ಉಪ್ಪಿನಂಗಡಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿಯೋರ್ವರು ನೇತ್ರಾವತಿ ನದಿಯಲ್ಲಿ ನೀರು ಪಾಲಾದ ಘಟನೆ ಮುಗೇರಡ್ಕದಲ್ಲಿ ಡಿ.26ರಂದು ಸಂಜೆ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದ ಕಾರಣ ರಾತ್ರಿ ನೀರು ಪಾಲಾದವರ ಹುಡುಕಾಟ ಆರಂಭವಾಗಿದೆ.
ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40ವ.) ನೀರುಪಾಲಾದ ವ್ಯಕ್ತಿ. ಜನಾರ್ದನ ಹಾಗೂ ಮೊಗ್ರು ಗ್ರಾಮದ ಬೋಲೋಡಿ ನಿವಾಸಿ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬಲೆ ಹಾಕಲು ಬಂದಿದ್ದರು. ಆ ಸಂದರ್ಭ ಜನಾರ್ದನ ಅವರು ನೀರು ಪಾಲಾಗಿದ್ದಾರೆ. ಆದರೆ ಇವರ ಜೊತೆಗಿದ್ದ ಮಹೇಶ್ ಈ ಸಂದರ್ಭ ಯಾರ ಸಹಾಯಕ್ಕೂ ಕೂಗದೇ ಅವರನ್ನು ಬಿಟ್ಟು ತನ್ನ ಪಾಡಿಗೆ ವಾಪಸ್ ಬಂದಿದ್ದರು.
ಬಾರ್‌ನಲ್ಲಿ ವಿಷಯ ಹೊರಬಂತು: ಹಾಗೆ ಬಂದ ಮಹೇಶ್ ಪದ್ಮುಂಜ ಬಾರಿಗೆ ತೆರಳಿದ್ದು, ಅಲ್ಲಿ ನಶೆ ಏರಿದ ಬಳಿಕ ಅಲ್ಲಿದ್ದವರಲ್ಲಿ ಈ ವಿಷಯ ಬಾಯ್ಬಿಟ್ಟಿದ್ದಾರೆ. ಜನಾರ್ದನ ಅವರು ನದಿಯಲ್ಲಿ ಮುಳುಗಿದ್ದು, ನಾಳೆ ಅವರ ಮೃತದೇಹ ಹೊರಗೆ ಬರಬಹುದು ಎಂದಿದ್ದರು. ರಾತ್ರಿ ವಿಷಯ ಗೊತ್ತಾಗಿ ಅವರ ಹುಡುಕಾಟ ಆರಂಭವಾಗಿದೆ. ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ.
ಧರ್ಮದೇಟು: ನದಿಯಲ್ಲಿ ನೀರುಪಾಲಾದ ವಿಷಯ ಗೊತ್ತಿದ್ದರೂ ಯಾರಲ್ಲೂ ತಕ್ಷಣಕ್ಕೆ ವಿಷಯ ತಿಳಿಸದೇ ರಾತ್ರಿಯ ಸಮಯದಲ್ಲಿ ಹೇಳಿದ ಮಹೇಶ್‌ಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ ಎಂದು ವರದಿಯಾಗಿದೆ.