಸಾಹಿತ್ಯ ಭಂಡಾರ ಲೋಕಾವರಣಗೊಂಡಿತ್ತು. ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದು, ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಸೇರಿದಂತೆ ದೇಶದ ಬಹುತೇಕ ಪ್ರಾದೇಶಿಕ ಭಾಗಗಳ ಪುಸ್ತಕಗಳು ಸಹಿತ ೮ಕ್ಕೂ ಅಧಿಕ ಮಳಿಗೆಗಳ ಮೂಲಕ ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವನ್ನು ಮಾಡಲಾಗಿತ್ತು.

ವರ್ಣಲೋಕವನ್ನು ಅನಾವರಣಗೊಳಿಸಿದ ಚಿತ್ರಕಲಾಮೇಳ:
ಬಣ್ಣಬಣ್ಣದ ವರ್ಣಚಿತ್ರಗಳು, ವ್ಯಂಗ್ಯಚಿತ್ರಗಳ ಮೂಲಕ ಚಿತ್ರಕಲೆ, ಕಲಾಕೃತಿಗಳು, ಕಲಾವಿದರನ್ನು ಪರಿಚಯಿಸಿದ್ದು ಆಳ್ವಾಸ್ ಕ್ಯಾಂಪಸ್‌ನ ಯಶೋಕಿರಣ ಕಟ್ಟಡ. ಇಲ್ಲಿ 100ಕ್ಕೂ ಅಧಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರು ಚಿತ್ರರಚನೆಯಲ್ಲಿ ಪಾಲ್ಗೊಂಡಿದ್ದು, ಕುಂಚದಲ್ಲಿ ಚಿತ್ರಗಳು ಅರಳಿವೆ. ಅಷ್ಟೇ ಅಲ್ಲದೆ ರಾಷಮಟ್ಟದಲ್ಲಿ ಪ್ರಶಸ್ತಿ ಪಡೆದ ಫೊಟೋಗ್ರಫಿಗಳು, ಕಂಬಳ, ಯಕ್ಷಗಾನ, ಭೂತಕೋಲ, ರಥೋತ್ಸವ, ತಯ್ಯಂ, ಕೆಂಡ ಸೇವೆ, ಓಕುಳಿ, ಮಹಾಮಸ್ತಕಾಭಿಷಕ, ಕೆಸರಿನಾಟ, ತೂಟೆದಾರ, ಜನಪದ ಆಚರಣೆಗಳ ಸಮಗ್ರ ಚಿತ್ರಣವನ್ನು ಚಿತ್ರಗಳು ಕಟ್ಟಿಕೊಟ್ಟಿವೆ.

ಸುವ್ಯವಸ್ಥಿತ ಪಾಕಶಾಲೆ-ಭೋಜನ ವ್ಯವಸ್ಥೆ:
ಅತ್ಯಂತ ಸವಾಲು ದೇಶ, ಪ್ರಪಂಚದ ನಾನಾ ಭಾಗಗಳಿಂದ ಆಗಮಿಸಿದ ಮಂದಿಗೆ ಒದಗಿಸುವ ಊಟೋಪಚಾರ. ಆದರೆ ಮೋಹನ ಆಳ್ವರ ನೇತೃತ್ವದ ತಂಡ ಈ ಸವಾಲನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ನಿತ್ಯ 2 ಲಕ್ಷಕ್ಕೂ ಅಧಿಕ ಮಂದಿಗೆ ಅತ್ಯಂತ ಸೊಗಸಾಗಿ, ರುಚಿಕಟ್ಟಾದ ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗಿದೆ. 21 ಕ್ಕೂ ಅಧಿಕ ಕಡೆ ಪಾಕಶಾಲೆ, ಭೋಜನ ಶಾಲೆ ನಿರ್ಮಿಸಿ, ಕರಾವಳಿ ಶೈಲಿಯ ಭೋಜನ ತಯಾರಿಸಿ ಬಡಿಸಲಾಗಿದೆ. . 1850 ಮಂದಿ ಬಾಣಸಿಗರಿಂದ ಅಡುಗೆ ಸಿದ್ಧತೆಯಾಗಿದ್ದು, 2.5 ಕೋಟಿ ಮೌಲ್ಯದ ಅಡುಗೆ ಸಾಮಾಗ್ರಿಗಳನ್ನು ಜಾಂಬೂರಿಗಾಗಿ ಖರೀದಿ ಮಾಡಲಾಗಿದೆ. ಈ ಪೈಕಿ 3.5 ಕೋಟಿಯಷ್ಟು ಮೌಲ್ಯದ ಸ್ವತ್ತುಗಳು ಹೊರೆಕಾಣಿಕೆ ರೂಪದಲ್ಲಿ ಸಂಗ್ರಹವಾಗಿದ್ದು, ಪ್ರತಿದಿನ ಸರಾಸರಿ 10,000 ಸಾವಿರ ಲೀಟರ್‌ನಷ್ಟು ಹಾಲು ಹಾಗೂ 7 ಸಾವಿರ ಲೀಟರ್‌ನಷ್ಟು ಮೊಸರು ಬಳಕೆಯಾಗಿದೆ. ಎಲ್ಲ ಕೌಂಟರ್‌ಗಳಲ್ಲಿ ಸ್ಕೌಟ್ಸ್ ಗೈಡ್ಸ್‌ಗಳು ಮತ್ತಿತರ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಅಚ್ಚುಕಟ್ಟುತನ, ಶಿಸ್ತಿನ ಮೂಲಕ ಭೋಜನ ವ್ಯವಸ್ಥೆ ನಡೆದಿದೆ.

ಆರ್ಥಿಕತೆಗೆ ಉತ್ತೇಜನ ನೀಡಿದ ಆಹಾರ ಮೇಳ-ಗ್ರಾಹಕ ಮೇಳ:
ಜಾಂಬೂರಿಯು ಭರಪೂರ ಮನರಂಜನೆ ಒದಗಿಸಿ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಗೆ ಸಾಕ್ಷಿಯಾಗುವ ಜೊತೆಗೆ ಈ ಭಾಗದ ಕೋವಿಡ್ ನಂತರದ ಆರ್ಥಿಕ ವಹಿವಾಟಿಗೆ ಉತ್ತೇಜನ ನೀಡಿದೆ. 100 ಕ್ಕೂ ಅಧಿಕ ಮಳಿಗೆಗಳಲ್ಲಿ ಗ್ರಾಹಕ ಮೇಳ, ಆಹಾರ ಮೇಳ ನಡೆದಿದ್ದು, ನಾನಾ ರಾಜ್ಯಗಳ ಫ್ಯಾಷನ್, ಪ್ರಸಾಧನ, ವಸ್ತ್ರಗಳು, ಮನೆ ಬಳಕೆ ವಸ್ತುಗಳು ಜೊತೆಗೆ ಮೈಸೂರು, ಬೆಂಗಳೂರು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತ ಶೈಲಿಯ ತಿಂಡಿಗಳು ಇದ್ದು ಗ್ರಾಹಕರಿಗೆ ಉತ್ತಮ ಅವಕಾಶವನ್ನೂ ಒದಗಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ:
ಕಲಾರಸಿಕರಿಗೆ ಒಂದಿನಿತೂ ಕೊರತೆಯಾಗದಂತೆ ಒಟ್ಟು 5 ವೇದಿಕೆಗಳಲ್ಲಿ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡಿವೆ. ಜಾಂಬೂರಿಯಲ್ಲಿ ಚಾಲೆಂಜಿಂಗ್ ಟಾಸ್ಕ್, ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯ ಕಾರ್ಯಕ್ರಮ, ಮ್ಯಾಜಿಕ್ ಶೋ ಹೀಗೆ ಕೆಲವು ಕಾರ್ಯಕ್ರಮ ಹೊರತುಪಡಿಸಿ ಇತರೆಲ್ಲ ಕಡೆ ಸಾರ್ವಜನಿಕರಿಗೂ ಪ್ರವೇಶವಿತ್ತು. ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ದ.ಕ, ಉಡುಪಿ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಹಲವು ಶಾಲೆಗಳಿಂದ ಇತರ ಮಕ್ಕಳೂ ತಂಡೋಪತಂಡವಾಗಿ ಆಗಮಿಸಿದ್ದಾರೆ. ಪ್ರವೀಣ್ ಗೋಡ್ಖಿಂಡಿ, ವಿಜಯಪ್ರಕಾಶ್ ರಾಜೇಶ್ ಕೃಷ್ಣನ್, ಶಂಕರ್ ಮಹಾದೇವನ್, ಅವರ ಕಾರ್ಯಕ್ರಮಗಳು ಮೋಡಿ ಮಾಡಿವೆ.

ಸಿ.ಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.

 

ಜಾಂಬೂರಿಗೆ 35-40 ಕೋಟಿ ರೂ.ಗಳಷ್ಟು ವೆಚ್ಚವಾಗಿದೆ. ಇದರಲ್ಲಿ 10 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಮೊತ್ತಕ್ಕಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೆನೆ. ಸರ್ಕಾರದಿಂದ ಸಿಗಬೇಕಾದ ಮೊತ್ತ ತರಿಸುವ ನಿಟ್ಟಿನಲ್ಲಿ ನಮ್ಮ ಸಂಸದರು, ಉಸ್ತುವಾರಿ ಸಚಿವರು, ಶಾಸಕರಿಗೂ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಮನವಿ ಮಾಡಿದ್ದೆನೆ. ಯಾವುದೇ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡುವ ಕ್ರಮ ಇಲ್ಲ. ಆದರೆ ಮೂಡುಬಿದಿರೆಯಲ್ಲಿ ಜನರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದೆವೆ. ಆದರೆ ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಸಮಸ್ಯೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮ್ಮ ಮಕ್ಕಳು ಸ್ಕೌಟ್ಸ್ ಗೈಡ್ಸ್ ಗೆ ಸೇರಬೇಕು ಅಂತ ಪೋಷಕರಿಗೆ, ಶಿಕ್ಷಕರಿಗೆ ಅನ್ನಿಸಬೇಕು, ಜನರಿಗೆ ಈ ವ್ಯವಸ್ಥೆಯ ಅರಿವಾಗಬೇಕು ಎನ್ನುವ ಉದ್ದೆಶದಿಂದಲೇ ಜನರಿಗೆ ಜಾಂಬೂರಿಯಲ್ಲಿ ಭಾಗವಹಿಸಲು ಅವಕಾಶ ನೀಡಿದೆವು. ಸದ್ಯ ರಾಜ್ಯದಲ್ಲಿ 6 ಲಕ್ಷ ಸ್ಕೌಟ್ಸ್ ಗೈಡ್ಸ್ ಕೆಡೆಟ್‌ಗಳಿದ್ದಾರೆ. ಈ ಸಂಖ್ಯೆ ಇಮ್ಮಡಿ, ಮುಮ್ಮಡಿ ಆಗಬೇಕು. ಮೂಡುಬಿದಿರೆ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆದ ವಿಶ್ವದ ಮೊದಲ ಸ್ಕೌಟ್ಸ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ನೆನಪಿಗಾಗಿ ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ ನಿರ್ಮಿಸುವ ಮಹತ್ತರ ಯೋಜನೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಬ್ಯಾಂಕ್, ಕಂಪನಿ, ಸಹಕಾರಿ ಸಂಸ್ಥೆಗಳ ನೆರವಿನಿಂದ ನಿರ್ಮಿಸುವ ಯೋಜನೆ ಇದೆ.
-ಡಾ.ಎಂ.ಮೋಹನ ಆಳ್ವ,
ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಫೌಂಡೇಷನ್

LEAVE A REPLY

Please enter your comment!
Please enter your name here