ಜ.7: ಪರ್ಪುಂಜ ರಾಮಜಾಲು ಗರಡಿಯಲ್ಲಿ ಶ್ರೀ ಬೈದೇರುಗಳ ಜಾತ್ರೋತ್ಸವ

0

ಪುತ್ತೂರು: ಹತ್ತು ಹಲವು ಕಾರಣಿಕತೆಗಳನ್ನು ಹೊಂದಿರುವ ತುಳುನಾಡಿನ ದೈವಿಸಂಭೂತ ವೀರ ಪುರುಷರಾದ ಕೋಟಿ ಚೆನ್ನಯರು ನೆಲೆಯಾಗಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೇರುಗಳ ಜಾತ್ರೋತ್ಸವವು ಜ.7 ರಂದು ವಿಜೃಂಭಣೆಯಿಂದ ಜರಗಲಿದೆ.

ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವವು ರಾಮಜಾಲು ಗರಡಿಯಲ್ಲಿ ` ಬೈದೇರುಗಳ ಜಾತ್ರೋತ್ಸವ’ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಊರ ಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಈ ನೇಮೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನೇಮೋತ್ಸವ ನಡೆದಿದ್ದು ಈ ವರ್ಷ ಒಂದು ತಿಂಗಳು ಮುಂಚೆಯೇ ಅಂದರೆ ಹೊಸ ವರ್ಷದ ಮೊದಲ ವಾರದಲ್ಲಿ ನೇಮೋತ್ಸವ ನಡೆಯಲಿದೆ.

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಪಂಚದಶ ಸಂಭ್ರಮ ಇದಾಗಿದ್ದು ಈ ವರ್ಷವೂ ನೇಮೋತ್ಸವದೊಂದಿಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಪ್ರಧಾನ ಅಲ್ಲದೆ ಶ್ರೀ ರಾಮಜಾಲು ಗರಡಿ ಗೌರವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ ರಂಗದಲ್ಲಿ ಸಂಚಲನ ಸೃಷ್ಟಿಸಿದ ಶಿವಧೂತ ಗುಳಿಗೆ ಎಂಬ ತುಳು ನಾಟಕ ನಡೆಯಲಿದೆ.

ಭಕ್ತಾಧಿಗಳು ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ನೇಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವಗಳ ಗಂಧ ಪ್ರಸಾದ,ಅನ್ನಪ್ರಸಾದ ಸ್ವೀಕರಿಸಿ ಬೈದೇರುಗಳ ಕೃಪೆಗೆ ಪಾತ್ರರಾಗುವಂತೆ ಶ್ರೀ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here