ಉಪ್ಪಿನಂಗಡಿ: ಮೀನು ಹಿಡಿಯಲು ಹೋಗಿ ನೇತ್ರಾವತಿ ನದಿ ನೀರಲ್ಲಿ ಮುಳುಗಿದ್ದ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ಪುತ್ರ ಜನಾರ್ದನ ಗೌಡ (೪೨) ಅವರ ಮೃತದೇಹ ಡಿ.೨೭ರಂದು ದೊರೆತಿದೆ.
ಜನಾರ್ದನರು ಬಂದಾರು ಗ್ರಾಮದ ಬೋಲೋಡಿ ನಿವಾಸಿ ಚಂದಪ್ಪ ಪೂಜಾರಿ ಎಂಬವರ ಪುತ್ರ ಮಹೇಶ್ ಎಂಬಾತನೊಂದಿಗೆ ಡಿ.೨೬ರಂದು ಸಂಜೆ ಮುಗೇರಡ್ಕ ಬಳಿ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸನಿಹದಲ್ಲಿ ನೇತ್ರಾವತಿ ನದಿಯಲ್ಲಿ ಮೀನಿಗಾಗಿ ಬಲೆ ಕಟ್ಟಲು ಬಂದಿದ್ದರು. ಈ ಸಂದರ್ಭ ಇವರು ನೀರು ಪಾಲಾಗಿದ್ದು, ಇವರ ಜೊತೆಗಿದ್ದ ಮಹೇಶ್ ಈ ಬಗ್ಗೆ ಆ ಸಂದರ್ಭದಲ್ಲಿ ಯಾರಲ್ಲೂ ವಿಷಯ ತಿಳಿಸಿದೇ ಅಲ್ಲಿಂದ ಬಂದಿದ್ದ. ಹೀಗೆ ಬಂದವ ಬಳಿಕ ಪದ್ಮುಂಜ ಬಾರಿಗೆ ಹೋಗಿ ಅಲ್ಲಿ ಕುಡಿದು ನಶೆ ಏರಿಸಿದ ಬಳಿಕ ಈ ಬಗ್ಗೆ ಅಲ್ಲಿ ಬಾಯ್ಬಿಟ್ಟಿದ್ದ.
ಈ ಬಗ್ಗೆ ಮಾಹಿತಿ ಪಡೆದ ಜನಾರ್ದನ್ ಸಂಬಂಧಿಕರು ಹಾಗೂ ಗೆಳೆಯರ ಬಳಗ ಬಾರಿನಲ್ಲಿದ್ದ ಮಹೇಶ್ ನನ್ನು ಹಿಡಿದು ಘಟನಾ ಸ್ಥಳಕ್ಕೆ ಕರೆ ತಂದು ಜನಾರ್ದನ್ ಮುಳುಗಿದ್ದ ಸ್ಥಳವನ್ನು ತೋರಿಸಲು ತಾಕೀತು ಮಾಡಿದರಲ್ಲದೆ, ತನ್ನ ಜೊತೆ ಬಂದಾತ ನೀರು ಪಾಲಾದರೂ, ಈತ ಯಾರಲ್ಲೂ ವಿಷಯ ತಿಳಿಸದೇ ಜಾಲಿ ಮೂಡಲ್ಲಿದ್ದ ಕಾರಣ ಈತನಿಗೆ ಅಲ್ಲಿ ಆಕ್ರೋಶಿತರಿಂದ ಧರ್ಮದೇಟು ಕೂಡಾ ಬಿದ್ದಿತ್ತು. ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗುಗಾರರು ಸೇರಿಕೊಂಡು ಜನಾರ್ದನ ಅವರಿಗಾಗಿ ನಿನ್ನೆ ರಾತ್ರಿಯೇ ಹುಡುಕಾಟ ನಡೆಸಿದ್ದರು. ಆದರೆ ಡಿ.೨೭ರಂದು ಬೆಳಗ್ಗೆ ನೀರಿನಲ್ಲಿ ಮುಳುಗಿದ ಸುಮಾರು ೧೦ ಮೀಟರ್ ದೂರದಲ್ಲಿ ಜನಾರ್ದನರ ಮೃತದೇಹ ಪತ್ತೆಯಾಗಿದೆ. ನೀರಾವರಿ ಯೋಜನೆಯ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣದ ಕಾಮಗಾರಿ ಇಲ್ಲಿ ನಡೆಯುತ್ತಿದ್ದುದ್ದರಿಂದ ಈ ಪರಿಸರದಲ್ಲಿ ನದಿಯಲ್ಲಿ ಕೆಸರು ತುಂಬಿ, ಅಪಾಯಕಾರಿಯಾಗಿತ್ತು.
ಮೃತ ಜನಾರ್ದನ ಹೈನುಗಾರಿಕೆ ಹಾಗೂ ಕೂಲಿ ಕಾರ್ಮಿಕರಾಗಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು. ಮೃತರು ಪತ್ನಿ ಶೀಲಾವತಿ, ಏಳನೇ ತರಗತಿ ಕಲಿಯುತ್ತಿರುವ ಪುತ್ರಿ ಯಕ್ಷಿತಾ ಹಾಗೂ ೪ನೇ ತರಗತಿ ಕಲಿಯುತ್ತಿರುವ ಪುತ್ರಿ ರಕ್ಷಿತಾರನ್ನು ಅಗಲಿದ್ದಾರೆ. ಇವರ ಪುತ್ರಿ ಯಕ್ಷಿತಾಳು ಕ್ರೀಡೆಯಲ್ಲಿ ಮುಂದಿದ್ದು, ಕೆಲದಿನಗಳ ಹಿಂದೆಯಷ್ಟೇ ರಾಷ್ಟ್ರಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಸಂತೋಷದ ನಡುವೆಯೇ ವಿಧಿ ತನ್ನ ಕ್ರೂರತೆ ಪ್ರದರ್ಶಿಸಿದ್ದು, ಇವರ ಮನೆಯ ಆಧಾರ ಸ್ತಂಭವನ್ನೇ ಕಿತ್ತುಕೊಂಡಿದೆ. ಇದರಿಂದಾಗಿ ಮನೆ ಮಂದಿ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.
ಶಾಸಕ ಹರೀಶ್ ಪೂಂಜಾ ಭೇಟಿ:
ಡಿ.೨೭ರಂದು ಬೆಳಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.