ಸೂರ್ಯ-ಕಲೆಯಲ್ಲಿ ಮೂಡಿಬಂದ ವಿಶ್ವಮಾನವ…ರಾಷ್ಟ್ರಕವಿ ಕುವೆಂಪು

0

“ವಿಶ್ವಮಾನವನಾಗಿ ಹುಟ್ಟಿದ ಮನುಷ್ಯ…ಬೆಳೆಯುತ ಅಲ್ಪಮಾನವನಾಗುತ್ತಾನೆ…ಮತ್ತೆ ಅವನನ್ನು ವಿಶ್ವಮಾನವನನ್ನಾಗಿ ಮಾಡುವುದು ಶಿಕ್ಷಣ…” ಎಂದು ಸಾರಿದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಯುಗದ ಕವಿ ಜಗದ ಕವಿ.


1904 ಡಿಸೆಂಬರ್ 29 ರಂದು ಮಲೆನಾಡಿನ ಸೆರಗು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ವೆಂಕಟಪ್ಪ ಗೌಡರು ಮತ್ತು ಸೀತಮ್ಮ ಇವರ ಭಾಗ್ಯದಾ ಬೆಳಕಾಗಿ ಮೂಡಿಬಂದರು.

ತನ್ನ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪೂರೈಸಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಮುಂದೆ ಪ್ರೌಢಶಾಲೆಯಿಂದ ಎಂ.ಎ.ಸ್ನಾತಕೋತ್ತರ ಪದವಿಯವರೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿಯೇ ಪೂರ್ಣಗೊಳಿಸಿದರು.

1929ರಲ್ಲಿ ಅದೇ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದರು ಮುಂದೆ 1955 ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ,ನಂತರ 1956 ರಲ್ಲಿ ಮೈಸೂರು ವಿದ್ಯಾನಿಲಯ ಮಾನಸಗಂಗೋತ್ರಿಯ ಕುಲಪತಿಗಳಾಗಿ ನಿವೃತ್ತರಾದರು “ವಿಶ್ವವಿದ್ಯಾನಿಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ”ಎಂಬ ಕೀರ್ತಿಗೂ ಪಾತ್ರರಾದ ಕುವೆಂಪು ಅವರ ಬದುಕು ಸಾಧನೆ ಸಾಹಿತ್ಯ ಪ್ರೇಮ ನಮಗೆಲ್ಲರಿಗೂ ಆದರ್ಶವೇ ಸರಿ.

1964ರಲ್ಲಿ ಕರ್ನಾಟಕ ರಾಜ್ಯಸರಕಾರದ ರಾಷ್ಟ್ರಕವಿ ಬಿರುದನ್ನು ಪಡೆದ ರಾಷ್ಟ್ರಕವಿ ಕುವೆಂಪು ಅವರ ಸಾಧನೆಗಳೆಲ್ಲವೂ ಪ್ರಥಮವೇ..
ಮಲೆನಾಡಿನ ಮಡಿಲಲ್ಲಿ ಆಡಿ ಹಾಡಿ ಬೆಳೆದ ಪುಟ್ಟಪ್ಪ ಅವರ ಸಾಹಿತ್ಯ ಸಾಧನೆ ಅತ್ಯಂತ ಹಿರಿದಾದುದು.

ಮಹಾಕಾವ್ಯ,ಕಾದಂಬರಿ,ನಾಟಕ,ಕವಿತೆ ಎಲ್ಲದರಲ್ಲೂ ಪರಿಸರ ಪ್ರೇಮವನ್ನು ಮೈಗೂಡಿಸಿಕೊಂಡವರು. ರಾಷ್ಟ್ರಕವಿ ಕುವೆಂಪು ಅವರು ರಸ ಋಷಿ ಮಾನ್ಯತೆ ಪಡೆದ ನಿಸರ್ಗ ಪ್ರೇಮಿಯವರು. ಸರ್ವೋದಯ,ಸಮನ್ವಯ ಪೂರ್ಣ ದೃಷ್ಠಿಯ ಬೆಳಕನ್ನು ಕಂಡ ಕುವೆಂಪು ಮನುಷ್ಯನ ವ್ಯಕ್ತಿತ್ವದ ಪ್ರತಿಪಾದಕರಾಗಿ ವಿಶ್ವಮಾನವ ಸಂದೇಶವವನ್ನು ಸಾರಿದ ಸಂತ ಕವಿಗಳಾದರು.

ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ 1968 ರಲ್ಲಿ ಕನ್ನಡದ ಪ್ರಪ್ರಥಮ “ಜ್ಞಾನಪೀಠ ಪ್ರಶಸ್ತಿ”ಯ ಗೌರವ ಪ್ರಾಪ್ತವಾಯಿತು.1968 ರಲ್ಲಿ ರಾಷ್ಟ್ರಪತಿಗಳ “ಪದ್ಮವಿಭೂಷಣ”ಪ್ರಶಸ್ತಿ ಪಡೆದ ಕುವೆಂಪು ಅವರಿಗೆ 1988ರಲ್ಲಿ ಅವರ ಮಹಾಕಾವ್ಯಕ್ಕೆ ಕರ್ನಾಟಕ ಸರಕಾರದ ಪ್ರಪ್ರಥಮ “ಪಂಪ ಪ್ರಶಸ್ತಿ”ಯೂ ಪ್ರಾಪ್ತವಾಯಿತು….ಮುಂದೆ 1992ಲ್ಲಿ ಪ್ರಥಮ “ಕರ್ನಾಟಕ ರತ್ನ”ಪುರಸ್ಕಾರದ ಸಾಹಿತ್ಯ ಪೀಠವನ್ನೂ ಅಲಂಕರಿಸಿ ಕನ್ನಡದ ರತ್ನವಾಗಿ ಶೋಭಿಸಿದರು.

ರಾಷ್ಟ್ರಕವಿ ಕುವೆಂಪು ಅವರನ್ನು ಯಾವ ಪದಗಳಿಂದಲೂ ಬಣ್ಣಿಸಲು ಸಾಧ್ಯವಿಲ್ಲ. ದೇಶ, ಭಾಷೆ, ಜಾತಿ, ಮತ, ಸಿದ್ಧಾಂತಗಳ ಎಲ್ಲೆಗಳನು ದಾಟಿದ ರಸ ಋಷಿ ಕುವೆಂಪು ಅವರ ವಿಶ್ವಮಾನವ ಸಂದೇಶ ನಮಗೆಲ್ಲ ಆದರ್ಶ.

1957 ರಲ್ಲಿ ಧಾರವಾಡದಲ್ಲಿ ಜರುಗಿದ 39 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ ಕುವೆಂಪು ವಿಶ್ವಮಾನ್ಯರು.”ಎಲ್ಲಾದರೂ ಇರು…ಎಂತಾದರೂ ಇರು…ನೀ ಕನ್ನಡವಾಗಿರು”ಎಂಬ ಅವರ ಕನ್ನಾಡಭಿಮಾನ ಕನ್ನಡಿಗರಾದ ನಮಗೆಲ್ಲ ಬಹಳ ಆದರ್ಶ.”ಜೈ ಭಾರತಜನನಿಯ ತನುಜಾತೆ ಜಯಹೇ..ಕರ್ನಾಟಕ ಮಾತೆ…”ಎಂಬ ಅವರ ನಾಡಗೀತೆ ನಮ್ಮೆಲ್ಲರನ್ನೂ ರೋಮಾಂಚನಗೊಳಿಸುತ್ತದೆ…ಸರ್ವಜನಾಂಗದ ಶಾಂತಿಯ ತೋಟದ ಸುಂದರ ಪುಷ್ಪಗಳು ನಾವಾಗಬೇಕೆಂಬ ಅವರ, ನಾಡು-ನುಡಿ ಸರ್ವೋದಯ-ಸೌಹಾರ್ದತೆಯ ದ್ಯೋತಕವಾಗಿದೆ.

ವಿಶ್ವಮಾನವ ಸಂದೇಶ ಸಾರಿದ,ಯುಗದ ಕವಿ ಜಗದ ಕವಿ ,ರಸ ಋಷಿ,ರಾಷ್ಟ್ರಕವಿ…ಅನೇಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಕರ್ನಾಟಕ ರತ್ನ .ಡಿ.9,1994ರಂದು,ತನ್ನ 90 ರ ಹರೆಯದಲ್ಲಿ ಭಗವಂತನಲ್ಲಿ ಲೀನವಾದರು.

ನಾವಿಂದು ಅವರ 118 ನೇ ಜನ್ಮದಿನವನ್ನು “ವಿಶ್ವಮಾನವ ದಿನ”ವನ್ನಾಗಿ ಆಚರಿಸುವ ಸಂಭ್ರಮದಲ್ಲಿದ್ದೇವೆ.
ಈ ಸುಸಂದರ್ಭದಲ್ಲಿ ನಮ್ಮ ನಾಡಿನ ಹೆಮ್ಮೆಯ ಚುಕ್ಕಿಚಿತ್ರ ಕಲಾವಿದರಾಗಿರುವ ಸೂರ್ಯಾಚಾರ್ ವಿಟ್ಲ ಅವರು, ವಿಶೇಷ ರೀತಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ತನ್ನ ಸಹಸ್ರಾರು ಚುಕ್ಕಿಗಳಲ್ಲಿ ಮೂಡಿಸಿ “ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರಿಗೆ ನಮನ ಸಲ್ಲಿಸಿರುತ್ತಾರೆ.

✍️ನಾರಾಯಣ ರೈ ಕುಕ್ಕುವಳ್ಳಿ.

LEAVE A REPLY

Please enter your comment!
Please enter your name here