ರೋಟರಿ, ಇಂಟರ‍್ಯಾಕ್ಟ್, ಪೊಲೀಸ್, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಪೊಲೀಸರನ್ನು ಕಂಡರೆ ಭಯ ಬೇಡ, ಮಾಹಿತಿ ನೀಡಿ – ಸುನಿಲ್ ಕುಮಾರ್
ಪುತ್ತೂರು: ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕ ಸಹಕಾರವೂ ಮುಖ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಡಿಸೆಂಬರ್ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯುತ್ತಿದ್ದು, ಡಿ.28ರಂದು ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ‍್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ.ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಇದರ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಕೊಂಬೆಟ್ಟಿನಿಂದ ಪುತ್ತೂರು ಗಾಂಧಿಕಟ್ಟೆಯ ತನಕ ಜಾಗೃತಿ ಜಾಥಾವು ನಡೆಯಿತು. ಗಾಂಧಿಕಟ್ಟೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಪೊಲೀಸರನ್ನು ಕಂಡರೆ ಭಯ ಬೇಡ, ಮಾಹಿತಿ ನೀಡಿ:
ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ್ ಅವರು ಮಾತನಾಡಿ ಅಪರಾಧ ತಡೆಯುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿದರೆ ಅವರ ಮನೆಮಂದಿಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರಿಯಾಗಿ ತಿಳಿದು ಕೊಳ್ಳಿ. ಜೊತೆಗೆ ಪೊಲೀಸರನ್ನು ಕಂಡರೆ ಭಯ ಪಡದೆ ಯಾವುದೇ ಅಪರಾಧ ಆಗುವುದನ್ನು ಕಂಡರೆ ತಕ್ಷಣ ಮಾಹಿತಿ ನೀಡಿ ಎಂದು ಹೇಳಿದರು.
ಪೊಲೀಸ್ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಿ:
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಮಾತನಾಡಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಪೊಲೀಸ್ ಇಲಾಖೆಯಿಂದ ಹಲವಾರು ಸೇವೆಗಳಿವೆ. ಆದರೆ ಅವನ್ನು ಬಳಕೆ ಮಾಡುವುದರಲ್ಲಿ ಇನ್ನೂ ಸಾರ್ವಜನಿಕರು ಹಿನ್ನಡೆಯಲ್ಲಿದ್ದಾರೆ. ನಮ್ಮಲ್ಲಿ ’112’ ತುರ್ತು ವಾಹನ ಇದೆ. ಅದಕ್ಕೆ ಕರೆ ಮಾಡಿದರೆ ಕ್ಷಣದಲ್ಲೇ ಅದರಿಂದ ಸೇವೆ ಸಿಗುತ್ತದೆ. ನಿಮ್ಮ ಮೊಬೈಲ್‌ನಿಂದ ತುರ್ತು ಕರೆಯ ನಂಬರ್ ಗೊತ್ತಿಲ್ಲದಿದ್ದರೂ ಮೊಬೈಲ್ ಪೋನ್‌ನಲ್ಲಿರುವ ಪವರ್ ಬಟನನ್ನು ಮೂರು ಬಾರಿ ಪ್ರೆಸ್ ಮಾಡಿ. ಆಗ ಕರೆ ನೇರ 112ಗೆ ಹೋಗುತ್ತದೆ. ಹಾಗಾಗಿ ಪೊಲೀಸ್ ಇಲಾಖೆಯ ಹಲವು ಸೇವೆಗಳ ಕುರಿತು ಮಾಹಿತಿ ಅರಿಯಿರಿ ಎಂದರು.
ಸಂಚಾರ ನಿಯಮ ಪಾಲಿಸಿ:
ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರು ಮಾತನಾಡಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಸಂಚಾರ ನಿಮಯ ಪಾಲಿಸುವಂತೆ ವಿನಂತಿಸಿದ ಅವರು ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧ ಎಂದು ಹೇಳಿದರು.
ಕಾನೂನು ಪಾಲನೆ ಮಾಡುವಲ್ಲಿ ಗಮನ ಕೊಡಿ:
ರೋಟರಿ ಕ್ಲಬ್ ವಲಯ 5 ರ ಅಸಿಸ್ಟೆಂಟ್ ಗವರ್ನರ್ ಎ ಜಗಜೀವನ್ ದಾಸ್ ರೈ ಅವರು ಮಾತನಾಡಿ ಜನರು ಶಾಂತಿ, ನೆಮ್ಮದಿ ಮತ್ತು ಶಿಸ್ತು ಬದ್ಧವಾಗಿ ಜೀವನ ಸಾಗಿಸಿದಾಗ ಅಪರಾಧ ಆಗುವುದಿಲ್ಲ. ಕಾನೂನುನ್ನು ಪಾಲನೆ ಮಾಡುವ ಕಡೆ ಸಾರ್ವಜನಿಕರು ಗಮನ ನೀಡಬೇಕು ಎಂದರು.
ಪುತ್ತೂರು ರೋಟರಿ ವಲಯ ಸೇನಾನಿ ಡಾ| ಹರ್ಷ ಕುಮಾರ್ ರೈ ಮಾಡಾವು, ಸಂಚಾರ ಪೊಲೀಸ್ ಠಾಣೆ ಎಸ್.ಐ ಕುಟ್ಟಿ ಎಂ.ಕೆ, ರೋಟರಿ ಯುವದ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆ ಶ್ರೇಯಾ, ಕ್ಲಬ್‌ನ ಸಂಯೋಜಕರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ, ರೋಟರಿ ಪುತ್ತೂರು ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವಂದಿಸಿದರು. ರೋಟರಿ ಯುವದ ಪೂರ್ವಾಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕರ ಪತ್ರ ಹಂಚಿಕೆ
ಅಪರಾಧ ತಡೆ ಮಾಸಾಚರಣೆಯ ಸುರಕ್ಷಾ ಸಲಹೆಗಳು ಮತ್ತು ಮನೆಯಲ್ಲಿರುವಾಗ ಪಾಲಿಸಬೇಕಾದ ಸಲಹೆಗಳು, ವಾಹನ ಕಳವು ನಿಷೇಧ ಮುನ್ನೆಚ್ಚರಿಕೆ, ಸುಲಿಗೆ ನಿರೋಧಕ ಮುನ್ನೆಚ್ಚರಿಕೆ, ಪ್ರಯಾಣಿಸುವಾಗ ಪಾಲಿಸಬೇಕಾದ ಸಲಹೆಗಳು, ಸೈಬರ್ ಅಪರಾಧ ಮುನ್ನೆಚ್ಚರಿಕೆಗಳ ಮಾಹಿತಿಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆ, ಜಿಲ್ಲಾ ಕಂಟ್ರೋಲ್ ರೂಂ, ತುರ್ತು ಕರೆಯ ದೂರವಾಣಿ ಸಂಖ್ಯೆಗಳನ್ನೊಳಗೊಂಡ ಮಾಹಿತಿ ಕರ ಪತ್ರಗಳನ್ನು ಜಾಥಾದುದ್ದಕ್ಕೂ ಅಂಗಡಿ, ಸಂಸ್ಥೆಗಳಿಗೆ ಪೊಲೀಸರು ವಿತರಿಸಿದರು.